ಸಿದ್ದಾಪುರ: ಬದುಕನ್ನು ಪ್ರತಿನಿಧಿಸುವ ಸಾಹಿತ್ಯ ಸಾರ್ವಕಾಲಿಕವಾಗಿ ಉಳಿಯುತ್ತದೆ. ಬರಹಗಾರ ತನ್ನ ಬರವಣಿಗೆಯ ಮೂಲಕ ಸಮಾಜವನ್ನು ಶುದ್ಧೀಕರಿಸಿದಂತೆ ತನ್ನನ್ನೂ ಶುದ್ಧೀಕರಿಸಿಕೊಂಡಾಗ ನಿಜವಾದ ಸಾಹಿತ್ಯ ರೂಪುಗೊಳ್ಳುತ್ತದೆ ಎಂದು ಪ್ರಾಚಾರ್ಯ ಎಂ.ಕೆ. ನಾಯ್ಕ ಹೊಸಳ್ಳಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಮಾತನಾಡಿ ಬದುಕಿನ ಅನುಭವಗಳ ಸಂವಹನ ಸಾಹಿತ್ಯದಲ್ಲಿ ಸಾಧ್ಯವಾಗುತ್ತದೆ. ಸಾಹಿತ್ಯ ಮತ್ತು ಬದುಕು ನಿಕಟವಾಗಿ ಬೆಸೆದುಕೊಂಡಿರುವಂಥದ್ದು.ಅನುಭವ, ಅಧ್ಯಯನ, ಸಮಾಜದ ಜೊತೆಗಿನ ಸಂಬಂಧ ಎಲ್ಲವನ್ನೂ ಒಳಗೊಂಡ ಸಾಹಿತ್ಯ ಕಲಾತ್ಮಕವಾಗಿದ್ದಾಗ ಓದುರನ್ನು ತಟ್ಟುತ್ತದೆ. ಸಮಚಿತ್ತದ ನೋಟ ನೋಟ ಸಾಹಿತ್ಯಕ್ಕೆ ಅಗತ್ಯ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಸಾಹಿತಿ, ಪತ್ರಕರ್ತ ಗಂಗಾಧರ ಕೊಳಗಿ ಮಾತನಾಡಿ, ಅನುಭವಗಳೆಂಬ ದಾರದಿಂದ ಹೆಣೆಯುವ ಕಸೂತಿ ಸಾಹಿತ್ಯ. ಬದುಕಿನಿಂದ ಪಡೆದ ಕಲಾತ್ಮಕತೆ ಕೂಡ ಆ ಕಸೂತಿಗೆ ಅಲಂಕಾರವಾಗಿ ಒದಗಿದಾಗ ಅದಕ್ಕೆ ಸಾರ್ಥಕತೆ ಒದಗುತ್ತದೆ. ಸಾಹಿತ್ಯದಿಂದ ಸುತ್ತಲಿನದನ್ನು ಶುದ್ಧೀಕರಿಸುವ ಪ್ರಯತ್ನಕ್ಕಿಂತ ತನ್ನನ್ನು ಶುದ್ಧೀಕರಿಸಿಕೊಳ್ಳುವ ಎಚ್ಚರ ಸಾಹಿತಿಗಳಿಗೆ ಇರಬೇಕು ಎಂದರು.ಮುಖ್ಯ ಅತಿಥಿ ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಚಿ.ಎಸ್. ಗೌಡರ್ ಮಾತನಾಡಿ, ಸಮಾಜದ ಉನ್ನತಿಗೆ ಪೂರಕವಾದ ಸಾಹಿತ್ಯ ಕೃಷಿ ಹೆಚ್ಚಬೇಕು. ಆ ಕುರಿತು ಹೆಚ್ಚಿನ ಸಹಕಾರ ಒದಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಚಂದ್ರಶೇಖರ ನಾಯ್ಕ ಕುಂಬ್ರಿಗದ್ದೆ ವ್ಯಕ್ತಿಯ ಆಂತರಿಕ ವಿಚಾರಗಳನ್ನು ಸಾಹಿತ್ಯದ ಮೂಲಕ ವ್ಯಕ್ತಗೊಳಿಸಲು ಸಾಧ್ಯ. ಬದುಕನ್ನು ಕಟ್ಟಿಕೊಡುವ ಸಾಹಿತ್ಯಕ್ಕೆ ಪರಿವರ್ತನಾಶೀಲತೆಯಿದೆ ಎಂದರು.
ಈ ಕುರಿತು ಜರುಗಿದ ಸಂವಾದದಲ್ಲಿ ಕೆ.ಬಿ.ವೀರಲಿಂಗನಗೌಡ್ರು, ಲಕ್ಷ್ಮಣ ಬಡಿಗೇರ, ಶಿವಾನಂದ ಹೊನ್ನೆಗುಂಡಿ, ವಿಠ್ಠಲ ಅವರಗುಪ್ಪ, ದಿವಾಕರ ಪಾಲ್ಗೊಂಡರು.