ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಜೀವನ ಬೇಡ ಎನ್ನುವಾಗ ಬದುಕಿಗೆ ಒಂದು ಅರ್ಥ ನೀಡುವುದೇ ಸಾಹಿತ್ಯ. ಮನೆ ಸ್ಥಿತಿ, ಮನಿ ಸ್ಥಿತಿಗಿಂತಲೂ ಮನಸ್ಥಿತಿಗೆ ಸಾಹಿತ್ಯ ಶಕ್ತಿ ನೀಡುತ್ತದೆ ಎಂದು ಕೆ.ಆರ್.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಎಂ.ಎಸ್.ಮಹದೇವ ತಿಳಿಸಿದರು.ಭಾರತೀ ಕಾಲೇಜಿನ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರ ಕನ್ನಡ ವಿಭಾಗದ ಪ್ರಥಮ ಎಂಎ ವಿದ್ಯಾರ್ಥಿಗಳು ಆಯೋಜಿಸಿದ್ದ ದ್ವಿತೀಯ ಎಂಎ ವಿದ್ಯಾರ್ಥಿಗಳಿಗೆ ಸ್ನೇಹ ಲಹರಿ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಭಾವನೆಗಳ ಅಭಿವ್ಯಕ್ತಿಯನ್ನು ಸಾಧಿಸಲು ಇರುವಂತ ಸಾಧನವೇ ಭಾಷೆ. ಮೂರು ವರ್ಷದಲ್ಲಿ ಕಲಿತ ಭಾಷೆಯನ್ನು ನೂರಾರು ವರ್ಷ ಸರಿಯಾಗಿ ಬಳಸಬೇಕು. ವಿದ್ಯಾರ್ಥಿಗಳು ಜ್ಞಾನವಿಲ್ಲದಂತೆ ಕಲಿಯಬೇಕೆ ಹೊರತು ತೋರ್ಪಡಿಸಿಕೊಳ್ಳಬಾರದು. ವಿದ್ಯಾರ್ಥಿಗಳು ಕನ್ನಡದ ಜತೆಗೆ ಇಂಗ್ಲಿಷ್ ಭಾಷೆ ಬಗ್ಗೆ ಆಸಕ್ತಿ ವಹಿಸಬೇಕು. ದುಡ್ಡು ಕೊಟ್ಟರೆ ಎಲ್ಲವೂ ಸಿಗುವುದಿಲ್ಲ ಎಂದರು.ಭಾರತೀ ಕಾಲೇಜಿನ ಪ್ರಾಂಶುಪಾಲ ಎಂ.ಎಸ್ ಮಹದೇವಸ್ವಾಮಿ ಮಾತನಾಡಿ, ಪುಸ್ತಕಗಳು ಒಳ್ಳೆಯ ಸಂಗಾತಿಗಳು. ಪುಸ್ತಕಗಳನ್ನು ಓದಿದಾಗ ಹಣ, ಸಂತೋಷ ಎರಡು ಸಿಗುತ್ತದೆ. ಬಹುಶಿಸ್ತಿನ ಅಧ್ಯಯನದಲ್ಲಿ ತೊಡಗಿಸಿಕೊಂಡು ವಿಮರ್ಶಾತ್ಮಕ ಮನೋಭಾವನೆಗಳನ್ನು ಬೆಳೆಸಿಕೊಳ್ಳಬೇಕು. ಹೊಸ ಪುಸ್ತಕಗಳ ಸಂಗ್ರಹಿಸಿ ಆಲೋಚಿಸಿ ನೀವೇ ವಿಮರ್ಶಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸ್ನಾತಕೋತ್ತರ ಮತ್ತು ಸಂಶೋಧನೆ ಕೇಂದ್ರದ ನಿರ್ದೇಶಕ ಪ್ರೊ.ಎಸ್.ನಾಗರಾಜ್ ಮಾತನಾಡಿ, ಮಾಜಿ ಸಂಸದ ಜಿ.ಮಾದೇಗೌಡರನ್ನು ಸ್ಮರಿಸುತ್ತಾ ಸಾಹಿತ್ಯದ ಮಜಲು ನಿತ್ಯ ಜೀವನದಲ್ಲಿ ಏನೆಲ್ಲ ಬದುಕಬಹುದು ಎಂಬುದನ್ನು ತಿಳಿಸುತ್ತದೆ. ಕನ್ನಡದಲ್ಲಿ ಉದ್ಯೋಗ ಬಹಳಷ್ಟು ಅವಕಾಶಗಳ ಬಗ್ಗೆ ತಿಳಿಸಿದರು.ಸಿನಿಮಾ, ಪತ್ರಿಕೋದ್ಯಮ ಸೇರಿದಂತೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಉದ್ಯೋಗಾವಕಾಶವಿದೆ, ಅದಕ್ಕಾಗಿ ಕೌಶಲ್ಯಗಳನ್ನು ರೂಡಿಸಿಕೊಳ್ಳಬೇಕು. ಶಿಕ್ಷಣದೊಂದಿಗೆ ಗುರಿ, ಬುದ್ಧಿವಂತಿಕೆ, ಜಾಣ್ಮೆ, ಪ್ರೀತಿ, ಆತ್ಮವಿಶ್ವಾಸ, ನಂಬಿಕೆ, ಮಾನವೀಯ ಗುಣ ಎಲ್ಲವೂ ಸ್ವಂತ ಕಾಲದ ಮೇಲೆ ನಿಲ್ಲುವಂತೆ ಮಾಡುತ್ತವೆ ಎಂದರು.
ಇದೇ ವೇಳೆ ದ್ವಿತೀಯ ಎಂಎ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು. ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು. ಸಾಂಸ್ಕೃತಿ ಕಾರ್ಯಕ್ರಮಗಳು ಜರುಗಿದವು. ಕನ್ನಡ ವಿಭಾಗ ಸಂಯೋಜಕರಾದ ಡಾ.ಎಚ್.ಎಂ.ನಾಗೇಶ್ ಡಾ.ಸಿ.ಮರಯ್ಯ, ಡಾ.ಜಿ.ಎಂ.ಲಕ್ಷ್ಮೀ, ಡಿ.ಎಲ್.ಸರೀತಾ, ಬಿ.ಡಿ.ಮಹೇಶ್, ಸಂಶೋಧನಾ ವಿದ್ಯಾರ್ಥಿಗಳಾದ ಹರೀಶ್ ಕುಮಾರ್, ಗುರುಪ್ರಸಾದ್, ಪಾರ್ವತಿ, ಅಧ್ಯಾಪಕರು ಮತ್ತು ಅಧ್ಯಾಪಕೇತರು ಭಾಗವಹಿಸಿದ್ದರು.