ಕನ್ನಡಪ್ರಭ ವಾರ್ತೆ ಮಂಡ್ಯ
ನಾಡಿನ ಜೀವನದಿ ಕಾವೇರಿ ಈಗ ಪರಿಶುದ್ಧವಾಗಿ ಉಳಿದಿಲ್ಲ. ಕೊಡಗಿನಿಂದ ಆರಂಭವಾಗಿ ತಮಿಳುನಾಡು ಸೇರುವ ಬಿಳಿಗುಂಡ್ಲುವರೆಗೆ ಹಲವು ಕಡೆಗಳಲ್ಲಿ ಕಾವೇರಿ ನದಿಗೆ ಕಲುಷಿತ ನೀರು ಸೇರುತ್ತಿದೆ. ನದಿಯ ಪರಿಶುದ್ಧತೆ ಕಾಪಾಡುವಲ್ಲಿ ನಾವು ವಿಫಲರಾಗಿದ್ದೇವೆ. ಇದರ ಬಗ್ಗೆ ಪ್ರತಿಯೊಬ್ಬರೂ ಗಂಭೀರ ಚಿಂತನೆ ನಡೆಸುವಂತೆ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.ಮಂಗಳವಾರ ನಗರದ ಮಂಡ್ಯ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ತಿಂಗಳು ಮಾಲಿನ್ಯ ನಿಯಂತ್ರಣ ಮಂಡಳಿ ಕಾವೇರಿ ನದಿ ಮತ್ತು ಅದರ ಉಪ ನದಿಗಳ ನೀರಿನ ಗುಣಮಟ್ಟವನ್ನು ೪೭ ಸ್ಥಳಗಳಲ್ಲಿ ಮಾಪನ ಮಾಡಿ ನೀರಿನ ಗುಣಮಟ್ಟವನ್ನು ಪ್ರಾದೇಶಿಕ ಪ್ರಯೋಗಾಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಆ ಪ್ರಕಾರ ನದಿ ನೀರು ಕುಡಿಯುವುದಕ್ಕೂ ಯೋಗ್ಯವಾಗಿಲ್ಲದಷ್ಟು ಹಾಳಾಗಿದೆ ಎಂದರು.
ಜಿಲ್ಲೆಯ ಆಲೆಮನೆಗಳಲ್ಲಿ ಹಿಂದೆ ಕಬ್ಬಿನ ಸಿಪ್ಪೆಯನ್ನು ಉರುವಲಾಗಿ ಬಳಸಲಾಗುತ್ತಿತ್ತು. ಈಗ ಹಳೆಯ ಟೈರ್‌ಗಳು, ರಬ್ಬರ್‌ಗಳು ಮತ್ತಿತರ ಅಪಾಯಕಾರಿ ಹೊಗೆ ಹೊರಸೂಸುವ ವಸ್ತುಗಳನ್ನು ಬಳಸಲಾಗುತ್ತಿದೆ. ಇದರಿಂದ ಪರಿಸರಕ್ಕೆ ಹಾನಿಯಾಗುತ್ತಿದ್ದು, ಈ ಬಗ್ಗೆ ಬೆಲ್ಲ ಉತ್ಪಾದಕರು, ರೈತರು ಜಾಗೃತರಾಗಬೇಕು ಎಂದು ಸಲಹೆ ನೀಡಿದರು.ಮಂಡ್ಯ ಜಿಲ್ಲೆಯಲ್ಲಿ ೩೧ ಬೃಹತ್, ೧೪ ಮಧ್ಯಮ ಮತ್ತು ೬೫೨ ಸಣ್ಣ ಕಾರ್ಖಾನೆಗಳಿದ್ದು, ಅವುಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಸಂಸ್ಕರಿಸಲು ಶುದ್ಧೀಕರಣ ಘಟಕವನ್ನು ಅಳವಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಸಂಸ್ಕರಿಸಿದ ನೀರನ್ನು ಕಾರ್ಖಾನೆಯ ಆವರಣದಲ್ಲಿ ಹಾಗೂ ಕೈಗಾರಿಕೆ ಚಟುವಟಿಕೆಗೆ ಉಪಯೋಗಿಸಿಕೊಳ್ಳಲಾಗುತ್ತಿದೆ. ಕಾರ್ಖಾನೆಯ ಅವರಣದಿಂದ ತ್ಯಾಜ್ಯ ನೀರು ಹೊರಹೊಗದಂತೆ ನಿರ್ಬಂಧನೆಯನ್ನು ವಿಧಿಸಲಾಗಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಜಲಮಾಲಿನ್ಯ ತುಂಬಾ ಭಯಂಕರವಾದುದು. ಇದರ ಬಗ್ಗೆ ದೇಶದಲ್ಲಿ ಮೊದಲ ಬಾರಿಗೆ ಗಮನಹರಿಸಿದವರು ಮಾಜಿ ಪ್ರಧಾನಿ ಇಂದಿರಾಗಾಂಧಿ. ಅವರು ೧೯೭೪ರಲ್ಲಿ ಜಲ ಮಾಲಿನ್ಯ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದರು. ಇದಕ್ಕೂ ಮೊದಲು ಎಲ್ಲಾ ಬಗೆಯ ಮಾಲಿನ್ಯವನ್ನು ತಡೆಯಬೇಕು ಎಂದು ೧೯೭೨ರಲ್ಲಿ ಇಂದಿರಾ ಗಾಂಧಿ ಅವರು ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಸ್ಥಾಪಿಸಿದರು. ಈಗ ಮಂಡಳಿ ೫೦ ವರ್ಷ ಪೂರೈಸಿದ್ದು ಸುವರ್ಣ ಮಹೋತ್ಸವ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣದ ಬಗ್ಗೆ ದೊಡ್ಡ ಮಟ್ಟದಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.ಇಂದಿರಾ ಗಾಂಧಿ ಅವರು ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಸ್ಥಾಪನೆ ಮಾಡಿರುವುದು ಮಾತ್ರವಲ್ಲ, ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಹಲವು ಕಾಯಿದೆಗಳನ್ನು ಜಾರಿಗೆ ತಂದರು. ೧೯೭೨ರಲ್ಲಿ ರಾಷ್ಟ್ರೀಯ ಪರಿಸರ ಯೋಜನೆ ಮತ್ತು ಸಮನ್ವಯ ಸಮಿತಿ ರಚಿಸಿದರು. ಅದೇ ವರ್ಷ ಅಳಿವಿನಂಚಿನಲ್ಲಿರುವ ಪ್ರಾಣಿ-ಪಕ್ಷಿಗಳ ಪ್ರಭೇದಗಳನ್ನು ರಕ್ಷಿಸಲು ವನ್ಯಜೀವಿ ಸಂರಕ್ಷಣಾ ಕಾಯ್ದೆ - ೧೯೭೨ನ್ನು ಜಾರಿಗೆ ತಂದರು. ೧೯೭೩ರಲ್ಲಿ ಅಳಿವಿನಂಚಿನಲ್ಲಿರುವ ಹುಲಿಗಳನ್ನು ಮತ್ತು ಅವುಗಳ ಆವಾಸಸ್ಥಾನಗಳನ್ನು ರಕ್ಷಿಸಲು ಪ್ರಾಜೆಕ್ಟ್ ಟೈಗರ್ ಎಂಬ ವನ್ಯಜೀವಿ ಸಂರಕ್ಷಣಾ ಯೋಜನೆಯನ್ನು ರೂಪಿಸಿದರು. ಅದೇ ವರ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧೀನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಸ್ಥಾಪಿಸಿದರು. ೧೯೮೧ರಲ್ಲಿ ವಾಯು (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯ್ದೆ ಜಾರಿಗೆ ತಂದರು. ಸುವರ್ಣ ಮಹೋತ್ಸವದ ವೇಳೆ ಈ ಕಾಯಿದೆಗಳನ್ನು ಹಾಗೂ ಕಾಯಿದೆಗಳನ್ನು ಜಾರಿಗೆ ತಂದ ಇಂದಿರಾ ಗಾಂಧಿ ಅವರನ್ನು ಸ್ಮರಿಸುವುದು ಮಂಡಳಿಯ ಉದ್ದೇಶ ಎಂದು ವಿವರಿಸಿದರು.
ಭವಿಷ್ಯದ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕೆಲಸಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಅವರಿಗೆ ಚಿತ್ರಕಲೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ವಿಧಾನಸಭಾ ಕ್ಷೇತ್ರವಾರು ನಡೆಯುತ್ತಿರುವ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಜಿಲ್ಲಾ ಮಟ್ಟದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ೩ ಸಾವಿರ ರುಪಾಯಿ ಬಹುಮಾನ ನೀಡಲಾಗುವುದು. ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣ ಮಾಡುವುದರಲ್ಲಿ ಯುವಕರ ಪಾತ್ರ ಬಹಳ ಮಹತ್ವದ್ದು ಎಂದು ಪರಿಗಣಿಸಿ ಪರಿಸರದ ಬಗ್ಗೆ ರಿಲ್ಸ್ ಮಾಡಿ ಬಹುಮಾನ ಗೆಲ್ಲಿ’ ಎಂಬ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಪರಿಸರ ಕಾಳಜಿ, ಸಂರಕ್ಷಣೆಯ ಸಂದೇಶ ಸಾರುವ ಉತ್ತಮ ರಿಲ್ಸ್ ಗೆ ೫೦ ಸಾವಿರ ರುಪಾಯಿ ಪ್ರಥಮ ಬಹುಮಾನ, ೨೫ ಸಾವಿರ ರೂಪಾಯಿ ದ್ವಿತೀಯ ಬಹುಮಾನ ಹಾಗು ೧೦ ಸಾವಿರ ರುಪಾಯಿ ತೃತೀಯ ಬಹುಮಾನ ನೀಡಲಾಗುವುದು ಎಂದು ವಿವರಿಸಿದರು.