ಕನ್ನಡಪ್ರಭ ವಾರ್ತೆ ತುರುವೇಕೆರೆ
ಕಳೆದ ಮೂವತ್ತು ವರ್ಷಗಳ ಹಿಂದೆ ತಮ್ಮೂರಿನಲ್ಲಿ ಪ್ರಾರಂಭಗೊಂಡಿದ್ದ ಶ್ರೀ ವಿದ್ಯಾನಿಧಿ ಪ್ರೌಢಶಾಲೆ ಮುಚ್ಚಿಹೋಗಿ ಏಳೆಂಟು ವರ್ಷಗಳೇ ಸಂದಿದೆ. ಆದರೂ ಸಹ ಆ ಶಾಲೆಯಲ್ಲಿ ಓದಿದ್ದ ನೂರಾರು ವಿದ್ಯಾರ್ಥಿಗಳು ತಮಗೆ ವಿದ್ಯೆ ಕಲಿಸಿದ ಗುರುಗಳಿಗೆ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಇತರರಿಗೆ ಮಾದರಿಯಾದರು. ಗುರುವಂದನಾ ಕಾರ್ಯಕ್ರಮದ ಅಂಗವಾಗಿ ಕೊಂಡಜ್ಜಿ ಗ್ರಾಮವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಹಲವಾರು ಬೀದಿಗಳಲ್ಲಿ ಮಹಿಳೆಯರು ರಂಗೋಲಿ ಬಿಟ್ಟು ತಮ್ಮ ಗುರುಗಳನ್ನು ನೋಡುವ ತವಕದಲ್ಲಿದ್ದರು. ತಮ್ಮ ಗ್ರಾಮಕ್ಕೆ ಗುರುಗಳು ಬರುತ್ತಲೇ ಎಲ್ಲಾ ವಿದ್ಯಾರ್ಥಿಗಳು ಗುರುಗಳ ಆಶೀರ್ವಾದ ಪಡೆದರು. ತದ ನಂತರ ಎಲ್ಲಾ ಗುರುಗಳನ್ನು ಸುವರ್ಣ ರಥದ ಮೇಲೆ ಕುಳ್ಳಿರಿಸಿ ಜಾನಪದ ಕಲಾ ಮೇಳ, ವೀರಗಾಸೆ ಕುಣಿತ, ಸಿಡಿಮದ್ದಿನ ಸಡಗರದೊಂದಿಗೆ ತಮ್ಮ ಗ್ರಾಮದ ಎಲ್ಲಾ ರಸ್ತೆಗಳಲ್ಲೂ ಗುರುಗಳಿಗೆ ಜಯಘೋಷ ಹಾಕುತ್ತಾ ಭವ್ಯ ಮೆರವಣಿಗೆ ಮಾಡಿದರು. ವೇದಿಕೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಂಡಾಯ ಸಾಹಿತಿ, ಪ್ರೊ.ಕೃಷ್ಣಮೂರ್ತಿ ಬೆಳಗೆರೆ ಗುರುಹಿರಿಯರನ್ನು ಗೌರವಿಸುವ ಪರಿಪಾಠ ಬೆಳೆಸಿಕೊಂಡರೆ ನಿಮ್ಮ ಜೀವನ ಸಾರ್ಥಕತೆಯನ್ನು ಪಡೆಯುತ್ತದೆ. ನಾವು ಹೇಗೆ ವರ್ತಿಸುತ್ತೇವೆಯೋ, ಹಾಗೆಯೇ ನಮ್ಮ ಮಕ್ಕಳೂ ಸಹ ಅದನ್ನು ಅನುಕರಿಸುತ್ತವೆ. ನಾವು ಗುರು ಹಿರಿಯರಿಗೆ ಗೌರವ ನೀಡುವ ಸಂಸ್ಕಾರವನ್ನು ರೂಢಿಸಿಕೊಂಡರೆ ನಮ್ಮ ಮಕ್ಕಳೂ ಸಹ ಅದನ್ನೇ ಅನುಕರಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಂಡಜ್ಜಿ ವಿಶ್ವನಾಥ್ ಮಾತನಾಡಿ ಇದೊಂದು ಆದರ್ಶಮಯ ಕಾರ್ಯಕ್ರಮ. ಹಿರಿಯ ವಿದ್ಯಾರ್ಥಿಗಳು ಮಾಡಿರುವ ಈ ಕಾರ್ಯಕ್ರಮದಿಂದ ನಮ್ಮ ಗ್ರಾಮಕ್ಕೆ ಗೌರವ ಹೆಚ್ಚಾಗಿದೆ. ಗುರುವಂದನಾ ಕಾರ್ಯಕ್ರಮವನ್ನು ನಮ್ಮ ಗ್ರಾಮಸ್ಥರೆಲ್ಲಾ ಊರಹಬ್ಬದಂತೆ ಆಚರಿಸಿ ಸಂಭ್ರಮಿಸಿದ್ದಾರೆಂದು ಮುಕ್ತಕಂಠದಿಂದ ಪ್ರಸಂಶಿಸಿದರು.ಗುರುಗಳಾದ ವೀರಪ್ಪಯ್ಯ, ಶಿವಬಸಪ್ಪ, ಕುಮಾರಸ್ವಾಮಿ, ಧರ್ಮಪ್ಪ, ಕಾಳೇಗೌಡರ್, ಮೋಕ್ಷಾ, ವೇದಾವತಿ, ಜಯರಾಮ್, ಚಂದ್ರಪ್ಪ, ಸದಾಶಿವಯ್ಯ, ರಾಜಶೇಖರ್, ಶಿವಶಂಕರಪ್ಪ, ನರಸಿಂಹರಾಜು, ಜಯ್ಯಣ್ಣ, ತಿಮ್ಮಯ್ಯ, ಶಿವಣ್ಣ, ಕೆ.ಬಿ.ರಾಜಣ್ಣ, ರಾಮೇಗೌಡ ಸೇರಿದಂತೆ ಶಾಲೆಯಲ್ಲಿ ಸೇವೆಸಲ್ಲಿಸಿದ್ದ ಶಾಲಾ ಸಿಬ್ಬಂದಿಯನ್ನೂ ಸಹ ಹಿರಿಯ ವಿದ್ಯಾರ್ಥಿಗಳು ಗೌರವಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೀಲಾ ನವೀನ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಗುರುವಂದನಾ ಕಾರ್ಯಕ್ರಮದ ಅಂಗವಾಗಿ ಗ್ರಾಮದ ಎಲ್ಲರಿಗೂ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಹೋಳಿಗೆ ಊಟ ಹಾಕಿಸಿ ಸಂಭ್ರಮಿಸಲಾಯಿತು. ಮೋಹನ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಚರಣ್ ಸ್ವಾಗತಿಸಿದರು. ಪುಷ್ಪಾ ನಿರೂಪಿಸಿದರು. ನಂದೀಶ್ ವಂದಿಸಿದರು. .