ಸರಳ ವಿವಾಹವಾಗಿ ಆದರ್ಶ ಬದುಕು ನಡೆಸಿ: ಜಿಲ್ಲಾಧಿಕಾರಿ ಡಾ.ಕುಮಾರ

KannadaprabhaNewsNetwork |  
Published : Oct 29, 2025, 01:00 AM IST
೨೮ಕೆಎಂಎನ್‌ಡಿ-೬ಮಂಡ್ಯದ ಗಜೇಂದ್ರಮೋಕ್ಷ ಕೊಳದ ಬಳಿ ಡಿ.ದೇವರಾಜ ಅರಸು ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜನೆಗೊಂಡಿದ್ದ ಸರಳ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿಶ್ವ ಒಕ್ಕಲಿಗರ ಮಠದ ಪೀಠಾಧಿಪತಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಹಾಗೂ ಜಿಲ್ಲಾಧಿಕಾರಿ ಡಾ.ಕುಮಾರ ಗಿಡ ನೆಟ್ಟರು. | Kannada Prabha

ಸಾರಾಂಶ

ವೈಭವದಿಂದ ಮದುವೆಯಾಗುವುದರಲ್ಲಿ ಸುಖವನ್ನು ಕಾಣಲಾಗುವುದಿಲ್ಲ. ಅದು ಆ ದಿನಕ್ಕಷ್ಟೇ ಸಂಭ್ರಮ ಸೀಮಿತವಾಗಿರುತ್ತದೆ. ಆದ್ದರಿಂದ ಆರ್ಥಿಕ ಚೇತರಿಕೆ ಕಾಣಲಾಗದೆ ಸಾಲದ ಸುಳಿಯಲ್ಲೇ ಸಿಲುಕಬೇಕಾಗುತ್ತದೆ. ವಿದ್ಯಾವಂತ ಯುವಜನರು ಸರಳ ವಿವಾಹದತ್ತ ಒಲವನ್ನು ತೋರಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಕುವೆಂಪು ಅವರ ಮಂತ್ರಮಾಂಗಲ್ಯ ಮೂಲಕ ಸರಳ ವಿವಾಹ ಅನುಸರಿಸುವುದರಿಂದ ಆರ್ಥಿಕ ಸಂಕಷ್ಟದಿಂದ ದೂರವಾಗಬಹುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ ನೀಡಿದರು.

ಡಿ.ದೇವರಾಜ ಅರಸು ಚಾರಿಟಬಲ್ ಟ್ರಸ್ಟ್‌ನಿಂದ ನಗರದ ಗಜೇಂದ್ರಮೋಕ್ಷ ಕೊಳ ಸಮೀಪ ಆಯೋಜಿಸಿದ್ದ ಚಂದನ್-ಶೋಭಾ ಅವರ ಸರಳ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಾಲ ಮಾಡಿ ಅದ್ಧೂರಿಯಾಗಿ ಮದುವೆ ಮಾಡುವುದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಅದ್ಧೂರಿತನಕ್ಕಿಂತ ಅನ್ಯೋನ್ಯತೆ ಬಹಳ ಮುಖ್ಯ. ಅದಕ್ಕಾಗಿ ಎಲ್ಲರೂ ಸರಳವಾಗಿ ವಿವಾಹವಾಗಿ ಆದರ್ಶ ಬದುಕು ನಡೆಸಬೇಕು ಎಂದರು.

ವೈಭವದಿಂದ ಮದುವೆಯಾಗುವುದರಲ್ಲಿ ಸುಖವನ್ನು ಕಾಣಲಾಗುವುದಿಲ್ಲ. ಅದು ಆ ದಿನಕ್ಕಷ್ಟೇ ಸಂಭ್ರಮ ಸೀಮಿತವಾಗಿರುತ್ತದೆ. ಆದ್ದರಿಂದ ಆರ್ಥಿಕ ಚೇತರಿಕೆ ಕಾಣಲಾಗದೆ ಸಾಲದ ಸುಳಿಯಲ್ಲೇ ಸಿಲುಕಬೇಕಾಗುತ್ತದೆ. ವಿದ್ಯಾವಂತ ಯುವಜನರು ಸರಳ ವಿವಾಹದತ್ತ ಒಲವನ್ನು ತೋರಬೇಕು. ವಿವಾಹಕ್ಕೆ ಇರುವ ಮಹತ್ವವನ್ನು ಸರಳ ವಿವಾಹದ ಮೂಲಕ ಎತ್ತಿಹಿಡಿಯುವ ಮೂಲಕ ಸಮಾಜಕ್ಕೆ ಮಾದರಿಗಳಾಗಬೇಕು ಎಂದು ಆಶಿಸಿದರು.

ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ಮದುವೆ ಎನ್ನುವುದು ಪ್ರತಿಷ್ಠೆಯಲ್ಲ. ಅದ್ಧೂರಿತನ ತೋರಿಸುವುದರಿಂದ ಏನನ್ನೂ ಸಾಧಿಸಲಾಗದು. ಸರಳವಿವಾಹದಿಂದ ಹಣ ಉಳಿತಾಯವಾಗುತ್ತದೆ. ಆಹಾರವನ್ನು ಚೆಲ್ಲುವುದೂ ತಪ್ಪುತ್ತದೆ. ನವಜೀವನಕ್ಕೆ ಕಾಲಿರಿಸುವ ದಂಪತಿ ಪರಸ್ಪರ ಪ್ರೀತಿ, ನಂಬಿಕೆ, ವಿಶ್ವಾಸದಿಂದ ಅರ್ಥಪೂರ್ಣ ಬದುಕು ಸಾಗಿಸಬೇಕು. ಸರಳ ವಿವಾಹಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು ಎಂದು ಆಶಿಸಿದರು.

ಕಲ್ಯಾಣಿಯ ಪ್ರಶಾಂತ ವಾತಾವರಣದಲ್ಲಿ ನಿರ್ಮಾಣವಾಗಿರುವ ಯೋಗ ಕುಟೀರ ಹಾಗೂ ಜೀರ್ಣೋದ್ಧಾರಗೊಂಡ ಕೊಳ ಮತ್ತು ಪುರಾತನ ಮಂಟಪವನ್ನು ಅಭಿವೃದ್ಧಿಗೊಳಿಸಿರುವ ಎಂ.ಬಿ.ರಮೇಶ್ ನೇತೃತ್ವದ ತಂಡದ ಶ್ರಮವನ್ನು ಶ್ಲಾಘಿಸಿದರು ಮಂಟಪದ ಮುಂಭಾಗ ತಲಾ ಒಂದೊಂದು ಗಿಡ ನೆಟ್ಟು ನೀರೆರದರು.

ದೇವರಾಜ ಅರಸು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ನಾಗರತ್ನ, ಪವಿತ್ರಾ, ರಾಜ್ಯ ವಿಶ್ವಕರ್ಮ ಸಮಾಜದ ನಿರ್ದೇಶಕಿ ರಾಧಾ ರಮೇಶ್, ಎಂ.ಬಿ.ಮೇಶ್, ಮೈಸೂರು ಮುಡಾ ಮಾಜಿ ಅಧ್ಯಕ್ಷೆ ಎಚ್.ಎನ್.ವಿಜಯ, ನಗರಸಭೆ ಸದಸ್ಯ ಶಿವಲಿಂಗು, ಅರ್ಜುನ್ ಪುರೋಹಿತ್, ಕೃಷ್ಣ, ನಂದೀಶ್, ಸಂತೋಷ್, ಸಿದ್ದರಾಜು, ಶಿವಣ್ಣ, ಸತೀಶ್‌ಶೆಟ್ಟಿ ಇತರರಿದ್ದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು