ಧಾರ್ಮಿಕ ಮೌಲ್ಯಗಳು ಕಣ್ಮರೆಯಾದರೆ ಧರ್ಮ ಉಳಿಯದು: ಸಂಸದ ಬಿವೈಆರ್‌

KannadaprabhaNewsNetwork | Published : Apr 8, 2025 12:32 AM

ಸಾರಾಂಶ

ಸಮಾಜದ ಓರೆ ಕೋರೆಗಳನ್ನುತೀಡಿ ಮುನ್ನಡೆಸುವುದೇ ಮಹಾನುಭಾವರ ಕರ್ತವ್ಯ.ಹಾಗಾಗಿ ಧಾರ್ಮಿಕ ಮೌಲ್ಯಗಳು ಕಣ್ಮರೆಯಾದರೆ

ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ರಥೋತ್ಸವ ಕಾರ್ಯಕ್ರಮದಲ್ಲಿ ಅಭಿಮತ

ಕನ್ನಡಪ್ರಭ ವಾರ್ತೆ ಸೊರಬ

ಸಮಾಜದ ಓರೆ ಕೋರೆಗಳನ್ನು ತಿದ್ದಿ ತೀಡಿ ಮುನ್ನಡೆಸುವುದೇ ಮಹಾನುಭಾವರ ಕರ್ತವ್ಯ. ಹಾಗಾಗಿ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳು ಕಣ್ಮರೆಯಾದರೆ ಧರ್ಮ ಸಂಸ್ಕೃತಿ ಉಳಿಯಲಾರದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ತಾಲೂಕಿನ ದುಗ್ಲಿ ಕ್ಷೇತ್ರದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ರಥೋತ್ಸವ, ಲಿಂ.ಶ್ರೀ ಮುರುಘೇಂದ್ರ ಶ್ರೀಗಳ ೬ನೇ ವರ್ಷದ ಪುಣ್ಯಾರಾಧನೆ, ಶ್ರೀ ಗುರು ರೇವಣಸಿದ್ದೇಶ್ವರ ಮಠದ ಸುವರ್ಣ ಮಹೋತ್ಸವ, ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳವರ ಪಟ್ಟಾಧಿಕಾರದ ದ್ವಾದಶ ವರ್ಧಂತಿ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮ ಜಾಗೃತಿ ಸಮಾರಂಭದಲ್ಲಿ ಮಾತನಾಡಿದರು.ಶ್ರಮದ ಬೆವರಿನ ಫಲ ಶಾಶ್ವತ ಮತ್ತು ಸುಖದಾಯಕದ ಜತೆಗೆ ಆತ್ಮ ಸಂತೋಷ ವೃದ್ಧಿಸುತ್ತದೆ. ದುಗ್ಲಿ-ಕಡೇನಂದಿಹಳ್ಳಿ ರೇವಣಸಿದ್ದೇಶ್ವರ ಶ್ರೀಗಳವರ ನಿರಂತರ ಸಾಧನೆ ಪರಿಶ್ರಮ ಮತ್ತು ಪ್ರಗತಿ ಅವರ ಕ್ರಿಯಾಶೀಲ ಸತ್ಕಾರ್ಯಗಳಿಗೆ ಸಾಕ್ಷಿಯಾಗಿವೆ. ಈ ಕಾರ್ಯಕ್ರಮಕ್ಕೆ ಕಡೆನಂದಿಳ್ಳಿಯಿಂದ ದುಗ್ಲಿ ಕ್ಷೇತ್ರದವರೆಗೆ ೬೦ ಕಿ.ಮೀ. ಪಾದಯಾತ್ರೆ ಮಾಡಿರುವುದು ಭಕ್ತರಿಗಾಗಿ ಎಂಬುದನ್ನು ನಾವು ತಿಳಿಯಬೇಕು ಎಂದರು.ಸಾನ್ನಿಧ್ಯ ವಹಿಸಿದ್ದ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಸ್ವಾಮೀಜಿ ಮಾತನಾಡಿ, ಧರ್ಮ ಮತ್ತು ಆಧ್ಯಾತ್ಮಿಕತೆ ಬದುಕಿಗೆ ಆಶಾಕಿರಣ. ಮಾನವತೆಯಿಂದ ದೈವತ್ವದ ಕಡೆಗೆ ಒಯ್ಯುವ ಮಾರ್ಗವೇ ಸಂಸ್ಕೃತಿ. ಪ್ರಗತಿಪರ ಧ್ಯೇಯೋದ್ದೇಶಗಳು ಮಾನವ ಜೀವನದ ಶ್ರೇಯಸ್ಸಿಗೆ ದಾರಿದೀಪ ಎಂದು ಅಭಿಪ್ರಾಯಪಟ್ಟರು.ಅಸತ್ಯದಿಂದ ಸತ್ಯದೆಡೆಗೆ ಕತ್ತಲೆಯಿಂದ ಬೆಳಕಿನೆಡೆಗೆ ಮೃತ್ಯುವಿನಿಂದ ಅಮೃತ್ವದೆಡೆಗೆ ಕರೆದೊಯ್ಯುವುದೇ ಗುರುವಿನ ಪರಮ ಧರ್ಮ. ಆತ್ಮ ಶಕ್ತಿ ಇರುವವರನ್ನು ಯಾವ ದುಷ್ಟ ಶಕ್ತಿ ಏನನ್ನೂ ಮಾಡಲಾರದು. ಆತ್ಮವಿಶ್ವಾಸ, ನಿಶ್ಚಿತ ಗುರಿ ಮತ್ತು ಸಂಯಮ ಇವು ಮೂರು ಯಶಸ್ಸಿನ ಹಾದಿಗೆ ಕರೆದೊಯ್ಯುವ ಅಂಶಗಳು. ಕಾಯಿಸಿದ ಚಿನ್ನ ಒಡವೆಯಾಗುತ್ತದೆ. ಬಡಿದ ತಾಮ್ರ ತಂತಿಯಾಗುತ್ತದೆ. ಕೆತ್ತಿದ ಕಲ್ಲು ಮೂರ್ತಿಯಾಗುತ್ತದೆ. ಸಂಸ್ಕಾರ ಸಚ್ಚಾರಿತ್ಯ್ರದಿಂದ ಮನುಷ್ಯನ ಜೀವನ ಮೌಲ್ಯ ಸಂವರ್ಧಿಸುತ್ತದೆ ಎಂದರು.ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವ ಸಿದ್ಧಾಂತಗಳನ್ನರಿತು ಭಕ್ತರ ಬಾಳಿನಲ್ಲಿ ಬೆಳಕು ಮೂಡಿಸಿದ ಶ್ರೇಯಸ್ಸು ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳಿಗೆ ಸಲ್ಲುತ್ತದೆ. ಕೇವಲ ೧೨ ವರ್ಷದ ಅವಧಿಯಲ್ಲಿ ದುಗ್ಲಿ ಶ್ರೀ ಗುರು ರೇವಣಸಿದ್ಧೇಶ್ವರ ಮಠದ ಪರಿಸರದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಇದರ ಜೊತೆಗೆ ಕಡೇನಂದಿಹಳ್ಳಿ ತಪೋಕ್ಷೇತ್ರದಲ್ಲಿ ಹಲವಾರು ರಚನಾತ್ಮಕ ಕಾರ್ಯ ಮಾಡಿದ್ದು, ತಮಗೆ ಅತ್ಯಂತ ಸಂತೋಷ ತಂದಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಕೆಡಕುಗಳನ್ನು ಮೆಟ್ಟಿ ನಿಂತು ಒಳಿತಿನತ್ತ ಹೆಜ್ಜೆ ಹಾಕುವುದೇ ಮಾನವನ ಗುರಿಯಾಗಬೇಕು. ದುಗ್ಲಿ ಶ್ರೀಗಳವರ ಶ್ರಮ ಸಾಧನೆಗೆ ಬೆಲೆ ಕಟ್ಟಲಾಗದೆಂದು ಹರುಷ ವ್ಯಕ್ತಪಡಿಸಿದರು.ದುಗ್ಲಿ-ಕಡೇನಂದಿಹಳ್ಳಿ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಕಾರ್ಯಕ್ರಮ ಸಾನ್ನಿಧ್ಯ ವಹಿಸಿದ್ದರು. ಕಾರ್ಜುವಳ್ಳಿ ಸದಾಶಿವ ಶಿವಾಚಾರ್ಯರು, ಕನ್ನೂರು ಸೋಮನಾಥ ಶಿವಾಚಾರ್ಯರು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು, ಗೋವಿನಕೋವಿ ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗಸ್ವಾಮೀಜಿ ಪಾಲ್ಗೊಂಡು ಉಪದೇಶಾಮೃತವನ್ನಿತ್ತರು.ಪ್ರಕಾಶ ಅಗಸನಹಳ್ಳಿ, ಶರಣ ಲಿಂಗಪ್ಪಗೌಡ್ರು, ದೇವೇಂದ್ರಪ್ಪ.ಪಿ.ಎಸ್, ಶಿವಲಿಂಗಯ್ಯ ಅಲ್ಲಯ್ಯನವರ ಮಠ, ಮಲ್ಲಮ್ಮ ಕಬ್ಬೂರ, ಆನಂದಪ್ಪ ಮೊದಲಾದವರು ಪಾಲ್ಗೊಂಡಿದ್ದರು.

Share this article