-ಯಾದಗಿರಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಅಕ್ಕ ಕೆಫೆ ಉದ್ಘಾಟನೆ ಸಮಾರಂಭದಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿಕೆ
ಕನ್ನಡಪ್ರಭ ವಾರ್ತೆ ಯಾದಗಿರಿ
ಸ್ತ್ರೀಶಕ್ತಿ ಹಾಗೂ ಮಹಿಳಾ ಸ್ವಸಹಾಯ ಗುಂಪುಗಳಿಗೆ ನೆರವು ಒದಗಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ರಾಜ್ಯ ಸರ್ಕಾರ ವಿಶೇಷ ಗಮನ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪುರ ಹೇಳಿದರು.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಕ್ತದಾನ ಶಿಬಿರ, ವಿಶ್ವ ಮಹಿಳಾ ದಿನಾಚರಣೆ, ಜಲಶಕ್ತಿ ಮಾಹಿತಿ ಕೇಂದ್ರ ಹಾಗೂ "ಅಕ್ಕ ಕೆಫೆ " ಉದ್ಘಾಟಿಸಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ನೇಮಕಾತಿ ಆದೇಶ ವಿತರಿಸಿ ಅವರು ಮಾತನಾಡಿದರು.
ಗ್ರಾಮ ಹಾಗೂ ಹೋಬಳಿ ಮಟ್ಟಗಳಲ್ಲಿಯೂ ವಿವಿಧ ಸ್ತ್ರೀ ಶಕ್ತಿ , ಸ್ವ ಸಹಾಯ ಗುಂಪುಗಳು ಹೆಚ್ಚಿನ ಮಹಿಳೆಯರನ್ನು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮುಂಚೂಣಿಗೆ ಬರಬೇಕು. ಒಳ್ಳೆಯ ಕೆಲಸಗಳ ಮೂಲಕ ತಮ್ಮ ಹಾಗೂ ಸರ್ಕಾರದ ಕೀರ್ತಿಯನ್ನು ಹೆಚ್ಚಿಸುವಂತೆ ಸಲಹೆ ನೀಡಿದರು. ಜಿಲ್ಲೆಯಲ್ಲಿ ಕೆರೆ ನೀರು ಹಾಗೂ ನೀರಿನ ಸದ್ಬಳಕೆ, ಸಂಗ್ರಹಣೆ ಮತ್ತು ಕೊರತೆ ನೀಗಿಸುವ ಕುರಿತು ಮಾಹಿತಿ ಒದಗಿಸಲು ಜಲ ಶಕ್ತಿ ಮಾಹಿತಿ ಕೇಂದ್ರವನ್ನು ಸಹ ಉದ್ಘಾಟಿಸಲಾಗಿದೆ ಎಂದು ಸಚಿವರು ಹೇಳಿದರು.
ಜಿಲ್ಲೆಯಲ್ಲಿ ಸುಮಾರು 390 ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ನೇಮಕಾತಿಗೆ ಕ್ರಮ ಕೈಗೊಂಡು ಇಂದು ಕಾರ್ಯಾದೇಶ ನೀಡಲಾಗಿದೆ. ಈ ಮೂಲಕ ಬಹುದಿನಗಳ ಸಮಸ್ಯೆಯನ್ನು ನಿವಾರಿಸಿದಂತಾಗಿದೆ ಎಂದ ಅವರು, ಬಾಕಿ ಉಳಿದ ಸುಮಾರು 81 ಅಂಗನವಾಡಿ ಕಾರ್ಯಕರ್ತೆಯರ ಮತ್ತು ಅಂಗನವಾಡಿ ಸಹಾಯಕಿಯರ ನೇಮಕಾತಿಗೂ ಕ್ರಮ ಆಗಲಿದೆ ಎಂದು ಹೇಳಿದರು.ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ ಮಾತನಾಡಿ, ಹಲವು ವರ್ಷಗಳಿಂದ ನೇಮಕಾತಿ ಆಗದೆ ಬಾಕಿ ಉಳಿದಿದ್ದ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಪಾರದರ್ಶಕ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ. ಸ್ತ್ರೀಶಕ್ತಿ ಹಾಗೂ ಸ್ವಸಹಾಯ ಗುಂಪುಗಳ ಬಲವರ್ಧನೆಗೆ ಅಕ್ಕ ಕೆಫೆ ಆರಂಭಿಸಲಾಗಿದೆ ಎಂದು ಹೇಳಿದರು.
ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಪಾರದರ್ಶಕ ನೇಮಕಾತಿ ಕ್ರಮದ ಬಗ್ಗೆ ಪ್ರಶಂಸಿಸಿದ ಅವರು, ಮಹಿಳಾ ಸಬಲೀಕರಣಕ್ಕಾಗಿ ಪ್ರಜ್ಞಾವಂತ ಮಹಿಳೆಯರು ರಾಜ್ಯ ಸರ್ಕಾರದಿಂದ ಕೊಡಮಾಡುವ ಯೋಜನೆಗಳ ಲಾಭ ಪಡೆದು ಮಹಿಳಾ ಸಬಲೀಕರಣಕ್ಕೆ ನೆರವಾಗಬೇಕು. ಸುಗಮ ರಕ್ತದಾನಕ್ಕಾಗಿ ನಗರದ ಎರಡು ಮೂರು ಭಾಗಗಳಲ್ಲಿ ಕಚೇರಿ ತೆರೆದು ವ್ಯವಸ್ಥೆ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೀರನಗೌಡ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ನೇಮಕಾತಿ ಕುರಿತು ವಿವರಿಸಿದರು. ಜಿಪಂ ಮುಖ್ಯ ಲೆಕ್ಕಾಧಿಕಾರಿ ವೆಂಕಟೇಶ್ ಅಕ್ಕ ಕೆಫೆ, ಜಲಶಕ್ತಿ ಕೇಂದ್ರದ ಬಗ್ಗೆ ಮಾಹಿತಿ ನೀಡಿದರು. ಸಚಿವರು ಇದೇ ಸಂದರ್ಭದಲ್ಲಿ ಜಿ.ಪಂ. ನವೀಕೃತ ವಿಡಿಯೋ ಕಾನ್ಫರೆನ್ಸ್ ಸಭಾಂಗಣ ಉದ್ಘಾಟಿಸಿದರು.
ನಗರಸಭೆ ಅಧ್ಯಕ್ಷ ಲಲಿತಾ ಅನಪುರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನಾಯಕ ಮಾಲಿಪಾಟೀಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಎಸ್ಪಿ ಪೃಥ್ವಿಕ್ ಶಂಕರ್ ಉಪಸ್ಥಿತರಿದ್ದರು.-----
ಯಾದಗಿರಿ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜಿಲ್ಲಾ ಪಂಚಾಯತ್ ಕಚೇರಿ ಪಕ್ಕದಲ್ಲಿ ಅಕ್ಕ ಕೆಫೆ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಸ್ವಸಹಾಯ ಗುಂಪು ನಿರ್ವಹಣೆಯ ಸಿಬ್ಬಂದಿಯನ್ನು ಅಭಿನಂದಿಸಿದರು. ಶಾಸಕ ಚೆನ್ನಾರೆಡ್ಡಿ ತುನ್ನೂರು ಮುಂತಾದವರಿದ್ದರು.7ವೈಡಿಆರ್10-----
ಸೋಮವಾರ ಯಾದಗಿರಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಉಸ್ತುವಾರಿ ಸಚಿವ ದರ್ಶನಾಪುರ ನೇಮಕಾತಿ ಆದೇಶ ವಿತರಿಸಿದರು.7ವೈಡಿಆರ್11