ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕಲೆ, ಸಾಹಿತ್ಯವು ನಮ್ಮ ಸಂಸ್ಕೃತಿ ಪರಂಪರೆಯ ಪ್ರತಿಬಿಂಬ. ಭಾರತೀಯ ಸಾಂಪ್ರದಾಯಿಕ ಕಲೆ, ಸಾಹಿತ್ಯವು ಮನುಷ್ಯನ ಜೀವನವನ್ನು ಪರಿಶುದ್ಧಗೊಳಿಸುತ್ತದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಅಭಿಪ್ರಾಯಪಟ್ಟರು.ನಗರದ ರಾಜೇಂದ್ರ ನಗರದ ಶ್ರೀ ವಿಜಯ ಕಲಾನಿಕೇತನದಲ್ಲಿ ಭಾರತೀಯ ಸಾಂಸ್ಕೃತಿಕ ನಿರ್ದೇಶನಾಲಯದ ಕಲಾ ಸಂಸ್ಕೃತಿ ವಿಕಾಸ ಯೋಜನೆಯಡಿ ಪವಿತ್ರಾಂಗಣದಲ್ಲಿ ಆಯೋಜಿಸಿದ್ದ ಮೂರು ದಿನಗಳ ಶಾಸ್ತ್ರೀಯ ನೃತ್ಯ ಮಹೋತ್ಸವ “ನೃತ್ಯ ಮೋದ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನೃತ್ಯವು ದೈಹಿಕ, ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. ಭರತನಾಟ್ಯವು ದೇಹ, ಮನಸ್ಸು ಹಾಗೂ ಆತ್ಮದ ಸಮನ್ವಯ ಸಂಗಮವಾಗಿದೆ. ವಿಜಯ ಕಲಾನಿಕೇತನ ಈಗಾಗಲೇ ಸಾಕಷ್ಟು ಜನ ವಿದ್ಯಾರ್ಥಿಗಳನ್ನು ಸುಸಂಸ್ಕೃತರನ್ನಾಗಿಸಿದೆ ಎಂದು ತಿಳಿಸಿದರು.ಡಾ. ಕೆ.ಎಸ್. ಪವಿತ್ರ ಶ್ರೀಧರ್ ಅವರು ಮನೋವೈದ್ಯರಾಗಿ ತಮ್ಮ ವೃತ್ತಿಯ ಜತೆಗೆ ಕಲಾ ಪ್ರಕಾರಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿ, ನಮ್ಮ ನಾಡಿನ ಕಲೆಗಳ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸಿದ್ದಾರೆ. ಅವರು ಕಲಾ ಪ್ರಕಾರ ಕ್ಷೇತ್ರದ ಸೇವೆ ನಿರಂತರವಾಗಿರಲಿದೆ ಎಂದರು.
ಇದೇ ಸಂದರ್ಭದಲ್ಲಿ ಕಟೀಲ್ ಅಶೋಕ ಪೈ ಮೆಮೋರಿಯಲ್ ಕಾಲೇಜಿನ ಪ್ರಾಚಾರ್ಯೆ ಡಾ.ಸಂಧ್ಯಾ ಕಾವೇರಿ ಮಾತನಾಡಿ, ನೃತ್ಯ ಕಲೆಗೂ, ಮೆದುಳಿಗೂ ನೇರ ಸಂಬಂಧವಿದೆ. ನೃತ್ಯ ಬದುಕನ್ನು ಉತ್ತಮಗೊಳಿಸುತ್ತದೆ. ಖಿನ್ನತೆಯಿಂದ ದೂರವಿರಲು ಸಹಕಾರಿ ಆಗುತ್ತದೆ. ಉತ್ತಮ ಸಂಸ್ಕಾರ ಬೆಳೆಯುವಲ್ಲಿ ಪರಿಣಾಮಕಾರಿ ಆಗುತ್ತದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಸಾಹಿತಿ ವಿಜಯ ಶ್ರೀಧರ ಮಾತನಾಡಿದರು. ನಿರ್ದೇಶಕಿ ಡಾ. ಕೆ.ಎಸ್. ಪವಿತ್ರಾ ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದರು.
ಇನ್ನರ್‌ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯಕುಮಾರ್, ಡಾ. ಕೆ.ಎಸ್. ಶುಭ್ರತಾ, ಡಾ.ಶ್ರೀಧರ್ ಉಪಸ್ಥಿತರಿದ್ದರು. ಬೆಂಗಳೂರಿನ ಅವಳಿ ಸಹೋದರಿಯರಾದ ಅರ್ಚನಾ ಹಾಗೂ ಚೇತನಾ ಅವರು ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.- - - -16ಎಸ್‌ಎಂಜಿಕೆಪಿ01:
ಶಿವಮೊಗ್ಗದ ಪವಿತ್ರಾಂಗಣದಲ್ಲಿ “ನೃತ್ಯ ಮೋದ” ಕಾರ್ಯಕ್ರಮವನ್ನು ಜಿಲ್ಲಾ ವಾಣಿಜ್ಯ- ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಉದ್ಘಾಟಿಸಿದರು.