ಕನ್ನಡ ಸಿನೆಮಾ ರಂಗಕ್ಕೆ ಸಾಹಿತ್ಯ ಲೋಕ ಬೆನ್ನೆಲುಬು : ಹಿರಿಯ ನಿರ್ದೇಶಕ ಡಾ.ರಾಜೇಂದ್ರಸಿಂಗ್‌ ಬಾಬು

KannadaprabhaNewsNetwork |  
Published : Dec 24, 2024, 01:32 AM ISTUpdated : Dec 24, 2024, 08:00 AM IST
GAS 3 | Kannada Prabha

ಸಾರಾಂಶ

ಕನ್ನಡ ಚಿತ್ರರಂಗಕ್ಕೆ ಸಾಹಿತ್ಯಲೋಕ ಬೆನ್ನೆಲುಬಾಗಿ ನೆರಳಿನಂತೆ ಇರಬೇಕು. ಆಗ ಮಾತ್ರ ಚಿತ್ರರಂಗದ ಗತ ವೈಭವ ಮರುಕಳಿಸಲು ಸಾಧ್ಯ ಎಂದು ಹಿರಿಯ ನಿರ್ದೇಶಕ ಡಾ.ರಾಜೇಂದ್ರಸಿಂಗ್‌ ಬಾಬು ಅಭಿಪ್ರಾಯಪಟ್ಟರು.

  ಬೆಂಗಳೂರು :  ಕನ್ನಡ ಚಿತ್ರರಂಗಕ್ಕೆ ಸಾಹಿತ್ಯಲೋಕ ಬೆನ್ನೆಲುಬಾಗಿ ನೆರಳಿನಂತೆ ಇರಬೇಕು. ಆಗ ಮಾತ್ರ ಚಿತ್ರರಂಗದ ಗತ ವೈಭವ ಮರುಕಳಿಸಲು ಸಾಧ್ಯ ಎಂದು ಹಿರಿಯ ನಿರ್ದೇಶಕ ಡಾ.ರಾಜೇಂದ್ರಸಿಂಗ್‌ ಬಾಬು ಅಭಿಪ್ರಾಯಪಟ್ಟರು.

ಸೋಮವಾರ ನಗರದ ಕೆ.ಆರ್‌.ವೃತ್ತದ ಸಮೀಪವಿರುವ ಸರ್ಕಾರಿ ಕಲಾ ಕಾಲೇಜಿನಲ್ಲಿ ನಾಡೋಜ ಡಾ.ಬರಗೂರು ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಡೋಜ ಬರಗೂರು ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಕನ್ನಡದ ಪುಸ್ತಕಗಳು ಸಿನಿಮಾ ಆದಾಗಲೆಲ್ಲ ದಾಖಲೆ ಬರೆದಿವೆ. ನಾಗರ ಹಾವು, ಬಂಗಾರದ ಮನುಷ್ಯ, ಬಂಧನ ಹೀಗೆ ಪಟ್ಟಿ ಬೆಳೆಯುತ್ತದೆ. ಸಾಹಿತ್ಯ ಮತ್ತು ಸಿನಿಮಾ 2 ದಿಕ್ಕಿಗೆ ಹೋಗದೆ ಒಟ್ಟಿಗೆ ಸಾಗಬೇಕು. ಆಗ ಮಾತ್ರ ಕನ್ನಡ ಚಿತ್ರರಂಗ ಭವ್ಯ ಪರಂಪರೆ ಮುಂದುವರೆಯಲು ಸಾಧ್ಯ ಎಂದರು.

ಇಂದಿನ ಕೆಲವು ನಟರು ಕೈಯಲ್ಲಿ ಪುಸ್ತಕ ಹಿಡಿದುಕೊಂಡು ಹೋದರೆ ಮನೆಯೊಳಗೆ ಸೇರಿಸುವುದೇ ಇಲ್ಲ. ಇವನ್ಯಾರೋ ಪುಸ್ತಕದ ಕಥೆ ಹೇಳೋಕೆ ಬಂದಿದ್ದಾನೆ ಎಂದು ದೂರ ಓಡುತ್ತಾರೆ. ಪ್ಯಾನ್‌ ಇಂಡಿಯಾ ಎನ್ನುವ ಗೂಟ ಹಿಡಿದುಕೊಂಡು ಬಿಟ್ಟಿದ್ದಾರೆ. ‘ಬಾಹುಬಲಿ’ ಚಿತ್ರದ ಕಥೆಯನ್ನು ಕನ್ನಡದಿಂದಲೇ ಕದಿಯಲಾಗಿದೆ. ರಾಜಮೌಳಿ ಅವರ ತಂದೆ ರಾಜಕುಮಾರ್‌ ಅವರ ಸಿನಿಮಾದಲ್ಲಿ ಇರುವಂತ ಕಥೆಗಳನ್ನು ತೆಗೆದು ‘ಓಲ್ಡ್‌ ವೈನ್‌ ಇನ್‌ ನ್ಯೂ ಬಾಟಲ್‌’ ಎನ್ನುವಂತೆ ಹೊಸ ಲೇಬಲ್‌ ಹಾಕಿ, ಪಾಲಿಶ್‌ ಹೊಡೆದು, ಬ್ರಶ್‌ ಮಾಡಿ ಹಾಕಿದ್ದಾರೆ. ರಾಜ ನನ್ನ ರಾಜ, ಮಯೂರದಂತ ಚಿತ್ರಗಳ ವಿಷಯವನ್ನು ತೆಗೆದುಕೊಂಡು ಬಾಹುಬಲಿ ಮಾಡಿದ್ದಾರೆ. ಜನ ಅದನ್ನೇ ಅದ್ಭುತ ಅನ್ನುತ್ತಾರೆ. ನಮ್ಮವರಿಗೇನು ಗೊತ್ತಿಲ್ಲ ಅನ್ನುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕೇರಳದಲ್ಲಿ ವಾಸುದೇವ ನಾಯರ್‌ ಅದ್ಬುತವಾದ ಕತೆಗಳನ್ನು ಬರೆದಿದ್ದು ತಮ್ಮ ಪುಸ್ತಕದ ಹಕ್ಕುಸ್ವಾಮ್ಯತೆ ಕೊಡುತ್ತಾರೆ. ಆದರೆ, ನಮ್ಮಲ್ಲಿ ಕೆಲವರು ಮನೆಯ ಒಳಗಡೆಯೂ ನಮ್ಮನ್ನು ಸೇರಿಸುವುದಿಲ್ಲ. ಕನ್ನಡದಲ್ಲಿ ಒಳ್ಳೆಯ ಕತೆಗಳು ಇವೆ. ಆ ಕತೆಗಳನ್ನು ಸಿನಿಮಾ ಮಾಡಿದರೆ ಬಹಳ ಸೂಕ್ತವಾಗಿರುತ್ತವೆ. ಆದರೆ, ಜಾತಿ, ಸ್ವಜನ ಪಕ್ಷಪಾತ ಅದಕ್ಕೆ ಅಡ್ಡಿಯಾಗುತ್ತಿದೆ ಎಂದರು.

ಹಿರಿಯ ಸಂಶೋಧಕ ಹಂಪ ನಾಗರಾಜಯ್ಯ ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. 2023ನೇ ಸಾಲಿನ ನಾಡೋಜ ಬರಗೂರು ಪ್ರಶಸ್ತಿಯನ್ನು ಡಾ.ರಾಜೇಂದ್ರಸಿಂಗ್‌ ಬಾಬು(ಸಿನಿಮಾ), ಡಾ.ಬಸವರಾಜ ಕಲ್ಗುಡಿ(ಸಾಹಿತ್ಯ) ಮತ್ತು 2024ನೇ ಸಾಲಿನ ಪ್ರಶಸ್ತಿಗೆ ಸುಧಾರಾಣಿ(ಸಿನಿಮಾ) ಹಾಗೂ ಡಾ.ಕರೀಗೌಡ ಬೀಚನಹಳ್ಳಿ(ಸಾಹಿತ್ಯ) ಅವರಿಗೆ ಪ್ರದಾನ ಮಾಡಲಾಯಿತು. 

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''