ದುಷ್ಟಶಕ್ತಿಗಳಿಂದ ಆರ್‌ಎಸ್‌ಎಸ್‌ ಬ್ಯಾನ್‌ ಅಸಾಧ್ಯ: ಶಾಸಕ ಯತ್ನಾಳ್‌

KannadaprabhaNewsNetwork |  
Published : Oct 13, 2025, 02:00 AM IST
12ಕೆಎಂಎನ್‌ಡಿ-4ಮದ್ದೂರು ತಾಲೂಕು ನಿಡಘಟ್ಟ ಬಳಿಗೆ ಆಗಮಿಸಿದ ವಿಜಯನಗರ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಬಜರಂಗಸೇನೆ ಕಾರ್ಯಕರ್ತರು ಸ್ವಾಗತಿಸಿ ಅಭಿನಂದಿಸಿದರು.  | Kannada Prabha

ಸಾರಾಂಶ

ಜವಹರಲಾಲ್ ನೆಹರು ಕಾಲದಿಂದ ಇಲ್ಲಿವರೆಗೆ ಆರ್‌ಎಸ್‌ಎಸ್ ಬ್ಯಾನ್ ಮಾಡಲು ವ್ಯವಸ್ಥಿತ ಸಂಚು ನಡೆಯುತ್ತಿದೆ. ಆದರೆ, ಇಲ್ಲಿಯವರೆಗೆ ಸಂಘಟನೆಯನ್ನು ನಿಷೇಧಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಈಗ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ ಮಾತ್ರಕ್ಕೆ ನಿಷೇಧವಾಗುವುದಿಲ್ಲ.

ಕನ್ನಡಪ್ರಭ ವಾರ್ತೆ ಮದ್ದೂರು

ದೇಶ ಭಕ್ತ ಸಂಘಟನೆಯಾದ ಆರ್‌ಎಸ್‌ಎಸ್‌ ಬ್ಯಾನ್ ಮಾಡಲಿಕ್ಕೆ ಯಾವುದೇ ದುಷ್ಟಶಕ್ತಿಗಳಿಂದ ಸಾಧ್ಯವಿಲ್ಲ. ಸೂರ್ಯ - ಚಂದ್ರ ಇರುವವರೆಗೂ ದೇಶದಲ್ಲಿ ಸಂಘಟನೆ ಅಸ್ತಿತ್ವದಲ್ಲಿರುತ್ತದೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಸರ್ಕಾರಿ ಸ್ಥಳದಲ್ಲಿ ಆರ್‌ಎಸ್‌ಎಸ್‌ ಬ್ಯಾನ್ ಗೆ ಸೂಚನೆ ನೀಡಿರುವ ಕುರಿತು ಭಾನುವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಮುಸ್ಲಿಂಮರನ್ನು ಖುಷಿಪಡಿಸಲು ಇಂತಹ ಬಾಲಿಷ ಹೇಳಿಕೆಗಳನ್ನು ನೀಡುತ್ತಿದೆ ಎಂದು ಕಿಡಿಕಾರಿದರು.

ಜವಹರಲಾಲ್ ನೆಹರು ಕಾಲದಿಂದ ಇಲ್ಲಿವರೆಗೆ ಆರ್‌ಎಸ್‌ಎಸ್ ಬ್ಯಾನ್ ಮಾಡಲು ವ್ಯವಸ್ಥಿತ ಸಂಚು ನಡೆಯುತ್ತಿದೆ. ಆದರೆ, ಇಲ್ಲಿಯವರೆಗೆ ಸಂಘಟನೆಯನ್ನು ನಿಷೇಧಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಈಗ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ ಮಾತ್ರಕ್ಕೆ ನಿಷೇಧವಾಗುವುದಿಲ್ಲ ಎಂದು ದೃಢವಾಗಿ ಹೇಳಿದರು.

ದೇಶದ ವಿರೋಧಿಗಳು ಆರ್‌ಎಸ್‌ಎಸ್ ನಿಷೇಧಕ್ಕೆ ಮುಂದಾದಾಗ ನ್ಯಾಯಾಲಯದಲ್ಲಿ ಸಾಕಷ್ಟು ವಿಚಾರಣೆಗಳು ನಡೆದಿವೆ. ತೀರ್ಪುಗಳೂ ಬಂದಿವೆ. ಸ್ವತಃ ಮಾಜಿ ಪ್ರಧಾನಿ ನೆಹರು ಅವರಿಂದಲೂ ನಿಷೇಧ ಮಾಡಲು ಸಾಧ್ಯವಾಗಿಲ್ಲ. ಕಾನೂನಿನಲ್ಲಿ ಇದಕ್ಕೆ ಅವಕಾಶ ಕೊಡಲಿಲ್ಲ ಎಂದರು.

ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣದಲ್ಲಿ ಕಾಂಗ್ರೆಸ್‌ ಸರ್ಕಾರದ ಒತ್ತಡಕ್ಕೆ ಮಣಿದು ಅಮಾಯಕ 500 ಹಿಂದುಗಳ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದು ನೂರಕ್ಕೆ ನೂರರಷ್ಟು ಸತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ಎಲ್ಲಿಯೂ ಮುಸ್ಲಿಂ ಹಬ್ಬಗಳಲ್ಲಿ ಹಿಂದೂಗಳು ಕಲ್ಲು ಎಸೆಯುವುದಿಲ್ಲ. ಕಲ್ಲು ಹಾಕುವುದು ನಮ್ಮ ಸಂಸ್ಕೃತಿಯಲ್ಲ. ಇಂತಹ ಸಂಸ್ಕೃತಿ ಇರುವುದು ಮುಸ್ಲಿಂ ಸಮುದಾಯಗಳಲ್ಲಿ ಮಾತ್ರ. ಪೊಲೀಸರ ವರದಿಯಲ್ಲಿ ಮದ್ದೂರಿನ ಘಟನೆ ವ್ಯವಸ್ಥಿತ ಚಟುವಟಿಕೆ ಎಂಬುದು ತಿಳಿದುಬಂದಿದೆ ಎಂದರು.

ಮುಸ್ಲಿಮರಿಗೆ ಹಿಂದೂಗಳ ಜಾತ್ರೆ, ಹಬ್ಬ, ಹರಿದಿನಗಳು, ಗಣಪತಿ, ಶಿವಾಜಿ ಮಹಾರಾಜ್, ನಾಡದೇವತೆಗಳ ಉತ್ಸವದ ವೇಳೆ ಕಲ್ಲು ಎಸೆಯುವುದು ರೂಢಿಯಾಗಿದೆ. ಆದರೆ, ಪೊಲೀಸರು ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಕೇಸು ದಾಖಲಿಸುವುದಿಲ್ಲ. ಅಮಾಯಕರ ಮೇಲೆ ಕೇಸು ದಾಖಲಿಸುತ್ತಾರೆ ಎಂದು ಗುಡುಗಿದರು.

ಈ ಹಿಂದೆ ನಮ್ಮ ಸರ್ಕಾರ ಯಾವುದೇ ಪೊಲೀಸರನ್ನು ಹದ್ದುಬಸ್ತಿನಲ್ಲಿ ಇಡುವ ಕೆಲಸ ಮಾಡಿಲ್ಲ. ಆದರೂ ಬಿಜೆಪಿಯನ್ನು ಸೋಲಿಸಲಾಯಿತು. ಕಾಂಗ್ರೆಸ್ ಆಡಳಿತದಲ್ಲಿ ಪೊಲೀಸರು ಸರ್ಕಾರದ ಗುಲಾಮರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

PREV

Recommended Stories

ಬಂಡಿಗಣಿಯಲ್ಲಿಂದು ಸರ್ವಧರ್ಮ ಮಹಾಸಂಗಮ: ಸಿಎಂ ಭಾಗಿ
ಆರೆಸ್ಸೆಸ್‌ ಬೆಳವಣಿಗೆ ಕೆಲ ಶಕ್ತಿ, ಸಂಘಟನೆಗಳಿಗೆ ಸಹಿಸಲಾಗ್ತಿಲ್ಲ: ಅರುಣಕುಮಾರ