ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಅಂಚೆ ಮನರಂಜನ ಕೂಟದಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪರಭಾಷೆಗಳ ಆಕ್ರಮಣದ ನಡುವೆಯೂ ಕನ್ನಡವನ್ನು ಉಳಿಸಿಕೊಂಡು ಬಂದಿದ್ದೇವೆ. ಭಾಷೆಯ ಬಳಕೆಯಿಂದ ಅದು ಸಮೃದ್ಧವಾಗಿ ಬೆಳವಣಿಗೆ ಕಾಣುತ್ತದೆ. ಆದ್ದರಿಂದ ಕನ್ನಡಿಗರು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕ ಓದುವುದರಿಂದ ಕಾಲ ದೇಶಗಳನ್ನು ಮೀರಿದ ಕಾಲಜ್ಞಾನ ಬೆಳೆಸಿಕೊಳ್ಳಬಹುದು. ಇದರಿಂದ ವೈಚಾರಿಕ ಚಿಂತನೆ ವೃದ್ಧಿಸುತ್ತದೆ ಎಂದರು.ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಕೃಷ್ಣೇಗೌಡ ಹುಸ್ಕೂರು ಮಾತನಾಡಿ, ೨೫೦೦ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಪ್ರಪಂಚದ ಬೇರೆ ಬೇರೆ ಭಾಷೆಗಳ ಮೇಲೆ ತನ್ನ ಪ್ರಭಾವ ಬೀರಿದೆ. ಇಂತಹ ಕನ್ನಡ ಭಾಷೆ ನಮ್ಮ ಸಂಸ್ಕೃತಿಯ ರವಾನೆಯ ವಾಹಕವಾಗಿದೆ. ಅದೊಂದು ಮಾತನಾಡುವ, ಬರೆಯುವ ಭಾಷೆಯಷ್ಟೇ ಅಲ್ಲ, ನಮ್ಮ ನಡೆ-ನುಡಿ ಸಂಸ್ಕಾರ ಹಿರಿತನವನ್ನು ಮುಂದಿನ ಪೀಳಿಗೆಗೆ ರವಾನೆ ಮಾಡುವ ಪ್ರಮುಖ ಸಾಧನವಾಗಿದೆ ಎಂದರು.
ಅಂಚೆ ಕಚೇರಿಯ ಪ್ರಧಾನ ವ್ಯವಸ್ಥಾಪಕ ರೋಹಿಣೇಶ್ ಮಾತನಾಡಿ, ಹಲವು ಪ್ರಮುಖರು ಕನ್ನಡದ ಏಕೀಕರಣಕ್ಕಾಗಿ ಹೋರಾಡಿದ್ದಾರೆ. ಪ್ರಸ್ತುತ ದಿನಗಳಲ್ಲಿ ಐಟಿ ಬಿಟಿಗಳಲ್ಲೂ ಕನ್ನಡ ಬಳಕೆಯಾಗುತ್ತಿರುವುದು ಅಭಿಮಾನದ ಸಂಗತಿ. ಎಲ್ಲ ಜನರಿಗೂ ಇಂದು ಕನ್ನಡ ಬೇಕಾಗಿದೆ ಎಂದರು
ಸಮಾರಂಭದಲ್ಲಿ ಮೀರಾ ಶಿವಲಿಂಗಯ್ಯ ಅವರನ್ನು ಅಭಿನಂದಿಸಲಾಯಿತು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.