- ಸಿಎಂ ಸಿದ್ದರಾಮಯ್ಯ ಬಿರುಗಾಳಿ ಇದ್ದಂತೆ, ನಮ್ಮಂತ ಹೊಸಬರಿಗೆ ಶಕ್ತಿಯಾಗಿದ್ದಾರೆ: ಮಾಯಕೊಂಡ ಶಾಸಕ ಬಸವಂತಪ್ಪ - - -
ಕನ್ನಡಪ್ರಭ ವಾರ್ತೆ ದಾವಣಗೆರೆರಾಜ್ಯದಲ್ಲಿ ಸಂಪುಟ ಪುನಾರಚನೆ, ಸಿಎಂ ಬದಲಾವಣೆ ಎಂಬುದೆಲ್ಲವೂ ಹೈಕಮಾಂಡ್‌ಗೆ ಬಿಟ್ಟ ವಿಚಾರವಾಗಿದೆ. ಶಾಂತಿ-ಕ್ರಾಂತಿ ಅನ್ನೋದೂ ನಮ್ಮ ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ರಾಜ್ಯ ಸರ್ಕಾರದ ಡಿಸೆಂಬರ್ ಕ್ರಾಂತಿ ಕುರಿತ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ನಿರ್ಧಾರಕ್ಕೆ ನಮ್ಮ ಸರ್ಕಾರ ಬದ್ಧವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆಯೇ ರಾಜಕೀಯ ನಿವೃತ್ತಿ ಬಗ್ಗೆ ನಿರ್ಣಯ ಕೈಗೊಂಡಿದ್ದರು. ಆದರೆ, ಮುಖ್ಯಮಂತ್ರಿಯಾಗಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಎಲ್ಲ ವರ್ಗಗಳ ಹಿತಕಾಯುವ ಸಿದ್ದರಾಮಯ್ಯ ಅವರು 2028ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲೂ ಸ್ಪರ್ಧಿಸಿದರೆ ಒಳ್ಳೆಯದು ಎಂಬುದು ನನ್ನ ವೈಯಕ್ತಿಕ ಭಾವನೆ. ಸಿದ್ದರಾಮಯ್ಯವರು ಮುಂದಿನ ಚುನಾವಣೆಗೂ ಸ್ಪರ್ಧಿಸಬೇಕೆಂಬ ಒತ್ತಾಯ ಅಭಿಮಾನಿಗಳಿಂದಲೂ ಇದೆ ಎಂದು ಬಸವಂತಪ್ಪ ವಿವರಿಸಿದರು.ಇನ್ನೊಂದು ಅವಧಿಗೂ ಸ್ಪರ್ಧಿಸಲಿ:
ಸಿದ್ದರಾಮಯ್ಯ ಬಿರುಗಾಳಿ ಇದ್ದಂತೆ. ನಮ್ಮಂತಹ ಹೊಸಬರಿಗೆ ಶಕ್ತಿಯಾಗಿದ್ದಾರೆ. ಅವರಿಗೆ ತಮ್ಮದೇ ಆದಂತಹ ಅಭಿಮಾನಿಗಳ ಬಳಗವಿದೆ. ಫೇಸ್ ವ್ಯಾಲ್ಯೂ ಇದೆ. ಪಕ್ಷದಲ್ಲಿ ಅವರಿದ್ದರೆ ಇಂತಿಷ್ಟು ಮತಗಳು ಬಂದೇ ಬರುತ್ತವೆಂಬ ಗ್ಯಾರಂಟಿಯೂ ಇದೆ. ಅವರಿಂದಾಗಿಯೇ ಕೆಲವೊಂದಿಷ್ಟು ಜನರು ಕಳೆದ ಚುನಾವಣೆಯಲ್ಲೂ ಗೆದ್ದಿದ್ದಾರೆ. ಸಿದ್ದರಾಮಯ್ಯ ಸಾಹೇಬರು ಇನ್ನೊಂದು ಅವಧಿಗೆ ಚುನಾವಣೆಗೆ ನಿಂತು ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಪಡಿಸಬೇಕು ಎಂದು ಮನವಿ ಮಾಡಿದರು.ಸಂಪುಟ ಪುನಾ ರಚನೆಯಾದರೆ ನಮಗೂ ಸ್ಥಾನ ನೀಡಿ, ಅವಕಾಶ ಕೊಡಿ ಅಂತಾ ಮನವಿ ಮಾಡುತ್ತೇನೆ. ನನಗೆ ಸಚಿವ ಸ್ಥಾನ ನೀಡಿದರೆ ಸಮರ್ಥವಾಗಿ ನಿಭಾಯಿಸುತ್ತೇನೆ. ದಲಿತ ಎಡಗೈ ಸಮುದಾಯಕ್ಕೆ ಸಚಿವ ಸ್ಥಾನ ನೀಡುವಂತೆ ಒತ್ತಡವೂ ಇದೆ. ಸಚಿವ ಸ್ಥಾನ ಸಿಕ್ಕರೆ ಹಿಂದುಳಿದ ಮಾಯಕೊಂಡ ಕ್ಷೇತ್ರದ ಅಭಿವೃದ್ಧಿ, ಕ್ಷೇತ್ರದ ಜನರಿಗೂ ಒಳ್ಳೆಯದಾಗುತ್ತದೆ ಎಂದರು.
ಸಮುದಾಯದ ಲೆಕ್ಕಾಚಾರದಲ್ಲಿ ದಲಿತ ಎಡಗೈ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು. ತೆಲಂಗಾಣ ಮಾದರಿಯಲ್ಲಿ ಸಂಪುಟ ರಚನೆಯ ಅಗತ್ಯವಿದೆ. ತೆಲಂಗಾಣದಲ್ಲಿ ಮೊದಲ ಸಲ ಶಾಸಕರಾಗಿ ಆಯ್ಕೆಯಾದ ಮಾದಿಗ ಸಮುದಾಯದ ಶಾಸಕರೂ ಸಚಿವರಾಗಿದ್ದಾರೆ. ನಮ್ಮ ಸಮುದಾಯಕ್ಕೆ ಅವಕಾಶ ನೀಡುವುದಾದರೆ ನಮಗೂ ಸಚಿವ ಸ್ಥಾನ ನೀಡಬೇಕು ಎಂದು ಬಸವಂತಪ್ಪ ಮನವಿ ಮಾಡಿದರು.- - -
(ಬಾಕ್ಸ್) * ದಲಿತರಿಗೆ ಸಿಎಂ ಹುದ್ದೆ ಕೊಟ್ಟರೆ ಒಳ್ಳೆಯದು ದಲಿತ ಸಿಎಂ ಬೇಡಿಕೆ ಹಿಂದಿನಿಂದಲೂ ಇದೆ. ನಮ್ಮ ನಾಯಕರು ಸಹ ಈ ಬಗ್ಗೆ ಮನವಿ ಮಾಡಿದ್ದು, ಹೈಕಮಾಂಡ್ ನಿರ್ಣಯ ಕೈಗೊಳ್ಳುತ್ತದೆ. ಕಾರ್ಯಕರ್ತರಷ್ಟೇ ಅಲ್ಲ, ಶಾಸಕರಿಂದಲೂ ಈ ಬಗ್ಗೆ ಕೂಗು ಇದೆ. ಮುಖ್ಯಮಂತ್ರಿ ಮಾಡುವಂತೆ ನಮ್ಮ ನಾಯಕರೂ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ. ನಮ್ಮ ನಾಯಕರು ಮನವಿ ಮಾಡಿದ್ದಾರೆಂದರೆ ನಾವೇ ಮಾಡಿದಂತೆ, ಅದಕ್ಕೆ ನಾವೂ ಕೈ ಜೋಡಿಸಿದಂತೆ ಎಂದು ಅವರು ಸ್ಪಷ್ಟಪಡಿಸಿದರು. ದಲಿತರಿಗೆ ಸಿಎಂ ಹುದ್ದೆ ಕೊಟ್ಟರೆ ಒಳ್ಳೆಯದು. ಕೆ.ಎಚ್.ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ, ಡಾ. ಜಿ.ಪರಮೇಶ್ವರ, ಸತೀಶ ಜಾರಕಿಹೊಳಿ ಎಲ್ಲರೂ ಈ ಬಗ್ಗೆ ಮನವಿ ಮಾಡುತ್ತಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಬಗ್ಗೆ ನಿರ್ಧರಿಸುತ್ತಾರೆ. ನಮ್ಮ ಹೈಕಮಾಂಡ್‌ಗೆ ದಲಿತ ಸಿಎಂ ಬಗ್ಗೆ ಒತ್ತಾಯ ಮಾಡುವುದಿಲ್ಲ, ಮನವಿ ಮಾಡುತ್ತೇವೆ. ಅಂತಿಮ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಪ್ರತಿಕ್ರಿಯಿಸಿದರು.- - -
(ಬಾಕ್ಸ್) * ಜಾರಕಿಹೊಳಿ ಬಗ್ಗೆ ಯತೀಂದ್ರ ಹೇಳಿಕೆಗೆ ಸಮರ್ಥನೆದಾವಣಗೆರೆ: ಅಹಿಂದ ಮತಗಳನ್ನು ಗಟ್ಟಿ ಮಾಡಿಕೊಳ್ಳಲು ಸಚಿವ ಸತೀಶ ಜಾರಕಿಹೊಳಿ ಸೂಕ್ತ. ಸತೀಶ ಜಾರಕಿಹೊಳಿ ಸಂಘಟನಾ ಚತುರರಿದ್ದಾರೆಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಮಾಯಕೊಂಡ ಕಾಂಗ್ರೆಸ್ ಶಾಸಕ ಕೆ.ಎಸ್. ಬಸವಂತಪ್ಪ ಸಿಎಂ ಪುತ್ರನನ್ನು ಸಮರ್ಥಿಸಿಕೊಂಡರು.
ಈ ಹಿಂದೆ ಸಿದ್ದರಾಮಯ್ಯ ಅಹಿಂದ ಮತಗಳನ್ನು ಒಗ್ಗೂಡಿಸಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು. ಮುಂದಿನ ದಿನಗಳಲ್ಲಿ ಅಂತಹ ಸಂಘಟನಾ ಸಾಮರ್ಥ್ಯ ಸತೀಶ್ ಜಾರಕಿಹೊಳಿಗೆ ಇದೆ ಎಂಬುದು ಯತೀಂದ್ರ ಸಿದ್ದರಾಮಯ್ಯ ಹೇಳಿಕೆಯಾಗಿದೆ. ಇಡೀ ರಾಜ್ಯವನ್ನು ಸತೀಶ ಜಾರಕಿಹೊಳಿ ಸುತ್ತಾಡುತ್ತಾರೆ. ಎಲ್ಲ ಸಮುದಾಯಗಳ ಜೊತೆಗೆ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಸತೀಶ್ ಜಾರಕಿಹೊಳಿ ಅಹಿಂದ ಸಂಘಟನಾ ಸಾಮರ್ಥ್ಯ ಹೊಂದಿದ್ದಾರೆ ಎಂದು ಕೆ.ಎಸ್.ಬಸವಂತಪ್ಪ ಹೇಳಿದರು.- - -
-28ಕೆಡಿವಿಜಿ1, 2: ಕೆ.ಎಸ್.ಬಸವಂತಪ್ಪ