ಕನ್ನಡಪ್ರಭ ವಾರ್ತೆ ತುಮಕೂರುಸಾಹಿತ್ಯ ಮಾನವನಿಗೆ ಜೀವನಾಧಾರ. ಮಾನವನ ಭಾವನೆಗಳನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸುವ ಮಾಧ್ಯಮ ಸಾಹಿತ್ಯ. ಉತ್ತಮ, ಉನ್ನತ ವಿಚಾರಗಳು, ಭಾವನೆಗಳು ಸರ್ವರಿಗೂ, ಮುಂದಿನ ಪೀಳಿಗೆಗೂ ಲಭ್ಯವಾಗಿಸುವ ಸಾಧನ ಸಾಹಿತ್ಯ ಎಂದು ಕಾರ್ಕಳದ ಭುವನೇಂದ್ರ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ.ಗೋವಿಂದ ಪ್ರಭು ಅಭಿಪ್ರಾಯಪಟ್ಟರು. ಅವರು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ರಾಮೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಸಂಸ್ಕೃತಿ ಸುಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರೊ.ಎಂ.ರಾಮಚಂದ್ರರವರು ಕಾರ್ಕಳದಲ್ಲಿ ಸ್ಥಾಪಿಸಿದ ಸಾಹಿತ್ಯ ಸಂಘ ಅಪೂರ್ವವಾದದ್ದು. ಚನ್ನವೀರಕಣವಿ, ಜಿ. ಎಸ್. ಶಿವರುದ್ರಪ್ಪ, ಎಸ್. ಎಲ್. ಭೈರಪ್ಪ, ಪಾಟೀಲ್ ಪುಟ್ಟಪ್ಪ, ಪ್ರೊ.ಅ.ರಾ ಮಿತ್ರ, ಎ.ಎನ್. ಮೂರ್ತಿರಾವ್ ಮೊದಲಾದ ದಿಗ್ಗಜರು ಸಾಹಿತ್ಯ ಸಂಘದ ವೇದಿಕೆಯಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆಂಬುದು ಒಂದೆಡೆ ಘನತೆಯ ವಿಷಯವೆನಿಸಿದರೆ ಪೂಜ್ಯ ಸ್ವಾಮಿ ವೀರೇಶಾನಂದ ಸರಸ್ವತೀರವರು 8 ಪ್ರವಚನಗಳನ್ನಿತ್ತು ಮಾರ್ಗದರ್ಶನ ನೀಡುತ್ತಾ ಬಂದಿರುವುದು ಗಮನಾರ್ಹ ಅಂಶ ಎಂದರು. ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮ ಹಾಗೂ ಕಾರ್ಕಳ ಸಾಹಿತ್ಯ ಸಂಘದ ನಡುವೆ ಅವಿನಾಭಾವ ಸಂಬಂಧವಿದೆ. ಕಾರ್ಕಳದ ಜನತೆಗೆ ಆಶ್ರಮದ ಅಧ್ಯಕ್ಷ ಪೂಜ್ಯ ಸ್ವಾಮಿ ವೀರೇಶಾನಂದ ಸರಸ್ವತೀ ರವರು ಲಲಿತಾಸಹಸ್ರನಾಮದ ಮಹತ್ವವನ್ನು ಅದ್ಭುತವಾಗಿ ವಿವರಿಸಿ ಮಕ್ಕಳಿಗೆ ಬೇಸಿಗೆ ಶಿಬಿರದಲ್ಲಿ ಶಕ್ತಿಶಾಲಿ ವ್ಯಕ್ತಿತ್ವ ನಿರ್ಮಾಣದ ಕುರಿತು ತಿಳಿಹೇಳಿದರು. ಜ್ಯೋತಿ ಸುನಿಲ್ ಕುಮಾರ್ ಶೆಟ್ಟಿ ಮಾತನಾಡಿ ಪೂಜ್ಯ ಸ್ವಾಮೀಜಿಯವರ ಅಕ್ಕರೆ, ಪ್ರೀತಿ ವಾತ್ಸಲ್ಯವನ್ನು ಕಾರ್ಕಳದ ಮಹಾಜನತೆ ಕೃತಜ್ಞತೆಯಿಂದ ಸ್ಮರಿಸುತ್ತಾರೆ ಎಂದರು. ಕಾರ್ಕಳ ಸಾಹಿತ್ಯ ಸಂಘದ ಪ್ರಧಾನ ಕಾರ್ಯದರ್ಶಿ ಪ್ರೊ.ಪದ್ಮನಾಭಗೌಡ ಮಾತನಾಡಿ ಸಾಹಿತ್ಯ ಸಂಘವು ಸಾಹಿತ್ಯ ಪ್ರಸರಣ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗದೆ ಸಂಗೀತ, ಭರತನಾಟ್ಯ, ಯಕ್ಷಗಾನ, ಶಿಲ್ಪಶಾಸ್ತ್ರ ಮೊದಲಾದ ಕಲೆಗಳಿಗೂ ವೇದಿಕೆಯನ್ನು ಕಲ್ಪಿಸಿ ಕೊಟ್ಟಿದೆ.ಸಂಘವು ವಿಶೇಷ ಸಂದರ್ಭಗಳಲ್ಲಿ ಹಲವಾರು ಪುಸ್ತಿಕೆಗಳನ್ನು ಲೋಕಾರ್ಪಣೆ ಮಾಡಿದ್ದಲ್ಲದೆ ವಿದ್ಯಾರ್ಥಿಗಳಿಗೆ ಪ್ರವಚನ ಕಾರ್ಯಕ್ರಮಗಳ ಮೂಲಕ ವ್ಯಕ್ತಿತ್ವ ನಿರ್ಮಾಣಕುರಿತಾಗಿ ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು.ಕಾರ್ಕಳದ ಅನಂತ ಪದ್ಮನಾಭ ಭಟ್ಟರವರು ಭಕ್ತ ಭೀಷ್ಮ ಹರಿಕಥಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಕಳದ ವಿದ್ವಾನ್ ಶ್ರೀ ರಾಘವೇಂದ್ರ ಹೆಬ್ಬಾರ್‌ರವರು ತಬಲದಲ್ಲಿ ಹಾಗೂ ಕಟೀಲಿನ ವಿದ್ವಾನ್ ಶ್ರೀ ಪ್ರಕಾಶ್ ಸಪ್ರೆರವರು ಹಾರ್ಮೋನಿಯಮ್‌ನಲ್ಲಿ ಸಹಕರಿಸಿದರು. ಆಶ್ರಮದ ಅಧ್ಯಕ್ಷ ಪೂಜ್ಯಸ್ವಾಮಿ ವೀರೇಶಾನಂದ ಸರಸ್ವತೀರವರು ಸ್ವಾಗತಿಸಿ, ನಿರೂಪಿಸಿ ವಂದಿಸಿದರು.