ಮತ ಚೋರಿ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ: ಶಾಸಕ ಪಿ.ಎಂ.ನರೇಂದ್ರಸ್ವಾಮಿ

KannadaprabhaNewsNetwork |  
Published : Oct 13, 2025, 02:00 AM IST
೧೨ಕೆಎಂಎನ್‌ಡಿ-೧ಮಳವಳ್ಳಿ ಪಟ್ಟಣದ ಮಂಡ್ಯ ಸರ್ಕಲ್‌ನಲ್ಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮತಚೋರಿ ಕುರಿತ ಸಹಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡಿರುವುದು. | Kannada Prabha

ಸಾರಾಂಶ

ಒಂದೊಂದು ಮನೆಯಲ್ಲಿ ನೂರಾರು ಮತದಾರರನ್ನು ಸೃಷ್ಟಿಸಲಾಗಿದೆ. ನಿಜವಾದ ಮತದಾರರನ್ನು ತೆಗೆದುಹಾಕಲಾಗಿದೆ. ಯಾರ ಅರಿವಿಗೂ ಬಾರದಂತೆ ಮತದಾರರ ಪಟ್ಟಿಯನ್ನು ಷಡ್ಯಂತ್ರದೊಂದಿಗೆ ತಿರುಚಿದ್ದಾರೆ. ಇದೆಲ್ಲವನ್ನೂ ರಾಹುಲ್‌ಗಾಂಧಿ ಅವರು ಬಯಲಿಗೆಳೆಯುವ ಮೂಲಕ ಪ್ರಜಾಪ್ರಭುತ್ವ ರಕ್ಷಣೆಗೆ ಹೋರಾಡುತ್ತಿದ್ದಾರೆ. ಅವರ ಹೋರಾಟಕ್ಕೆ ನಾವೆಲ್ಲರೂ ಬೆಂಬಲವಾಗಿ ನಿಲ್ಲಬೇಕಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಮತ ಕಳವು ಎನ್ನುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಮತ ಕಳವಿಗೆ ಸಂಬಂಧಿಸಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಕ್ಷಿ ದೊರಕಿದೆ. ಮತದಾರರ ಪಟ್ಟಿಯನ್ನು ಯಾರ ಅರಿವಿಗೂ ಬಾರದಂತೆ ತಿರುಚುತ್ತಿದ್ದಾರೆ. ಅದನ್ನು ರಾಹುಲ್‌ಗಾಂಧಿ ಸಾಕ್ಷಿ ಸಮೇತ ಸಾಬೀತುಪಡಿಸಿದ್ದು, ಬಿಹಾರ ಚುನಾವಣೆ ಮೂಲಕ ದೇಶದಲ್ಲಿ ಹೊಸ ಕ್ರಾಂತಿ ಸೃಷ್ಟಿಯಾಗಲಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಭವಿಷ್ಯ ನುಡಿದರು.

ಪಟ್ಟಣದ ಮಂಡ್ಯ ವೃತ್ತದಲ್ಲಿ ಮಳವಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ವೋಟ್ ಚೋರಿ ಕುರಿತು ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಭಾರತ ಪ್ರಜಾಸತ್ತಾತ್ಮಕ ನ್ಯಾಯಕ್ಕೆ ಚುನಾವಣೆ ಪ್ರಮುಖವಾದ ಅಂಶ. ಪ್ರಜಾಪ್ರಭುತ್ವದ ಬುನಾದಿಯಡಿ ಚುನಾವಣೆ ನಡೆಯುತ್ತಿದೆ. ಚುನಾವಣಾ ಆಯೋಗ ಆಡಳಿತಾರೂಢ ಪಕ್ಷದ ಅಣತಿಯಂತೆ ನಡೆಯುತ್ತಿರುವುದು ಅಪಾಯಕಾರಿ ಸಂಗತಿ. ವಿವಿಧ ರಾಜ್ಯ, ಜಿಲ್ಲೆ, ಕ್ಷೇತ್ರಗಳಲ್ಲಿ ಮತದಾರರ ಪಟ್ಟಿ ವೈಫಲ್ಯ ಕಂಡಿರುವುದು ಸಾಬೀತಾಗಿದೆ ಎಂದರು.

ಒಂದೊಂದು ಮನೆಯಲ್ಲಿ ನೂರಾರು ಮತದಾರರನ್ನು ಸೃಷ್ಟಿಸಲಾಗಿದೆ. ನಿಜವಾದ ಮತದಾರರನ್ನು ತೆಗೆದುಹಾಕಲಾಗಿದೆ. ಯಾರ ಅರಿವಿಗೂ ಬಾರದಂತೆ ಮತದಾರರ ಪಟ್ಟಿಯನ್ನು ಷಡ್ಯಂತ್ರದೊಂದಿಗೆ ತಿರುಚಿದ್ದಾರೆ. ಇದೆಲ್ಲವನ್ನೂ ರಾಹುಲ್‌ಗಾಂಧಿ ಅವರು ಬಯಲಿಗೆಳೆಯುವ ಮೂಲಕ ಪ್ರಜಾಪ್ರಭುತ್ವ ರಕ್ಷಣೆಗೆ ಹೋರಾಡುತ್ತಿದ್ದಾರೆ. ಅವರ ಹೋರಾಟಕ್ಕೆ ನಾವೆಲ್ಲರೂ ಬೆಂಬಲವಾಗಿ ನಿಲ್ಲಬೇಕಿದೆ ಎಂದರು.

ಎನ್‌ಡಿಎ ಸರ್ಕಾರ ಹಾಗೂ ಬಿಜೆಪಿಗೆ ಸಾಮಾಜಿಕ ನ್ಯಾಯ ಬೇಕಿಲ್ಲ. ಮನುವಾದದ ತಳಹದಿಯ ಮೇಲೆ ಆಡಳಿತ ನಡೆಸುತ್ತಿದ್ದಾರೆ. ಅವರಿಗೆ ತಕ್ಕ ತಿರುಗೇಟು ನೀಡಬೇಕಿದೆ. ಕೆಲವರು ಅಸ್ತಿತ್ವಕ್ಕಾಗಿ ಬಿಜೆಪಿಯನ್ನು ತಬ್ಬಿಕೊಂಡಿದ್ದಾರೆ. ಜನರನ್ನು ಯಾಮಾರಿಸಿಯಾದವರೂ ಅವರೊಂದಿಗೆ ಕೈಜೋಡಿಸಿದ್ದಾರೆ ಎಂದು ಟೀಕಿಸಿದರು.

ರಾಹುಲ್‌ಗಾಂಧಿ ಸಂಸತ್ತಿನಲ್ಲಾಗಲೀ, ರ್ಯಾಲಿಯಲ್ಲಾಗಲೀ, ಚಳವಳಿಗಳಲ್ಲಾಗಲೀ ಎಲ್ಲಿಯೂ ಸುಳ್ಳು ಹೇಳಿದವರಲ್ಲ. ಸತ್ಯವನ್ನೇ ಹೇಳುತ್ತಾ ಪ್ರಜಾಪ್ರಭುತ್ವದ ಉಳಿವಿಗೆ ಹೋರಾಡುತ್ತಿದ್ದಾರೆ. ಅದಕ್ಕಾಗಿಯೇ ಮತಕಳವಿನ ಬಗ್ಗೆ ದೇಶಾದ್ಯಂತ ಜನರ ಸಹಿಸಂಗ್ರಹ ಮಾಡುವಂತೆ ಸೂಚಿಸಿದ್ದಾರೆ. ಜನರು ಇದನ್ನು ಅರ್ಥಮಾಡಿಕೊಂಡು ಹೋರಾಟವನ್ನು ಬೆಂಬಲಿಸಬೇಕು ಎಂದರು.

ಮತಚೋರಿಯನ್ನು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಕೂಡ ಒಪ್ಪಿದ್ದಾರೆ. ಎನ್‌ಡಿಎ ಸರ್ಕಾರದ ಕುತಂತ್ರಗಳಿಗೆಲ್ಲಾ ಬಿಹಾರ ಚುನಾವಣೆ ಮೂಲಕ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ. ಅಲ್ಲಿಂದಲೇ ದೇಶದಲ್ಲಿ ಹೊಸ ಕ್ರಾಂತಿ ಸೃಷ್ಟಿಯಾಗುವುದು ಎಂದರು.

ರಾಹುಲ್ ಗಾಂಧಿ ಅವರ ಸೂಚನೆಯಂತೆ ಪ್ರತಿ ಬೂತ್‌ನಿಂದ ೨ ಸಾವಿರ ಸಹಿ ಸಂಗ್ರಹಿಸಲಾಗುವುದು. ಜನರಲ್ಲಿ ಜಾಗೃತಿಯನ್ನು ಮೂಡಿಸಲಾಗುವುದು. ಹೇಗೆಲ್ಲಾ ಮತ ಕಳವು ನಡೆಯುತ್ತಿದೆ ಎಂಬುದನ್ನು ಅಭಿಯಾನದ ಮೂಲಕ ದೇಶದ ಜನರಿಗೆ ತಿಳಿಸಿಕೊಡಲಾಗುವುದು. ಭವಿಷ್ಯದಲ್ಲಿ ಕಾಂಗ್ರೆಸ್‌ನ್ನು ರಾಷ್ಟ್ರದಲ್ಲಿ ಅಧಿಕಾರಕ್ಕೆ ತರುವುದಕ್ಕೆ ಜನರು ಸಂಕಲ್ಪ ಮಾಡಿದ್ದಾರೆ ಎಂದು ವಿಶ್ವಾಸದಿಂದ ನುಡಿದರು.

ಬ್ಲಾಕ್ ಕಾಂಗ್ರೆಸ್ ಮುಖಂಡ ದೊಡ್ಡಯ್ಯ ಮಾತನಾಡಿ, ಬಿಜೆಪಿ ದೇಶದಲ್ಲಿ ಅಧಿಕಾರಕ್ಕೆ ಬರುತ್ತಿರುವ ಮರ್ಮವನ್ನು ರಾಹುಲ್‌ಗಾಂಧಿ ಅವರು ಬಯಲಿಗೆಳೆದಿದ್ದಾರೆ. ಇಂತಹದೊಂದು ಧೈರ್ಯವನ್ನು ಇದುವರೆಗೂ ಯಾರೂ ಮಾಡಿರಲಿಲ್ಲ. ಅವರೊಬ್ಬ ಜನಪರವಾದ ರಾಜಕಾರಣಿ. ಅವರ ನಾಯಕತ್ವ ದೇಶಕ್ಕೆ ಅಗತ್ಯವಿದೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಘಟಕದ ಮಹಿಳಾಧ್ಯಕ್ಷೆ ಸುಷ್ಮಾ ಮಾತನಾಡಿ, ಎಲೆಕ್ಟ್ರಾನಿಕ್ ವೋಟಿಂಗ್ ಮಿಷನ್ ಬಗ್ಗೆ ಹಿಂದಿನಿಂದಲೂ ಅನುಮಾನಗಳು ವ್ಯಕ್ತವಾಗುತ್ತಲೇ ಇವೆ. ಅದರ ಬಗ್ಗೆ ಸ್ಪಷ್ಟನೆ ನೀಡುವಲ್ಲಿ ಕೇಂದ್ರ ಸರ್ಕಾರ, ಚುನಾವಣಾ ಆಯೋಗ ವಿಫಲವಾಗಿದೆ. ಇದೀಗ ಮತಪಟ್ಟಿ ದೋಷಪೂರಿತವಾಗಿರುವುದು ಕಂಡುಬರುತ್ತಿರುವುದರಿಂದ ಮತಯಂತ್ರದ ಜಾಗದಲ್ಲಿ ಬ್ಯಾಲೆಟ್ ಪೇಪರ್ ತರುವಂತೆ ಒತ್ತಾಯಿಸಿದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಿಂದ ಮಂಡ್ಯ ಸರ್ಕಲ್‌ವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಆಗಮಿಸಿದರು. ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಚಿಕ್ಕಲಿಂಗೇಗೌಡ, ಮನ್‌ಮುಲ್ ನಿರ್ದೇಶಕರಾದ ಕೃಷ್ಣೇಗೌಡ, ಆರ್.ಎನ್.ವಿಶ್ವಾಸ್, ಬ್ಲಾಕ್ ಕಾಂಗ್ರೆಸ್ ಮುಖಂಡ ಸಿ.ಪಿ.ರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಲಿಂಗರಾಜು, ನಿರ್ದೇಶಕರಾದ ದೇವರಾಜು, ದಿಲೀಪ್‌ಗೌಡ, ಮಹದೇವು, ಮನು, ಮಾದಯ್ಯ, ಮುಖಂಡರಾದ ಚೌಡಯ್ಯ, ಸಂತೋಷ್, ರಾಮಕೃಷ್ಣ, ಶಿವಕುಮಾರ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು