ಕನ್ನಡಪ್ರಭ ವಾರ್ತೆ ತುರುವೇಕೆರೆ
ಕನ್ನಡ ಬಾರದ ಬ್ಯಾಂಕ್ ನ ವ್ಯವಸ್ಥಾಪಕರಿಂದ ಗ್ರಾಹಕರಿಗೆ ಅನಾನುಕೂಲವಾಗುತ್ತಿದೆ ಎಂದು ಆರೋಪಿಸಿ ಗ್ರಾಹಕರು ಬ್ಯಾಂಕ್ ವ್ಯವಸ್ಥಾಪಕರಿಗೆ ಘೇರಾವ್ ಹಾಕಿದ ಘಟನೆ ತಾಲೂಕಿನ ದಬ್ಬೇಘಟ್ಟದ ಎಸ್ ಬಿ ಐ ಶಾಖೆ ಮುಂದೆ ನಡೆದಿದೆ.ಕಳೆದ ಎಂಟತ್ತು ತಿಂಗಳ ಹಿಂದೆ ಉತ್ತರ ಪ್ರದೇಶದ ಆಗ್ರಾ ದಿಂದ ಸಂಜೀವ್ ಕುಲ್ ಶ್ರೇಷ್ಠ ಎಂಬ ವ್ಯವಸ್ಥಾಪಕರು ತಾಲೂಕಿನ ದಬ್ಬೇಘಟ್ಟದ ಎಸ್ ಬಿ ಐ ಶಾಖೆಗೆ ಆಗಮಿಸಿದ್ದಾರೆ. ಇವರಿಗೆ ಹಿಂದಿ ಬಿಟ್ಟರೆ ಬೇರೆ ಯಾವ ಭಾಷೆಯೂ ಗೊತ್ತಿಲ್ಲ. ಅಲ್ಪ ಸ್ವಲ್ಪ ಇಂಗ್ಲೀಷ್ ಮಾತನಾಡ ಬಲ್ಲರು. ಆದರೆ ಗ್ರಾಮಾಂತರ ಪ್ರದೇಶದ ಜನರಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಗೊತ್ತಿಲ್ಲ, ಬ್ಯಾಂಕ್ ವ್ಯವಹಾರಕ್ಕೆ ಗ್ರಾಹಕರು ಆಗಮಿಸಿದ ವೇಳೆ ವ್ಯವಸ್ಥಾಪಕರು ಮತ್ತು ಗ್ರಾಹಕರ ನಡುವೆ ಭಾಷಾ ಗೊಂದಲ ಏರ್ಪಟ್ಟು ಗ್ರಾಹಕರಿಗೆ ತೊಂದರೆಯಾಗಿದೆ. ಕಳೆದ ಒಂದೆರೆಡು ತಿಂಗಳ ಹಿಂದೆ ನೂತನವಾಗಿ ಪ್ರಾರಂಭವಾಗಿರುವ ತಾಲೂಕಿನ ದಬ್ಬೇಘಟ್ಟ ಹೋಬಳಿಯ ಆಲದ ಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹಾಲು ಸರಬರಾಜು ಮಾಡುತ್ತಿರುವ ಸುಮಾರು ಅರವತ್ತು ಮಂದಿಗೆ ಡಿಸಿಸಿ ಬ್ಯಾಂಕ್ ನಿಂದ ಹಣ ಬಂದಿದೆ. ಆದರೆ ಈ ವ್ಯವಸ್ಥಾಪಕರಿಗೆ ಆಡಳಿತದ ಅನುಭವದ ಕೊರತೆ ಇರುವುದರಿಂದ ಹಾಗೂ ಭಾಷಾ ಸಮಸ್ಯೆ ಇರುವುದರಿಂದ ರೈತಾಪಿಗಳಿಗೆ ಹಣ ನೀಡಿಲ್ಲ. ಬ್ಯಾಂಕ್ ನಿಂದ ಹಣ ಸಕಾಲಕ್ಕೆ ಸಿಗದೇ ರೈತರು ಹೈರಾಣರಾಗಿದ್ದಾರೆ. ಸಂಘದ ಸಿಬ್ಬಂದಿ ಮತ್ತು ಪದಾಧಿಕಾರಿಗಳೇ ತಮ್ಮ ವೈಯಕ್ತಿಕ ಹಣದಿಂದ ಕೆಲವು ರೈತರಿಗೆ ಹಣ ನೀಡಿ ಹಬ್ಬಕ್ಕೆ ಸಹಕರಿಸಿದ್ದಾರೆಂದು ಅಧ್ಯಕ್ಷ ಕೃಷ್ಣೇಗೌಡ ಹೇಳಿದರು. ನಮ್ಮ ಹಣ ಪಡೆಯಲು ಕಳೆದ ಒಂದೆರೆಡು ತಿಂಗಳಿನಿಂದ ಬ್ಯಾಂಕ್ ಗೆ ಅಲೆದು ಸಾಕಾಗಿ ಹೋಗಿದೆ ಎಂದು ಹೇಳಿದರು.ಕಳೆದ ಎಂಟತ್ತು ತಿಂಗಳಿನಿಂದ ಆಗುತ್ತಿರುವ ಸಮಸ್ಯೆ ಕುರಿತು ಬ್ಯಾಂಕ್ ನ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿನ ಸಮಸ್ಯೆಯನ್ನು ಖುದ್ದಾಗಿ ಭೇಟಿ ಮಾಡಿ ವಿವರಿಸಿದ್ದರೂ ಸಹ ಅಧಿಕಾರಿಗಳು ಸ್ಪಂದಿಸಿಲ್ಲ. ಇದರಿಂದ ಬೇಸರಗೊಂಡು ಬ್ಯಾಂಕಿನ ಗ್ರಾಹಕರು ಇನ್ನು ಕೆಲವೇ ದಿನಗಳಲ್ಲಿ ಬ್ಯಾಂಕ್ ಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುವುದು ಎಂದು ಗ್ರಾಮದ ಮುಖಂಡರಾದ ನಂಜೇಗೌಡ (ರಾಜಣ್ಣ) ಮತ್ತು ಬಾಲಕೃಷ್ಣೇಗೌಡ ಎಚ್ಚರಿಸಿದ್ದಾರೆ. ಗ್ರಾಹಕರು ನಡೆಸಿದ ಘೇರಾವ್ ಕುರಿತು ಮಾತನಾಡಿದ ಎಸ್ ಬಿ ಐ ನ ಮುಖ್ಯ ಅಧಿಕಾರಿ ಪ್ರಕಾಶ್ ರವರು ಇನ್ನು ಏಳೆಂಟು ದಿನಗಳ ಒಳಗೆ ಕನ್ನಡ ಬಾರದ ವ್ಯವಸ್ಥಾಪಕರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗುವುದು. ಇಲ್ಲಿಗೆ ಕನ್ನಡ ಬರುವ ಮತ್ತು ಗ್ರಾಹಕರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುವ ಅಧಿಕಾರಿಯನ್ನು ಇಲ್ಲಿಗೆ ಹಾಕಲಾಗುವುದು ಎಂದು ಭರವಸೆ ನೀಡಿದ್ದಾರೆ.
ಪ್ರತಿಭಟನೆ ವೇಳೆ ಗ್ರಾಹಕರಾದ ಸುಬ್ರಾಯಪ್ಪ, ಗೊಟ್ಟೀಕೆರೆ ಶ್ರೀಧರ್, ಇಂದಿರಮ್ಮ, ಲಲಿತಮ್ಮ, ನಾಗಮ್ಮ, ಗೌರಮ್ಮ, ಲಕ್ಷ್ಮಿ ಸೇರಿದಂತೆ ಹಲವಾರು ಮಂದಿ ಇದ್ದರು.