ಬಹುಕಾಲ ನಿಲ್ಲಲಿದೆ ಜನಸಾಮಾನ್ಯರ ನೋವಿನ ಕುರಿತ ಸಾಹಿತ್ಯ: ಸಾಹಿತಿ ದಾಮೋದರ ಮೌಜೋ

KannadaprabhaNewsNetwork |  
Published : Dec 17, 2025, 02:45 AM IST
15ಡಿಡಬ್ಲೂಡಿ5ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕಾರಕ್ಕೆ ಭಾಜನರಾದ ಸಿದ್ಧಲಿಂಗ ಪಟ್ಟಣಶೆಟ್ಟಿ ಅಭಿನಂದನೆಯಲ್ಲಿ ಜ್ಞಾನಪೀಠ ಪುರಸ್ಕೃತ ಸಾಹಿತಿ ದಾಮೋದರ ಮೌಜೋ ಮಾತನಾಡಿದರು.  | Kannada Prabha

ಸಾರಾಂಶ

ದನಿಯಿಲ್ಲದವರ, ಸಮಾಜದ ಅಂಚಿನಲ್ಲಿರುವ ಹಾಗೂ ಜನಸಾಮಾನ್ಯರ ಕುರಿತು ಬರೆದ ಸಾಹಿತ್ಯ ಬಹುಕಾಲ ನಿಲ್ಲುತ್ತದೆ. ಅಂತಹ ಸಾಹಿತ್ಯ ಪಟ್ಟಣಶೆಟ್ಟಿ ಅವರದು. ನಾವು ಈ ಸಮಾಜದ ಓರೆ-ಕೋರೆಗಳ ಕುರಿತು ನಮ್ಮ ಭಿನ್ನಮತವನ್ನು ದಾಖಲಿಸಲು ಬರೆಯಬೇಕು.

ಧಾರವಾಡ:

ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಭಾರತೀಯ ಭಾಷೆಗಳ ನಡುವಿನ ಸೇತುವೆಯಾಗಿ ಬಹುತ್ವವನ್ನು ಎತ್ತಿ ಹಿಡಿದ ಲೇಖಕ ಎಂದು ಗೋವಾದ ಜ್ಞಾನಪೀಠ ಪುರಸ್ಕೃತ ಸಾಹಿತಿ ದಾಮೋದರ ಮೌಜೋ ಬಣ್ಣಿಸಿದರು.

ಪ್ರೊಗ್ರೆಸಿವ್‌ ಕಲ್ಚರಲ್‌ ಅಸೋಸಿಯೇಶನ್‌ ಆಫ್‌ ಇಂಡಿಯಾ (ಪಿಸಿಎಐ) ಇಲ್ಲಿಯ ಆಲೂರು ವೆಂಕಟರಾವ್‌ ಸಭಾಭವನದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕಾರಕ್ಕೆ ಭಾಜನರಾದ ಸಿದ್ಧಲಿಂಗ ಪಟ್ಟಣಶೆಟ್ಟಿ ಅಭಿನಂದನೆ ಉದ್ಘಾಟಿಸಿದ ಅವರು, ದನಿಯಿಲ್ಲದವರ, ಸಮಾಜದ ಅಂಚಿನಲ್ಲಿರುವ ಹಾಗೂ ಜನಸಾಮಾನ್ಯರ ಕುರಿತು ಬರೆದ ಸಾಹಿತ್ಯ ಬಹುಕಾಲ ನಿಲ್ಲುತ್ತದೆ. ಅಂತಹ ಸಾಹಿತ್ಯ ಪಟ್ಟಣಶೆಟ್ಟಿ ಅವರದು. ನಾವು ಈ ಸಮಾಜದ ಓರೆ-ಕೋರೆಗಳ ಕುರಿತು ನಮ್ಮ ಭಿನ್ನಮತವನ್ನು ದಾಖಲಿಸಲು ಬರೆಯಬೇಕು. ಅಂದಾಗ ಒಂದು ಹೊಸ ಎಚ್ಚರ ಮೂಡಲು ಸಾಧ್ಯ ಎಂದು ಎಚ್ಚರಿಸಿದರು.

ದೇಶದಲ್ಲಿ ಎಲ್ಲ ಭಾಷೆಗಳು ಶ್ರೇಷ್ಠವೇ. ಯಾವ ಭಾಷೆಯನ್ನೂ ನಾವು ತಿರಸ್ಕರಿಸಬಾರದು. ಆದರೆ, ಯಾವುದೇ ಭಾಷೆಯ ಹೇರಿಕೆಯಿಂದ ಸಮಸ್ಯೆಗಳು ಉದ್ಭವಿಸುತ್ತವೆ. ಆದ್ದರಿಂದ ಹೇರಿಕೆ ಅಗತ್ಯವಿಲ್ಲ. ಯುವ ಲೇಖಕರು ತಮ್ಮ ಪರಂಪರೆಯ ಮೌಲ್ಯಗಳನ್ನು ಹೀರಿಕೊಂಡು ಹೊಸದನ್ನು ಕಟ್ಟಲು ಪ್ರಯತ್ನಿಸಬೇಕು ಎಂದು ಅಭಿಪ್ರಾಯಿಸಿದರು.

ಸಿದ್ಧಲಿಂಗ ಪಟ್ಟಣಶೆಟ್ಟಿ (ಸಿಪ) ಕಾವ್ಯದ ಕುರಿತು ಮಾತನಾಡಿದ ಬುಕ್‌ ಬ್ರಹ್ಮ ಸಂಚಾಲಕ ದೇವು ಪತ್ತಾರ, ಸಿಪ ಆರೂವರೆ ದಶಕಗಳಿಂದ ಕಾವ್ಯ ಬರವಣಿಗೆಯಲ್ಲಿದ್ದಾರೆ. ಅವರ ಕಾವ್ಯದ ವಿಶೇಷ ಗುಣವೆಂದರೆ ಪ್ರತಿಮೆಗಳು. ಪಟ್ಟಣಶೆಟ್ಟರ ಕಾವ್ಯವೆಂದರೆ ಒಂದು ರೀತಿ ಪ್ರತಿಮೆಗಳ ಸಮೂಹ. ಅವರ ಕವಿತೆಯಿಂದ ಕವಿತೆಗೆ ಬದಲಾವಣೆ, ಬೆಳವಣಿಗೆ ಎದ್ದು ಕಾಣುತ್ತದೆ. ಅಲ್ಲಿ ಕವಿತೆ ಕಟ್ಟುವ ಕಸುಬುದಾರಿಕೆ ಕಾಣುತ್ತದೆ ಎಂದ ಅವರು, ಅವರು ಯಾವಾಗಲೂ ಅಧಿಕಾರ ಕ್ರೇಂದ್ರದಿಂದ ಅಂತರ ಕಾಯ್ದುಕೊಂಡು ಬಂದವರು. ಹಾಗಂತ ತಪ್ಪುಗಳು ಕಂಡಾಗ ಖಂಡಿಸದೇ ಕೂತವರಲ್ಲ ಎಂದು ಹೇಳಿದರು. ಸಿಪ ಗದ್ಯದ ಬಗ್ಗೆ ಲೇಖಕಿ ಡಾ. ಪ್ರಜ್ಞಾ ಮತ್ತಿಹಳ್ಳಿ ಮಾತನಾಡಿ, ಕಂಡುಂಡದ್ದನ್ನು ಬಿಡುಬೀಸಾಗಿ ಬರೆದಿರುವುದು, ಅನವಶ್ಯಕ ಹೊಗಳಿಕೆ ಮಾಡದೇ, ತೆಗಳಲೂ ಹೋಗದೇ ಆಪ್ತವಾಗುವ ಗುಣ ಅವರ ಗದ್ಯ ಬರವಣಿಗೆಯಲ್ಲಿ ಕಾಣ ಸಿಗುತ್ತದೆ ಎಂದರು.

ರಂಗಕರ್ಮಿ ಶಿರೀಷ್‌ ಜೋಶಿ ಸಿಪ ರಂಗಸಾಹಿತ್ಯದ ಕುರಿತು ಮಾತನಾಡಿದರು. ಅಭಿನಂದನೆ ಸ್ವೀಕರಿಸಿದ ಪಟ್ಟಣಶೆಟ್ಟಿ, ಯುವಲೇಖಕರು ಸತತ ಓದು, ಬರವಣಿಗೆಯಿಂದ ಸಾಹಿತ್ಯದಲ್ಲಿ ಮುಂದುವರಿಯಬೇಕು. ಸಾಮಾನ್ಯ ಜನರ ಒಡನಾಟದಲ್ಲಿ ಬದುಕಿನ ಅನುಭವಗಳನ್ನು ದಾಖಲಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಧಾರವಾಡ ಜನಜಾಗೃತಿ ಅಭಿಯಾನದ ಸಲಹೆಗಾರ ರಾಮಾಂಜನಪ್ಪ ಆಲ್ದಳ್ಳಿ ಇದ್ದರು. ಮಲ್ಲು ಹುಡೇದ ಪ್ರಾಸ್ತಾವಿಕ ಮಾತನಾಡಿದರು. ಅಶ್ವಿನಿ ನಿರೂಪಿಸಿದರು. ಹೇಮಾ ಪಟ್ಟಣಶೆಟ್ಟಿ, ಸುನೀತಕುಮಾರ ಶೆಟ್ಟಿ‌, ಅಲಕಾ ರಾವ್, ಕಳಕೇಶ ಎಸ್. ಇದ್ದರು. ಸುನಂದಾ ಕಡಮೆ, ವಿಠ್ಠಲ ದಳವಾಯಿ ಸಂವಾದ ನಡೆಸಿಕೊಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ