ಕನ್ನಡಪ್ರಭವಾರ್ತೆ ಚಿತ್ರದುರ್ಗ
ವಿಜಯದಶಮಿ ಅಂಗವಾಗಿ ಆರ್‌ಎಸ್‌ಎಸ್ ವತಿಯಿಂದ ಭಾನುವಾರ ಆಯೋಜಿಸಿದ್ದ ಪಥಸಂಚಲನ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು ಪರಿಸರಕ್ಕೆ ಹೆಚ್ಚು ಹಾನಿಯಾಗದಂತೆ ನಮ್ಮ ಜೀವನಪದ್ಧತಿ ರೂಢಿಸಿಕೊಳ್ಳಬೇಕಿದೆ. ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವ್ಯರ್ಥವಾಗದೆ ಗೊಬ್ಬರವಾಗುವಂತೆ ನೋಡಿಕೊಳ್ಳಬೇಕು ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇಂದು ಭಾರತೀಯ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ತನ್ನ ಛಾಪು ಮೂಡಿಸಿದೆ. ಕೆಲವೆ ಹುಡುಗರೊಂದಿಗೆ 1925ರಲ್ಲಿ ನಾಗಪುರದಲ್ಲಿ ಆರಂಭಗೊಂಡ ಸಂಘ ಇಂದು ವಿಶ್ವವ್ಯಾಪಿ ವಿಸ್ತಾರಗೊಂಡಿದೆ. ಕಳೆದ 99 ವರ್ಷಗಳಲ್ಲಿ ಸಂಘ ದೇಶದ ಎಲ್ಲ ಕ್ಷೇತ್ರ, ಗ್ರಾಮಗಳಿಗೂ ತಲುಪಿದೆ ಎಂದರು.ಭಾರತೀಯ ಸಂಸ್ಕೃತಿಯಲ್ಲಿ ಪ್ರತಿ ಮನೆಗಳೂ ಆಚಾರ, ವಿಚಾರ ಬೇರೆ ಇವೆ. ದೇವರು, ಆಚಾರ, ವಿಚಾರ, ಭಾಷೆ ಬೇರೆಯಾಗಿದ್ದರೂ ಸಾಮರಸ್ಯ ಹಾಸು ಹೊಕ್ಕಾಗಿದೆ. ಒಂದೇ ದೇವರು, ಒಂದೇ ಗ್ರಂಥ, ಒಂದೇ ಆಚರಣೆ ಮಾಡುವ ಜನರಿರುವ ದೇಶಗಳಲ್ಲೂ ಗಲಭೆ, ಯುದ್ಧಗಳಾಗುತ್ತಿವೆ. ನಮ್ಮಲ್ಲಿ ಆ ರೀತಿ ಭಾವನೆಯಿಲ್ಲ. ಸಾಮರಸ್ಯದ ಕಾರಣಕ್ಕೆ ಇಡೀ ವಿಶ್ವವೇ ಭಾರತದ್ದ ನೋಡುತ್ತಿದೆ. ಭಾರತೀಯ ಸಮಾಜ ಮೌಲ್ಯಯುತವಾಗಿದೆ ಎಂಬ ಅರಿವು ಬಂದಿದೆ ಎಂದರು.
ಆರ್‌ಎಸ್‌ಎಸ್ ತನ್ನ ಶಕ್ತಿ, ಸಂಘಟನೆಯನ್ನು ಜಗದ ಪರಿವರ್ತನೆ ಹಾಗೂ ವಿಶ್ವ ಮಂಗಲಕ್ಕೆ ಬಳಸಿಕೊಳ್ಳುತ್ತಿದೆ. ಆರ್‌ಎಸ್‌ಎಸ್ ಸರಸಂಘಚಾಲಕರು ಐದು ಅಂಶಗಳನ್ನು ಉಲ್ಲೇಖಿಸಿದ್ದಾರೆ. ಮೊದಲು ಕುಟುಂಬ, ನಂತರ ಪರಿಸರ ಸಂರಕ್ಷಣೆ, ಸ್ವದೇಶಿ ಜೀವನ ಪದ್ಧತಿ, ಸಾಮರಸ್ಯ ಹಾಗೂ ನಾಗರೀಕ ಶಿಷ್ಟಾಚಾರಗಳನ್ನು ಪಾಲಿಸುವ ಬಗ್ಗೆ ಪ್ರತಿ ನಾಗರಿಕನಲ್ಲಿ ಸ್ವಾಭಿಮಾನವ ಬೆಳೆಸಲಾಗುತ್ತಿದೆ ಎಂದರು.