ಸಾಹಿತ್ಯವೆಂದರೆ ಬಾಂಧವ್ಯ ವೃದ್ಧಿಸುವ ಮಾರ್ಗ: ಮಂಗಳನಾಥ ಸ್ವಾಮೀಜಿ

KannadaprabhaNewsNetwork |  
Published : Feb 04, 2026, 01:15 AM IST
ಸಿಕೆಬಿ-1 ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಡೆದ ಸಾಹಿತಿ ಬಿ.ಎಂ.ಪ್ರಮೀಳಾ ಮಹದೇವ್ ರವರ ಸಾಲುದೀಪಗಳು ಕೃತಿಯನ್ನು ಮಂಗಳನಾಥಸ್ವಾಮೀಜಿ, ನಟ ನೀರ್ನಳ್ಳಿ ರಾಮಕೃಷ್ಣ ಲೋಕಾರ್ಪಣೆ ಮಾಡಿದರು | Kannada Prabha

ಸಾರಾಂಶ

ಬಿ.ಎಂ.ಪ್ರಮೀಳಾ ರವರು ತಮ್ಮ ಕೌಟುಂಬಿಕ ಕಾರ್ಯ ಒತ್ತಡಗಳ ನಡುವೆಯೂ ಶಿಕ್ಷಕ ವೃತ್ತಿಯನ್ನು ನಿಭಾಯಿಸಿಕೊಂಡು ಸಾಹಿತ್ಯ ಘಮಲನ್ನು ಓದುಗರಿಗೆ ಉಣಬಡಿಸುತ್ತಿರುವುದು ಆದರ್ಶ ಕಾರ್ಯವಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸಾಹಿತ್ಯವೆಂದರೆ ಅಂತರಂಗ ಶುದ್ಧಿಗೊಳಿಸುವ ಮಂತ್ರ. ಅದೊಂದು ಬದುಕಿಗೆ ದಾರಿದೀಪ. ಮಾನವನ ಸಂಬಂಧಗಳನ್ನು ಗಟ್ಟಿಗೊಳಿಸುವ, ಭಾವನೆಗಳನ್ನು ಬೆಸುಗೆ ಹಾಕಿ ಬಾಂಧವ್ಯ ವೃದ್ಧಿಸುವ ಮಾರ್ಗ ಎಂದು ಆದಿಚುಂಚನಗರಿ ಶಾಖಾ ಮಠದ ಕಾರ್ಯದರ್ಶಿ ಮಂಗಳನಾಥ ಸ್ವಾಮೀಜಿ ತಿಳಿಸಿದರು.

ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಿರಿ ಮಲ್ಲಿಗೆ ಸಾಹಿತ್ಯ ವೇದಿಕೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾಹಿತಿ ಬಿ.ಎಂ.ಪ್ರಮೀಳಾ ಮಹದೇವ್ ರವರ ಸಾಲುದೀಪಗಳು ಕೃತಿಯ ಲೋಕಾರ್ಪಣೆ ಮತ್ತು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಬಿ.ಎಂ.ಪ್ರಮೀಳಾ ರವರು ತಮ್ಮ ಕೌಟುಂಬಿಕ ಕಾರ್ಯ ಒತ್ತಡಗಳ ನಡುವೆಯೂ ಶಿಕ್ಷಕ ವೃತ್ತಿಯನ್ನು ನಿಭಾಯಿಸಿಕೊಂಡು ಸಾಹಿತ್ಯ ಘಮಲನ್ನು ಓದುಗರಿಗೆ ಉಣಬಡಿಸುತ್ತಿರುವುದು ಆದರ್ಶ ಕಾರ್ಯವಾಗಿದೆ. ಬರೆಯುವವರು ಮತ್ತು ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಸಮಾಜದಲ್ಲಿ ಮೌಲ್ಯಗಳು ಕುಸಿಯಲು ಕಾರಣವಾಗುತ್ತಿದೆ. ಇಂತಹ ಸಂಧರ್ಭದಲ್ಲಿ ಸಮಾಜದ ಆಗು ಹೋಗುಗಳು, ಸಾಂಸಾರಿಕ ತೊಳಲಾಟ, ಬದುಕಿನ ಬವಣೆಯ ಎಲ್ಲ ಸಾರವನ್ನು ಹೊಂದಿರುವ ಪ್ರಮೀಳಾ ಅವರ ಸಾಲುದೀಪಗಳ ಕೃತಿಯು ಓದುಗನ ಅಂತರಂಗ ತಟ್ಟುವಲ್ಲಿ ಸಫಲವಾಗಿದೆ, ಅವರ ಉತ್ಕೃಷ್ಟ ಶೈಲಿಯ ಬರವಣಿಗೆಯು ಅವರನ್ನು ಒಬ್ಬ ಉತ್ತಮ ಸಾಹಿತಿಗಳ ಸಾಲಿಗೆ ತೆಗೆದುಕೊಂಡು ಹೋಗಲಿ ,ಕನ್ನಡ ಸಾರಸ್ವತ ಲೋಕಕ್ಕೆ ಇವರ ಕೊಡುಗೆ ಈಗೆಯೇ ನಿರಂತರವಾಗಿರಲಿ ಎಂದು ಶುಭ ಹಾರೈಸಿದರು.

ಚಲನಚಿತ್ರ ನಟ ನೀರ್ನಳ್ಳಿ ರಾಮಕೃಷ್ಣ ಅವರು ಸಾಲುದೀಪಗಳು ಕೃತಿಯನ್ನು ಲೋಕಾರ್ಪಣೆ ಮತ್ತು ಕವಿಗೋಷ್ಟಿಯನ್ನು ಉದ್ಘಾಟಿಸಿ ಮಾತನಾಡಿ, ಶೇಷ್ಠವಾದ ಕಥೆ ಕಾದಂಬರಿ ಕವನ, ನಾಟಕ, ಚಲನಚಿತ್ರಗಳನ್ನು ನೋಡುವುದರಿಂದ, ವ್ಯಕ್ತಿಯು ದೊಡ್ಡ ಮನಸ್ಸು ಬೆಳೆಸಿಕೊಳ್ಳುತ್ತಾನೆ, ಸಂವೇದನಾಶೀಲರಾಗಿ ಮನುಷ್ಯ ಸಂಬಂಧಗಳನ್ನು ಗೌರವಿಸುತ್ತಾನೆ ಎಂದು ಅಭಿಪ್ರಾಯಪಟ್ಟರು.

70 ರಿಂದ 90ರ ದಶಕದ ಕಾಲಮಾನದಲ್ಲಿ ಪುಟ್ಟಣ್ಣ ಕಣಗಾಲ್, ಸುಬ್ಬಯ್ಯ ನಾಯ್ಡು, ಸಿದ್ದಲಿಂಗಯ್ಯ, ಹುಣಸೂರು ಕೃಷ್ಣಮೂರ್ತಿ ಮೊದಲಾದವರ ನಿರ್ದೇಶನದಲ್ಲಿ ಕಾದಂಬರಿ ಆಧಾರಿತ ನಾಟಕಗಳು ಸಿನಿಮಾಗಳು ರಚನೆಯಾಗುತ್ತಿದ್ದವು. ಇಂತಹ ಚಿತ್ರಗಳು ಸಮಾಜದ ಮೌಲ್ಯಗಳನ್ನು ಎತ್ತಿ ಹಿಡಿದು ಸಾಮಾಜಿಕ ಮೌಲ್ಯಗಳನ್ನು ಜನರ ಮನಸ್ಸಿನಲ್ಲಿ ಬಿತ್ತುವುದರ ಮೂಲಕ ಪ್ರಭಾವಯುತ ಸಮಾಜವನ್ನು ಕಟ್ಟುವಲ್ಲಿ ಪಾತ್ರವಹಿಸುತ್ತಿದ್ದವು. ಇಂದು ಕೋಟಿ ಕೋಟಿ ಖರ್ಚು ಮಾಡಿ ನಿರ್ಮಿಸುವ ಚಲನಚಿತ್ರಗಳು ಸಮಾಜದ ಮೇಲೆ ಕೆಟ್ಟ ಪ್ರಭಾವವನ್ನು ಬೀರಿ, ಸಾಮಾಜಿಕ ಮೌಲ್ಯಗಳು ಅದೋಗತಿಯತ್ತ ಸಾಗಲು ಕಾರಣೀಭೂತವಾಗುತ್ತಿರುವುದು ದುರಂತ ಎಂದು ತಿಳಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪ ಮಾತನಾಡಿ, ಕಲೆ ಸಾಹಿತ್ಯ ಸಂಸ್ಕೃತಿಯನ್ನು ಅಧ್ಯಯನ ಮಾಡಿದರೆ ತಮ್ಮ ಬದುಕಿನಲ್ಲಿ ಮಹತ್ತರವಾದ ಸಾಧನೆಯನ್ನು ಸಾಧಿಸಬಹುದು. ಕಷ್ಟ ಕರ್ಪಣ್ಯಗಳ ಮಧ್ಯೆ ಹಲವಾರು ಮಹನೀಯರು ನಾಡನ್ನು ಕಟ್ಟಿ ಬೆಳೆಸಲು ಶ್ರಮಿಸಿದ್ದಾರೆ. ಇಂದಿನ ಯುವ ಪೀಳಿಗೆಯ ಓದುವ ಬರೆಯುವ ಸಂಸ್ಕೃತಿಯನ್ನು ಬೆಳೆಸಿಕೊಂಡಲ್ಲಿ ತಮ್ಮ ಜೀವನದಲ್ಲಿ ಪರಿಪೂರ್ಣತೆಯನ್ನು ಕಾಣಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಸಾಲು ದೀಪಗಳು ಕೃತಿಯ ಲೇಖಕಿ ಬಿ.ಎಂ. ಪ್ರಮೀಳಾ, ಬಾನುಲಿ ವಾರ್ತಾ ವಾಚಕ ಕೆ.ಟಿ. ಕೃಷ್ಣ ಕಾಂತ್, ತಾಲೂಕು ಕಸಾಪ ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ, ಮಹಿಳಾ ಪ್ರಥಮ ಕಾಲೇಜಿನ ಪ್ರಾಂಶುಪಾಲ ಪ್ರೊ.ಜಿ. ಚಂದ್ರಯ್ಯ, ಸಾಹಿತಿಗಳಾದ ವೈ.ಬಿ.ಎಚ್. ಜಯದೇವ್, ಮಮತಾ ವಾರನಹಳ್ಳಿ, ಲಲಿತಾ ರಾಮಮೂರ್ತಿ, ಕಲ್ವ ಮಂಜಲಿ ಗೋಪಾಲಗೌಡ, ಡಿ.ಎಂ.ಶ್ರೀರಾಮ, ಜಯಭಾರತಿ, ಪ್ರೇಮಲೀಲಾ ವೆಂಕಟೇಶ್, ಚಿಕ್ಕರೆಡ್ಡಪ್ಪ ನರಸಿಂಹರೆಡ್ಡಿ, ರಾಘವೇಂದ್ರ ಮತ್ತಿತರರು ಇದ್ದರು.

ಸಿಕೆಬಿ-1 ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಡೆದ ಸಾಹಿತಿ ಬಿ.ಎಂ.ಪ್ರಮೀಳಾ ಮಹದೇವ್ ರವರ ಸಾಲುದೀಪಗಳು ಕೃತಿಯನ್ನು ಮಂಗಳನಾಥ ಸ್ವಾಮೀಜಿ, ನಟ ನೀರ್ನಳ್ಳಿ ರಾಮಕೃಷ್ಣ ಲೋಕಾರ್ಪಣೆ ಮಾಡಿದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುನೀತರಾಜಕುಮಾರ ಪುತ್ಥಳಿ ಅನಾವರಣ
ಬೆಂಗಳೂರು ನಗರದಲ್ಲಿ ಮತ್ತೊಂದು ಮೇಲ್ಸೇತುವೆ ನಿರ್ಮಾಣ