ಒತ್ತಡ ರಹಿತ ಜೀವನ ನಡೆಸಿ: ನ್ಯಾ. ಚಂದ್ರಶೇಖರ

KannadaprabhaNewsNetwork | Published : Dec 19, 2024 12:30 AM

ಸಾರಾಂಶ

ಅತೀಯಾದ ಆಡಂಬರ ಜೀವನ ಶೈಲಿಯಿಂದ ಪ್ರಕೃತಿಯನ್ನು ನಾಶ ಮಾಡುತ್ತಾ ಹೋಗುತ್ತಿರುವುದರಿಂದ ಮನುಷ್ಯನ ಜೀವನಕ್ಕೆ ನೆಮ್ಮದಿಯಿಲ್ಲದಂತಾಗಿದೆ.

ಆಯುಷ್ ಆರೋಗ್ಯ ತಪಾಸಣೆ, ಚಿಕಿತ್ಸಾ ಶಿಬಿರ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಅತೀಯಾದ ಆಡಂಬರ ಜೀವನ ಶೈಲಿಯಿಂದ ಪ್ರಕೃತಿಯನ್ನು ನಾಶ ಮಾಡುತ್ತಾ ಹೋಗುತ್ತಿರುವುದರಿಂದ ಮನುಷ್ಯನ ಜೀವನಕ್ಕೆ ನೆಮ್ಮದಿಯಿಲ್ಲದಂತಾಗಿದೆ ಎಂದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಚಂದ್ರಶೇಖರ ಸಿ. ಹೇಳಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಬುಧವಾರ ಕಾನೂನು ಸೇವೆಗಳ ಪ್ರಾಧಿಕಾರ, ಆಯುಷ ಇಲಾಖೆ ಹಾಗೂ ತಾಲೂಕು ವಕೀಲರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಆಯುಷ್ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು. ನಿರಂತರ ಒತ್ತಡ ನಮ್ಮೆಲ್ಲರ ಬದುಕಿಗೆ ಮಾರಕವಾಗಲಿದೆ. ಒತ್ತಡ ರಹಿತ ಜೀವನ ನಡೆಸಲು ಆರೋಗ್ಯದಲ್ಲಿ ಬದಲಾವಣೆ ತಂದುಕೊಳ್ಳಬೇಕು ಎಂದರು.

ನಮ್ಮ ಸುತ್ತಮುತ್ತಲಿರುವ ಪ್ರಕೃತಿಯನ್ನು ನಾಶ ಮಾಡುವ ಮೂಲಕ ಶುದ್ಧ ಗಾಳಿ, ನೀರು, ಬೆಳಕು ಸಿಗದಂತೆ ಎಲ್ಲರೂ ಒತ್ತಡದ ಬದುಕಿನಿಂದ ಮಾನಸಿಕ ತೊಂದರೆ ಅನುಭವಿಸುತ್ತಿದ್ದೇವೆ. ಇದರಿಂದ ಮುಕ್ತಿ ಹೊಂದಲು ನಾವುಗಳು ಹೆಚ್ಚು ಔಷಧಿ ಸಸ್ಯಗಳನ್ನು ಬೆಳೆಯುವ ಮೂಲಕ ಅವುಗಳನ್ನು ನಮ್ಮ ಜೀವನಶೈಲಿಯಲ್ಲಿ ಅಳವಡಿಸಿಕೊಂಡಾಗ ಉತ್ತಮ ಆರೋಗ್ಯ ಸಂಪಾದಿಸಿಕೊಳ್ಳಬಹುದು ಎಂದು ಹೇಳಿದರು.

ಸಿವಿಲ್ ಹಿರಿಯ ಶ್ರೇಣಿ ನ್ಯಾಯಾಧೀಶ ರಂಗಸ್ವಾಮಿ ಜೆ. ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲ ಸಂಪತ್ತಿಗಿಂತಲೂ ಆರೋಗ್ಯ ಸಂಪತ್ತು ಬಹು ಮುಖ್ಯ. ನಮ್ಮ ಆರೋಗ್ಯವೇ ಸರಿಯಿಲ್ಲದ್ದರೆ ಎಷ್ಟು ಕೋಟಿ ಗಳಿಸಿದರೇನು. ಹೀಗಾಗಿ ನಾವುಗಳು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದರು.

ಜಿಲ್ಲಾ ಆಯುಷ್‌ ಅಧಿಕಾರಿ ಡಾ. ಪರ್ವತಗೌಡ ಹಿರೇಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಆಯುರ್ವೇದಕ್ಕೆ ಇರುವಂತಹ ಶಕ್ತಿ, ಸಾರ್ಮಥ್ಯ ಯಾವುದಕ್ಕೂ ಇಲ್ಲ. ಅಂತಹ ಅಗಾಧ ಶಕ್ತಿಯನ್ನು ಆಯುರ್ವೇದ ಹೊಂದಿದೆ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಪ್ರತಿಯೊಬ್ಬರು ಮನೆಯ ಆವರಣದಲ್ಲಿ ಅಮೃತ ಬಳ್ಳಿ ಬೆಳೆಸಿರಿ ಅದು ಆರೋಗ್ಯಕ್ಕೆ ಸಂಜೀವಿನಿಯಾಗಿದೆ. ಇನ್ನೂ ಪ್ರತಿಯೊಬ್ಬರು ತಂತಮ್ಮ ಮನೆಯಲ್ಲಿ ಮಳೆ ನೀರು ಕೊಯ್ಲು ಅಳವಡಿಸಿಕೊಂಡು ತಮ್ಮ ಮನೆಯ ಮೇಲ್ಚಾವಣಿಯಿಂದ ಮಳೆ ನೀರು ಸಂಗ್ರಹಿಸಿಕೊಂಡು ಬಳಕೆ ಮಾಡುವುದರಿಂದ ಯಾವ ಕಾಯಿಲೆಯೂ ಬರುವುದಿಲ್ಲ. ನಾನು ಕಳೆದ ೨೦ ವರ್ಷಗಳಿಂದ ಮಳೆ ನೀರು ಸಂಗ್ರಹಿಸಿಕೊಂಡು ಮನೆ ಬಳಕೆ ಮಾಡುತ್ತಿದ್ದೇನೆ. ಈ ಪದ್ದತಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಪ್ರಕಾಶ ಬೆಲೇರಿ, ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪೋಲಿಸಪಾಟೀಲ, ಸಹಾಯಕ ಸರ್ಕಾರಿ ವಕೀಲ ರವಿ ಹುಣಸಿಮರದ, ಈರಣ್ಣ ಕೋಳುರು, ಮಹಾಂತೇಶ ಬೂದಗುಂಪಿ, ತಾಲೂಕು ಆಯುಷ್‌ ಆಡಳಿತಾಧಿಕಾರಿ ಡಾ. ವಿರುಪಾಕ್ಷಿ ತಾಳಿಕೋಟಿ, ತಜ್ಞ ವೈದ್ಯರಾದ ಡಾ. ವಿವೇಕ ವಾಗುಲೆ, ಡಾ. ಶಿಲ್ಪಾ, ಡಾ. ವಿಜಯಲಕ್ಷ್ಮೀ, ಡಾ. ಜ್ಯೋತಿ, ಡಾ. ಪುಷ್ಪಾ ಮತ್ತಿತರರು ಇದ್ದರು.

Share this article