ಸಾಹಿತ್ಯಕ್ಕೆ ನಮ್ಮ ಬದುಕು ರೂಪಿಸುವ ಶಕ್ತಿ ಇದೆ: ಶೃಂಗೇರಿ ಶಿವಣ್ಣ

KannadaprabhaNewsNetwork | Published : Dec 13, 2023 1:00 AM

ಸಾರಾಂಶ

ಸಾಹಿತ್ಯಕ್ಕೆ ನಮ್ಮ ಬದುಕು ರೂಪಿಸುವ ಶಕ್ತಿ ಇದೆ: ಶೃಂಗೇರಿ ಶಿವಣ್ಣಕಟ್ಟಿನಮನೆ ಶಾಲೆಯಲ್ಲಿ ಸಾಹಿತ್ಯ ಸಂಭ್ರಮ

ಕಟ್ಟಿನಮನೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ತಾ.ಕ.ಸಾ.ಪ.ದಿಂದ ಕಾರ್ತಿಕ ಮಾಸದಲ್ಲಿ ಸಾಹಿತ್ಯ ಸಂಭ್ರಮ ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಸಾಹಿತ್ಯಕ್ಕೆ ನಮ್ಮ ಬದುಕನ್ನು ರೂಪಿಸುವ ಶಕ್ತಿ ಇದ್ದು ಮಕ್ಕಳು ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಾಹಿತಿ ಡಾ. ಬಿ.ಶಿವಶಂಕರ್‌ ( ಶೃಂಗೇರಿ ಶಿವಣ್ಣ) ಕರೆ ನೀಡಿದರು.

ಮಂಗಳವಾರ ಕಟ್ಟಿನಮನೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಕಾರ್ತಿಕ ಮಾಸದ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಕಲಿಕೆಯ ಸಾಂಗತ್ಯಕ್ಕೆ ರುಚಿಕರ ಸಾಹಿತ್ಯ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಉತ್ತಮ ಗ್ರಂಥಗಳನ್ನು ಓದುತ್ತಾ ಬಂದರೆ ಜೀವನದಲ್ಲಿ ದೊಡ್ಡ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಸಾಹಿತ್ಯ ಇಲ್ಲದೆ ಉತ್ತಮ ಸಮಾಜ ಸೃಷ್ಟಿಯಾಗುವುದಿಲ್ಲ. ಇತಿಹಾಸ ತಿಳಿದುಕೊಂಡವರು ಇತಿಹಾಸ ಬರೆಯಬಲ್ಲರು. ನಗುವುದಕ್ಕೆ ಕೇವಲ 24 ನರಗಳು ಕೆಲಸ ಮಾಡಬೇಕಾಗುತ್ತದೆ. ಆದರೆ, ಸಿಟ್ಟು ಮಾಡಿಕೊಂಡು ಮುಖ ಗಂಟುಹಾಕಿಕೊಳ್ಳಲು 74 ನರಗಳು ಕೆಲಸ ಮಾಡಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ನಗು, ನಗುತ್ತಾ ಬದುಕುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದರು.

ಕಟ್ಟಿನಮನೆ ಶಾಲೆ ಶಿಕ್ಷಣ ತಜ್ಞ ಶಂಕರ ನಾರಾಯಣಭಟ್ ಆಶಯ ಭಾಷಣ ಮಾಡಿ, ನಾನು ಗ್ರಾಮ ಪಂಚಾಯಿತಿ ಸದಸ್ಯ ನಾಗಿದ್ದಾಗ ಈ ಶಾಲೆಗೆ ಹಲವು ಮೂಲಭೂತ ಸೌಕರ್ಯ ಒದಗಿಸಿಕೊಟ್ಟಿದ್ದೇನೆ. ಶಿಕ್ಷಣ ಎಂದರೆ ಕೇವಲ ಅಂಕಗಳಿಕೆ ಮಾತ್ರವಲ್ಲ. ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಬಾಗಿಯಾಗಬೇಕು. ಮುಖ್ಯವಾಗಿ ಮಕ್ಕಳಿಗೆ ನೈತಿಕ ಶಿಕ್ಷಣದ ಅಗತ್ಯವಿದೆ. ಮಕ್ಕಳು ಈ ದೇಶದ ಆಸ್ತಿಯಾಗಬೇಕು ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪೂರ್ಣೇಶ್ ಮಾತನಾಡಿ,ಕನ್ನಡ ಸಾಹಿತ್ಯ ಪರಿಷತ್‌ ನಾಡು,ನುಡಿ,ಜಲ,ಸಂಸ್ಕೃತಿಯುಳ್ಳ ಕಾರ್ಯಕ್ರಮದ ಜೊತೆಗೆ ಮಕ್ಕಳ ಜೊತೆ ಸಂವಾದ, ಮಕ್ಕಳಿಗೆ ಕನ್ನಡದಲ್ಲಿ ಸುಂದರವಾಗಿ ಬರೆಯುವ ಸ್ಪರ್ಧೆ ಮುಂತಾದ ಕಾರ್ಯಕ್ರಮವನ್ನು ಪ್ರತಿ ಶಾಲೆಯಲ್ಲೂ ಹಮ್ಮಿಕೊಳ್ಳುತ್ತಿದ್ದೇವೆ. ಜೊತೆಗೆ ಪ್ರತಿ ಸರ್ಕಾರಿ ಕಚೇರಿಗಳಲ್ಲೂ ಕನ್ನಡ ಬಳಕೆ ಬಗ್ಗೆ ಜಾಗ್ರತಿ ಮೂಡಿಸುತ್ತಿದ್ದೇವೆ. ಮಕ್ಕಳ ಪೋಷಕರ ಜೊತೆಗೆ ಸಮ್ಮಿಲನ ಸಂಭ್ರಮ ಎಂಬ ಕಾರ್ಯಕ್ರಮ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಅಕ್ಕ ಪಕ್ಕದ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಜೊತೆ ಸೇರಿ ಕ್ಷೇತ್ರ ಮಟ್ಟದ ಸಮ್ಮೇಳನ ಮಾಡುವ ಚಿಂತನೆ ಮಾಡಿದ್ದೇವೆ ಎಂದರು.

ಕಟ್ಟಿನಮನೆಯ ಸರ್ಕಾರಿ ಪ್ರೌಢ ಶಾಲೆ ಸಂಸತ್‌ ಮುಖ್ಯಮಂತ್ರಿ ಹಾಗೂ ವಿದ್ಯಾರ್ಥಿ ರಕ್ಷಿತ್‌ ಗೌಡ ಉದ್ಘಾಟಿಸಿದರು. ಅತಿಥಿಗಳಾಗಿ ಗಾಯಕ ಅಂಬಲಮನೆ ಸುಬ್ರಮಣ್ಯ ಭಟ್, ಶೃಂಗೇರಿ ತಾ.ಕಸಾಪ ಅಧ್ಯಕ್ಷ ಶೃಂಗೇರಿ ಸುಬ್ಬಣ್ಣ, ಸಾಹಿತಿ ಶೃಂಗೇರಿ ಲಕ್ಷ್ಮಿನಾರಾಯಣ,ಶಾಲೆಯ ಮುಖ್ಯೋಪಾಧ್ಯಾಯ ಮಂಜುನಾಥ್‌ ಗೌಡ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಾಹಿತಿ ಶೃಂಗೇರಿ ಶಿವಣ್ಣ ಅವರು ಕಟ್ಟಿನಮನೆ ಶಾಲೆ ಗ್ರಂಥಾಲಯಕ್ಕೆ 23 ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ತಾ. ಕಸಾಪದಿಂದ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಸುಂದರವಾಗಿ ಕೈ ಬರಹ ಸ್ಪರ್ಧೆ ಏರ್ಪಡಿಸಲಾಗಿತ್ತು. ಸಾಹಿತಿ ಶೃಂಗೇರಿ ಶಿವಣ್ಣ ಹಾಗೂ ಗಾಯಕ ಅಂಬಲಮನೆ ಸುಬ್ರಮಣ್ಯಭಟ್ ಅವರನ್ನು ಸನ್ಮಾನಿಸಲಾಯಿತು. ಅಂಬಲಮನೆ ಸುಬ್ರಮಣ್ಯ ಅವರಿಂದ ಗೀತ ಗಾಯನ ನಡೆಯಿತು. ಶಿಕ್ಷಕ ರಮೇಶ್‌ ಸ್ವಾಗತಿಸಿದರು.ಶಿಕ್ಷಕಿ ಎ.ಪಿ.ಗಾಯಿತ್ರಿ ಕಾರ್ಯಕ್ರಮ ನಿರೂಪಿಸಿದರು.

Share this article