ತೀರ್ಥಹಳ್ಳಿಯಲ್ಲಿ ತಾಲೂಕಿನಲ್ಲಿ ಸಾಹಿತ್ಯ ಪೂರಕ ವಾತಾವರಣ: ಆರಗ ಜ್ಞಾನೇಂದ್ರ

KannadaprabhaNewsNetwork | Updated : Nov 13 2023, 01:16 AM IST

ಸಾರಾಂಶ

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಾಲೂಕಿನ ಕೊಡುಗೆ ಅನನ್ಯವಾಗಿದೆ.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಕನ್ನಡಕ್ಕೆ ಬಂದಿರುವ ಎಂಟು ಜ್ಞಾನಪೀಠ ಪ್ರಶಸ್ತಿಗಳಲ್ಲಿ ಎರಡು ಪ್ರಶಸ್ತಿಗಳನ್ನು ಪಡೆದಿರುವ ಈ ತಾಲೂಕಿನಲ್ಲಿ ಸಾಹಿತ್ಯ ಪೂರಕ ವಾತಾವರಣವಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಪಟ್ಟಣದ ಬಾಳೆಬೈಲು ಬಡಾವಣೆಯಲ್ಲಿ ನಿರ್ಮಿಸಲಾದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನವನ್ನು ಶನಿವಾರ ಸಂಜೆ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಾಲೂಕಿನ ಕೊಡುಗೆ ಅನನ್ಯವಾಗಿದೆ. ನೆಲದ ಮಣ್ಣು ಅಂತಹ ವಾತಾವರಣವನ್ನು ಸೃಷ್ಟಿಸಿದೆ. ಓದುವ ಹವ್ಯಾಸವನ್ನು ಹೆಚ್ಚಿಸಿಕೊಂಡಲ್ಲಿ ವ್ಯಕ್ತಿತ್ವದ ವಿಕಸನದ ಜೊತೆಗೆ ಜೀವನಕ್ಕೆ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದರು.

ಈ ಕನ್ನಡ ಭವನಕ್ಕೆ ಹಿಂದಿನ ಅವಧಿಯಲ್ಲಿ ಅನುದಾನವನ್ನು ಕಾದಿರಿಸಿದ್ದೆ. ಆದರೆ, ಹಣ ಮಂಜೂರಾಗದಿರುವ ಬಗ್ಗೆ ಬೇಸರವಿದೆ. ಮುಂದುವರಿದ ಕಾಮಗಾರಿಗೆ ₹5 ಲಕ್ಷಗಳನ್ನು ನೀಡುವುದಾಗಿ ಭರವಸೆ ನೀಡಿದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಮಾತೃಭಾಷೆ ಪ್ರೀತಿಸುವ ಜೊತೆಗೆ ಸಂಕುಚಿತವಾದ ಕಾಯ್ದೆಯ ಚೌಕಟ್ಟನ್ನು ಅರಿತು, ಪ್ರಾದೇಶಿಕ ಅಥವಾ ರಾಜ್ಯದ ಆಡಳಿತ ಭಾಷೆಗೆ ಜೀವ ತುಂಬ ಕೆಲಸ ಆಗಬೇಕು. ಇತಿಹಾಸವೇ ಇಲ್ಲದ ಧರ್ಮದ ಹೆಸರನ್ನು ಬಳಸಿ ಜನರನ್ನು ಹಾದಿ ತಪ್ಪಿಸುತ್ತಿರುವ ಈ ಕಾಲಘಟ್ಟದಲ್ಲಿ ಹೊಸ ತಲೆಮಾರಿನ ಸಾಹಿತ್ಯದ ಗ್ರಂಥ ಭಂಡಾರ ರೂಪಿಸುವ ಅಗತ್ಯವಿದೆ ಎಂದು ಮಾರ್ಮಿಕವಾಗಿ ನುಡಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಮಾತನಾಡಿ, ನಿರಂತರ ಸಾಹಿತ್ಯದ ಓದು ಸೌಮ್ಯ ಸ್ವಭಾವದ ಜೊತೆಗೆ ಚಿಂತನೆ ಮೂಡಿಸುತ್ತದೆ. ಸಮಾಜದ ಬದಲಾವಣೆಗೆ ವಿಮರ್ಶಾತ್ಮಕ ಮನೋಭಾವ ಅಗತ್ಯ. ಮುಕ್ತ ಚರ್ಚೆಗಳಿಗೆ ಅವಕಾಶ ಸಿಕ್ಕಿದಾಗ ಸಾಹಿತ್ಯದ ಆಳ ಅಧ್ಯಯನ ಸಾಧ್ಯ ಎಂದರು.

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ್ ಮಾತನಾಡಿ, ಕರ್ನಾಟಕ ಏಕೀಕರಣಗೊಂಡು ಅರ್ಧ ಶತಮಾನಗಳೇ ಕಳೆದರೂ ಕನ್ನಡದ ಅಸ್ಮಿತೆಯನ್ನು ಉಳಿಸಿಕೊಳ್ಳುವ ಸವಾಲು ಕನ್ನಡಿಗರ ಮುಂದಿದೆ. ಇದಕ್ಕೆ ಬಹು ಮುಖ್ಯ ಕಾರಣ ಶಿಕ್ಷಣ ವ್ಯವಸ್ಥೆ ಹಂತಕ್ಕೆ ತಲುಪಿರುವುದು ಭಾಷೆಯ ಗೊಂದಲದಲ್ಲಿ ಮಕ್ಕಳ ಭವಿಷ್ಯವೇ ಹಾಳಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಅಧ್ಯಕ್ಷತೆಯನ್ನು ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಟಿ.ಕೆ.ರಮೇಶ ಶೆಟ್ಟಿ ವಹಿಸಿದ್ದರು. ಪಪಂ ಅಧ್ಯಕ್ಷ ಗೀತಾ ರಮೇಶ್, ಸದಸ್ಯರಾದ ಸುಶೀಲಾ ಶೆಟ್ಟಿ, ಶಬನಂ ಸಹಕಾರಿ ಮುಖಂಡರಾದ ಮಹಾಬಲೇಶ್ವರ ಹೆಗಡೆ, ರಾಘವೇಂದ್ರ ಶೆಟ್ಟಿ ಮುಂತಾದವರು ಇದ್ದರು.

- - - (** ಈ ಫೋಟೋ ಪ್ಯಾನೆಲ್‌ಗೆ ಬಳಸಬಹುದು)

-12ಟಿಟಿಎಚ್01:

ತೀರ್ಥಹಳ್ಳಿ ಪಟ್ಟಣದ ಬಾಳೆಬಯಲು ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಲಾದ ಕನ್ನಡ ಭವನವನ್ನು ಶಾಸಕ ಜ್ಞಾನೇಂದ್ರ ಉದ್ಘಾಟಿಸಿದರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್‌ ಮತ್ತಿತರರು ಇದ್ದರು.

Share this article