ಸಿರಿಧಾನ್ಯಗಳನ್ನ ಬಳಸಿ ಆರೋಗ್ಯಕರ ಜೀವನ ನಡೆಸಿ

KannadaprabhaNewsNetwork | Published : Dec 7, 2024 12:32 AM

ಸಾರಾಂಶ

ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ತಾಲೂಕು ಹಾಗೂ ಗ್ರಾಮಗಳಿಂದ ಒಟ್ಟು 59 ಮಹಿಳೆಯರು ವೈವಿಧ್ಯಮಯ ಹಾಗೂ ರುಚಿಕರ ವಿವಿಧ ಸಿರಿಧಾನ್ಯದ ಹಾಗೂ ಮರೆತು ಹೋದ ಖಾದ್ಯಗಳನ್ನು ಮನೆಯಲ್ಲಿ ತಯಾರಿಸಿಕೊಂಡು ಬಂದು ಪ್ರದರ್ಶಿಸಿದರು.

ಗದಗ: ಸಿರಿಧಾನ್ಯಗಳು ಕಡಿಮೆ ರಸಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದ ಬೆಳೆಯುತ್ತಿದ್ದು, ಪೌಷ್ಟಿಕಾಂಶಗಳ ಆಗರವಾಗಿರುತ್ತವೆ. ಇವುಗಳ ನಿಯಮಿತವಾದ ಸೇವನೆಯಿಂದ, ಈಗಿನ ಜೀವನ ಶೈಲಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಸಕ್ಕರೆ ರೋಗ,ರಕ್ತದೊತ್ತಡ, ಬೊಜ್ಜು ಇತ್ಯಾದಿ ಯಶಸ್ವಿಯಾಗಿ ನಿರ್ವಹಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

ತಾಲೂಕಿನ ಹುಲಕೋಟಿ ಗ್ರಾಮದ ಕೆವಿಕಯಲ್ಲಿ ಕೃಷಿ ಇಲಾಖೆಯಿಂದ ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ 2024-25ರ ಅಂಗವಾಗಿ ನಡೆದ ಜಿಲ್ಲಾ ಮಟ್ಟದಲ್ಲಿ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಸಿರಿಧಾನ್ಯಗಳನ್ನು ಹೆಚ್ಚು ಹೆಚ್ಚಾಗಿ ಬಳಸಿ ಆರೋಗ್ಯಕರ ಜೀವನ ನಡೆಸಬೇಕು ಎಂದ ಅವರು, ಪ್ರದರ್ಶನದಲ್ಲಿದ್ದ ಎಲ್ಲ ಖಾದ್ಯ ವೀಕ್ಷಿಸಿ, ರುಚಿ ಸವಿದು, ಭಾಗವಹಿಸಿದ ಎಲ್ಲ ಸ್ಪರ್ಧಾರ್ಥಿಗಳನ್ನು ಶ್ಲಾಘಿಸಿದರು.

ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ತಾಲೂಕು ಹಾಗೂ ಗ್ರಾಮಗಳಿಂದ ಒಟ್ಟು 59 ಮಹಿಳೆಯರು ವೈವಿಧ್ಯಮಯ ಹಾಗೂ ರುಚಿಕರ ವಿವಿಧ ಸಿರಿಧಾನ್ಯದ ಹಾಗೂ ಮರೆತು ಹೋದ ಖಾದ್ಯಗಳನ್ನು ಮನೆಯಲ್ಲಿ ತಯಾರಿಸಿಕೊಂಡು ಬಂದು ಪ್ರದರ್ಶಿಸಿದರು.

ಸಿರಿಧಾನ್ಯದ ಸಿಹಿ ಖಾದ್ಯಗಳಲ್ಲಿ ವಿವಿಧ ಪಾಯಸಗಳು, ಹೋಳಿಗೆಗಳು, ಲಾಡುಗಳು, ಹಲ್ವಾ, ಕೇಕ್, ಹಾಲುಬಾಯಿ, ಕಡುಬು, ಮಾಲ್ದಿ ಇತ್ಯಾದಿಗಳನ್ನು ರುಚಿಕರವಾಗಿ ತಯಾರಿಸಿ, ಆಕರ್ಷಕವಾಗಿ ಪ್ರದರ್ಶಿಸಿದರು. ಹಾಗೆಯೇ ಸಿರಿಧಾನ್ಯದ ಖಾರದ ಖಾದ್ಯಗಳಲ್ಲಿ ರುಚಿಕರವಾದ ವಡೆಗಳು, ನುಚ್ಚು, ಅಂಬಲಿ, ಹಪ್ಪಳ, ಚಕ್ಕುಲಿ, ಕಿಚಡಿ, ರೋಲ್ಸ್, ರೊಟ್ಟಿಗಳು, ತಾಲಿಪಟ್ಟುಗಳು, ಎಣ್ಣೆಗಡುಬು, ಪಲಾವ್, ದೋಸೆ , ಮಾಲ್ಟ್ ಇತ್ಯಾದಿಗಳು ನೋಡುಗರನ್ನು ಸವಿಯಲು ಕೈ ಬೀಸಿ ಕರೆಯುತ್ತಿದ್ದವು. ಇವುಗಳಲ್ಲದೇ ಮರೆತು ಹೋದ ಖಾದ್ಯಗಳ ವಿಭಾಗದಲ್ಲಿ ಪೌಷ್ಟಿಕವಾದ ಗುಳ್ಳಡಿಕೆ ಉಂಡಿ, ಹೊಂಬಾಳೆ ವಡೆ, ಹಲಸಿನ ಎಲೆ ಇಡ್ಲಿ, ಕೇಸುವಿನ ಗಡ್ಡೆಯ ಕಟ್ಲೆಟ್ ಇತ್ಯಾದಿಗಳು ಬಾಯಲ್ಲಿ ನೀರೂರಿಸುವಂತಿದ್ದವು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣಾ ಮುದುಕಮ್ಮನವರ, ಕೆವಿಕೆ ಮುಖ್ಯಸ್ಥೆ ಸುಧಾ ಮಂಕಣಿ, ಕೃಷಿ ಉಪ ನಿರ್ದೇಶಕಿ ಸ್ಫೂರ್ತಿ ಜಿ.ಎಸ್. ನಿರ್ಣಾಯಕರಾಗಿ ಭಾಗವಹಿಸಿದ್ದರು.

ಸಿರಿಧಾನ್ಯದ ಸಿಹಿ ಖಾದ್ಯಗಳು, ಸಿರಿಧಾನ್ಯದ ಖಾರದ ಖಾದ್ಯಗಳು ಹಾಗೂ ಮರೆತು ಹೋದ ಖಾದ್ಯಗಳ 3 ವಿಭಾಗಗಳಲ್ಲಿ ತಲಾ ಮೂರು ಬಹುಮಾನ ಪ್ರಮಾಣ ಪತ್ರಗಳೊಂದಿಗೆ ವಿತರಿಸಲಾಯಿತು. ಪ್ರಥಮ ಬಹುಮಾನ ಪಡೆದವರು ಜನೆವರಿಯಲ್ಲಿ ಏರ್ಪಡಿಸುವ ರಾಜ್ಯಮಟ್ಟದ ಸಿರಿಧಾನ್ಯದ ಪಾಕ ಸ್ಪರ್ಧೆಯಲ್ಲಿ ಕಡ್ಡಾಯವಾಗಿ ಭಾಗವಹಿಸಲು ತಿಳಿಸಲಾಯಿತು. ಭಾಗವಹಿಸಿದ ಎಲ್ಲ ಅಭ್ಯರ್ಥಿಗಳಿಗೂ ಅಭಿನಂದನಾ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ.ಎಚ್., ಸೀಮಾ ಸವಣೂರ, ಮಂಜುನಾಥ ಭರಮಗೌಡರ ಸೇರಿದಂತೆ ಸಿಬ್ಬಂದಿಗಳು ಇದ್ದರು.

Share this article