ಹೈಕೋರ್ಟ್ ಆದೇಶಕ್ಕೂ ಅಧಿಕಾರಿಗಳು ಡೋಂಟ್ ಕೇರ್..!

KannadaprabhaNewsNetwork |  
Published : Oct 13, 2025, 02:00 AM IST
೧೦ಕೆಎಂಎನ್‌ಡಿ-೬ಶ್ರೀರಂಗಪಟ್ಟಣ ತಾಲೂಕು ಕಿರಂಗೂರು ಗ್ರಾಮದಲ್ಲಿರುವ ಶ್ರೀರಾಮ ದೇಗುಲ. | Kannada Prabha

ಸಾರಾಂಶ

ಹೈಕೋರ್ಟ್ ಆದೇಶವನ್ನು ಪಾಲನೆ ಮಾಡಬೇಕಾದ ಶ್ರೀರಂಗಪಟ್ಟಣ ತಹಸೀಲ್ದಾರ್ ಒಳಗೊಂಡಂತೆ ಮುಜರಾಯಿ ತಹಸೀಲ್ದಾರ್ ಮತ್ತು ಅಧಿಕಾರಿಗಳು ಎಲ್ಲೋ ಒಂದು ಕಡೆ ಸರ್ಕಾರಿ ಮುಜರಾಯಿ ಇಲಾಖೆ ದೇವಾಲಯ ಮತ್ತು ಆಸ್ತಿಗಳನ್ನು ಸಂರಕ್ಷಣೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಶ್ರೀರಂಗಪಟ್ಟಣ ತಾಲೂಕು ಕಿರಂಗೂರು ಗ್ರಾಮದ ಶ್ರೀರಾಮಮಂದಿರ ದೇವಾಲಯದ ಸ್ಥಿರ-ಚರಾಸ್ತಿಯನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವಂತೆ ರಾಜ್ಯ ಉಚ್ಛ ನ್ಯಾಯಾಲಯ ಆದೇಶ ನೀಡಿದ್ದರೂ ಅಧಿಕಾರಿಗಳು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ ಎಂದು ರೈತ ಮುಖಂಡ ಕಿರಂಗೂರು ಪಾಪು ಆರೋಪಿಸಿದ್ದಾರೆ.

ನ್ಯಾಯಾಲಯದ ಆದೇಶದ ಮೇರೆಗೆ ಜಿಲ್ಲಾಧಿಕಾರಿ ಓಎಂ (ಕಚೇರಿ ಸೂಚನೆ) ಹಾಕಿ ಜಿಲ್ಲಾ ಮತ್ತು ತಾಲೂಕು ಆಡಳಿತದೊಂದಿಗೆ ತಂಡ ರಚನೆ ಮಾಡಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ವಶಕ್ಕೆ ಪಡೆದು ಪಡೆಯುವಂತೆ ಸೂಚನೆ ನೀಡಲಾಗಿದೆ. ಆದರೆ, ಅಧಿಕಾರಿಗಳು ಅಕ್ರಮವಾಗಿ ದೇವಾಲಯದಲ್ಲಿರುವ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ರಾಜಕೀಯ ಒತ್ತಡಕ್ಕೆ ಮಣಿದು ದೇವಾಲಯವನ್ನು ವಶಕ್ಕೆ ತೆಗೆದುಕೊಳ್ಳಲು ಹೋದ ತಂಡ ಮತ್ತೆ ಎರಡು ದಿನಗಳ ಕಾಲ ಗಡುವು ನೀಡಿ ವಾಪಸ್ಸಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ದೂರಿದ್ದಾರೆ.

ಹೈಕೋರ್ಟ್ ಆದೇಶವನ್ನು ಪಾಲನೆ ಮಾಡಬೇಕಾದ ಶ್ರೀರಂಗಪಟ್ಟಣ ತಹಸೀಲ್ದಾರ್ ಒಳಗೊಂಡಂತೆ ಮುಜರಾಯಿ ತಹಸೀಲ್ದಾರ್ ಮತ್ತು ಅಧಿಕಾರಿಗಳು ಎಲ್ಲೋ ಒಂದು ಕಡೆ ಸರ್ಕಾರಿ ಮುಜರಾಯಿ ಇಲಾಖೆ ದೇವಾಲಯ ಮತ್ತು ಆಸ್ತಿಗಳನ್ನು ಸಂರಕ್ಷಣೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಮುಜರಾಯಿ ದೇವಾಲಯಕ್ಕೆ ಬರುವ ಆದಾಯದ ಹುಂಡಿ ಹಣವನ್ನು ಎಣಿಸುವುದಕ್ಕೆ ಮಾತ್ರ ಅಧಿಕಾರಿ, ಸಿಬ್ಬಂದಿ ಆತುರಕ್ಕೆ ಮುಂದಾಗುತ್ತಾರೆ. ಆದರೆ, ದೇವಾಲಯದ ಆಸ್ತಿಯನ್ನು ಸಂರಕ್ಷಣೆ ಮಾಡುವುದು, ವಶಕ್ಕೆ ಪಡೆಯುವುದು, ಅದಕ್ಕೆ ಸಂಬಂಧಿಸಿದ ನ್ಯಾಯಾಲಯಗಳಲ್ಲಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ಹಾಗೂ ಕೆಲವು ಖಾಸಗಿ ಟ್ರಸ್ಟ್‌ಗಳೊಂದಿಗೆ ಶಾಮೀಲಾಗಿ ಎಲ್ಲಾ ದಾಖಲೆಗಳು ಸರ್ಕಾರ ಮತ್ತು ದೇವಾಲಯದ ಪರವಾಗಿದ್ದರೂ, ತೆರವು ಮಾಡಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿಗಳು ಉಚ್ಚ ನ್ಯಾಯಾಲಯದ ಆದೇಶದಂತೆ ಈವರೆವಿಗೂ ಶ್ರೀರಾಮ ದೇವಾಲಯವನ್ನು ವಶಕ್ಕೆ ಪಡೆಯದೆ ಮತ್ತೆ ಖಾಸಗಿಯವರಿಗೆ ಅವಕಾಶ ಕೊಟ್ಟಿದ್ದು ಏಕೆ ಎಂದು ಪ್ರಶ್ನಿಸಿರುವ ಅವರು, ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ದೇವಾಲಯ ತೆರವಿಗೆ ಒಎಂ ಹಾಕಿರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ತಪ್ಪಿದ್ದಲ್ಲಿ ನಾವು ಉಚ್ಛ ನ್ಯಾಯಾಲಯದ ಆದೇಶದನ್ವಯ ಜರೂರಾಗಿ ವಶಕ್ಕೆ ಪಡೆಯದಿದ್ದರೆ ಜಿಲ್ಲಾಡಳಿತ ಮತ್ತು ಮೇಲ್ಕಂಡ ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಕಿರಂಗೂರು ಪಾಪು ಅವರು ಎಚ್ಚರಿಸಿದ್ದಾರೆ.

ದೇವಸ್ಥಾನವನ್ನು ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಲು ಬಂದ ಅಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!