ಕನ್ನಡಪ್ರಭ ವಾರ್ತೆ ಗೋಕರ್ಣ
ಪ್ರತಿ ವರ್ಷ ಇಲ್ಲಿಗೆ ಬರುವ ಇಸ್ರೇಲ್ ಪ್ರಜೆಗಳಲ್ಲಿ ಓರ್ವ ದಂಪತಿಗಳು ಇಲ್ಲಿನ ಓಂ ಕಡಲತೀರದ ಬಳಿಯ ವಸತಿ ಗೃಹದಲ್ಲಿ ವಾಸವಿರುತ್ತಾರೆ. ಡಿಸೆಂಬರ್ ತಿಂಗಳಲ್ಲಿ ಬರುವ ಈ ಸಮುದಾಯದವರ ಹಬ್ಬವನ್ನ ವಿಜೃಂಭಣೆಯಿಂದ ಆಚರಿಸುವುದು ವಾಡಿಕೆಯಾಗಿದ್ದು, ಇಸ್ರೇಲ್‌ನಿಂದ ಬಂದು ಈ ಭಾಗದ ವಿವಿಧ ವಸತಿ ಗೃಹದಲ್ಲಿ ಉಳಿದುಕೊಂಡಿರುವವರು ಈ ಸಮಯದಲ್ಲಿ ಒಂದಾಗುತ್ತಾರೆ. ಸಂಜೆ 8 ಗಂಟೆಯಿಂದ 9ರವರೆಗೆ ಪೂಜೆ, ಪ್ರಾರ್ಥನೆ ನಂತರ ಉಪಹಾರ ನಡೆಯುತ್ತದೆ. ನಮ್ಮಲ್ಲಿಯ ಹಬ್ಬ ಆಚರಿಸುವಾಗ ಸಂಬಂಧಿಕರು ಬಂದಂತೆ ಇಸ್ರೇಲ್‌ನಿಂದ ಪ್ರವಾಸಿಗರು ಇಲ್ಲಿ ಒಟ್ಟಾಗುವುದು ವಿಶೇಷವಾಗಿದೆ. ಈ ವೇಳೆ ಯಾವುದೇ ಅಹಿತರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಆ ದೇಶದ ರಾಯಭಾರಿ ಕಚೇರಿಯ ಸೂಚನೆಯಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ, ಮಹಿಳಾ ಸಿಬ್ಬಂದಿ, ಕಾರವಾರದ ಪೊಲೀಸ್ ಮೀಸಲು ಪಡೆ ಸಹ ನಿಯೋಜಿಸಲಾಗಿದೆ. ಒಟ್ಟು 9 ದಿನ ಇವರ ಆಚರಣೆ ನಡೆಯಲಿದ್ದು, ಅಲ್ಲಿಯವರೆಗೂ ಆ ಸಮಯದಲ್ಲಿ ಪೊಲೀಸ್ ಕಾವಲು ಇರಲಿದೆ.
ಡಿವೈಎಸ್ಪಿ ಭೇಟಿ:ಮಂಗಳವಾರ ಸಂಜೆ ಭಟ್ಕಳ ಡಿವೈಎಸ್ಪಿ ಮಹೇಶ ಎಂ.ಕೆ. ಭೇಟಿ ನೀಡಿದ್ದು, ಎಷ್ಟು ಜನ ವಿದೇಶಿಗರು ಭಾಗವಹಿಸುತ್ತಿದ್ದಾರೆ ಹಾಗೂ ಯಾವ ಕಡೆಯಿಂದ ಬರುತ್ತಾರೆ. ಭದ್ರತಾ ಕ್ರಮ ಮತ್ತಿತರ ಮಾಹಿತಿ ಪಡೆದು ಸೂಕ್ತ ಸಲಹೆ-ಸೂಚನೆ ನೀಡಿದ್ದಾರೆ. ಈ ವೇಳೆ ಪಿಎಸ್‌ಐ ಖಾದರ್ ಬಾಷಾ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.