ಕನ್ನಡಪ್ರಭ ವಾರ್ತೆ ಕುಶಾಲನಗರ ಸಾಹಿತ್ಯಕ್ಕೆ ಭಾಷೆ ಜಾತಿ ಪರಿಮಿತಿ ಇರುವುದಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಎಂ ಪಿ ಕೇಶವ ಕಾಮತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಅವರು ಕುಶಲನಗರದಲ್ಲಿ ಪೈಗಂಬರ್ ಮೊಹಮ್ಮದ್ ಸೀರತ್ ಅಭಿಯಾನದ ಪ್ರಯುಕ್ತ ಕೃತಿಗಳ ಬಿಡುಗಡೆ ಮತ್ತು ಪುಸ್ತಕ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಪೈಗಂಬರ್ ಅವರ ಜೀವನದ ಆದರ್ಶ ತ್ಯಾಗ ಕಲಿಕೆಗೆ ಕೃತಿಗಳು ಸಹಕಾರಿಯಾಗಿವೆ. ಸಾಹಿತ್ಯ ಧಾರ್ಮಿಕ ಕಾರ್ಯಗಳಿಗೆ ಯುವಜನತೆಯ ಒಲವು ಮೂಡಿಸುವ ಕೆಲಸ ನಡೆಯಬೇಕಾಗಿದೆ ಎಂದರು. ಕೃತಿಗಳನ್ನು ಬಿಡುಗಡೆಗೊಳಿಸಿದ ಹಿರಿಯ ಸಾಹಿತಿ ಕಣಿವೆ ಭಾರದ್ವಾಜ್ ಆನಂದ ತೀರ್ಥ ಅವರು ಮಾತನಾಡಿ ಪ್ರತಿಯೊಬ್ಬರು ಆತ್ಮ ವಂಚನೆಯಿಂದ ಹೊರ ಬರಬೇಕಾಗಿದೆ. ಧರ್ಮ ಗ್ರಂಥಗಳಿಗೆ ನಿಷ್ಠರಾಗುವ ಮೂಲಕ ನೆಮ್ಮದಿ ಶಾಂತಿ ಗಳಿಸಲು ಸಾಧ್ಯ ಎಂದ ಅವರು ಧರ್ಮ ಪರಿಪಾಲನೆ ಮೂಲಕ ಬದುಕು ಸಾಗಿಸಬೇಕು ಸತ್ಯ ಅಸತ್ಯ ನಡುವೆ ಹೋರಾಟ ನಡೆಯುತ್ತಿದ್ದು ಪ್ರತಿಯೊಬ್ಬರು ಅಹಂಕಾರದ ಮನೋಭಾವ ತೊರೆಯಬೇಕಾಗಿದೆ ಎಂದರು. ಪ್ರಸಕ್ತ ಪರಿಸ್ಥಿತಿಯಲ್ಲಿ ಅರ್ಧಂಬರ್ಧ ತಿಳುವಳಿಕೆಯಿಂದ ಅನಾಹುತಗಳು ಸೃಷ್ಟಿಯಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು. ಸರಳ ಭಾಷೆಯಲ್ಲಿ ಎಲ್ಲರಿಗೂ ಅರ್ಥೈಸುವ ಪ್ರೀತಿಯಲ್ಲಿ ಕೃತಿಗಳು ರಚನೆಯಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಂತಿ ಪ್ರಕಾಶನ ವ್ಯವಸ್ಥಾಪಕರಾದ ಎಂ ಎಚ್ ಮಹಮ್ಮದ್ ಕುಂಞಿ ಅವರು ಮಾತನಾಡಿ, ಪುಸ್ತಕಗಳ ಮಹತ್ವದ ಬಗ್ಗೆ ತಿಳಿಸಿದರು ಕಪೋಲ ಕಲ್ಪಿತ ಕಥೆಗಳಿಲ್ಲದೆ ಇರುವ ಕೃತಿಗಳ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದ ಅವರು ಜನರನ್ನು ವಿಭಜಿಸುವ, ಮನಸು ಕೆಡಿಸುವ ಪುಸ್ತಕಗಳು ಆತಂಕಕಾರಿ ಬೆಳವಣಿಗೆಯನ್ನು ಸೃಷ್ಟಿಸುತ್ತವೆ ಎಂದರು. ಯುವಜನತೆ ವಿವೇಕ ಬೆಳೆಸುವ ಜೊತೆಗೆ ಓದಿನ ಕಡೆ ಮನಸು ಮಾಡಬೇಕು ಎಂದು ಕರೆ ನೀಡಿದರು. ಸಾಹಿತಿ ಫ್ಯಾನ್ಸಿ ಮುತ್ತಣ್ಣ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ ಎಸ್ ನಾಗೇಶ್, ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಅರ್ಜುನ ಮೌರ್ಯ ಮತ್ತಿತರರು ಶುಭ ಹಾರೈಸಿದರು.ಕುಶಾಲನಗರ ವಕೀಲರು ಹಾಗೂ ಪ್ರಧಾನ ಅರ್ಚಕರಾದ ನಾಗೇಂದ್ರ ಬಾಬು, ಸಾರ್ವಜನಿಕ ಸೀರತ್ ಸಮಾವೇಶ ಗೌರವಾಧ್ಯಕ್ಷರಾದ ನಜೀರ್ ಅಹ್ಮದ್, ಜಮಾತೆ ಇಸ್ಲಾಮಿ ಹಿಂದ್ ಸಂಚಾಲಕರಾದ ಅಬ್ದುಲ್ ಸಲಾಂ, ಸಿ ಎಚ್ ಆಪ್ಷಲ್ ಕಾರ್ಯದರ್ಶಿ ಪಿ ಕೆ ಅಬ್ದುಲ್ ರೆಹಮಾನ್ ಮತ್ತಿತರರು ಇದ್ದರು.