ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯು ಕಾರ್ಮಿಕರ ಕೌಶಲ ಹೆಚ್ಚಿಸುವ ಮೂಲಕ ಅವರ ಉತ್ಪನ್ನಗಳ ಗುಣಮಟ್ಟ ಸುಧಾರಿಸಿ ಕುಶಲಕರ್ಮಿಗಳನ್ನು ಸಬಲೀಕರಣಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ, ಎಂಎಸ್‌ಎಂಇ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಮಂಗಳವಾರ ನಡೆದ ಪ್ರಧಾನಮಂತ್ರಿ ವಿಶ್ವಕರ್ಮ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯು ಸಾಂಪ್ರದಾಯಿಕ ಕರಕುಶಲ ವಸ್ತುಗಳ ಉತ್ಪಾದನೆಯಲ್ಲಿ ತೊಡಗಿರುವ ಕುಶಲಕರ್ಮಿಗಳಿಗೆ ಪ್ರೋತ್ಸಾಹ ನೀಡುವ ಜತೆಗೆ ಆರ್ಥಿಕ ಬೆಂಬಲ ನೀಡುವ ಯೋಜನೆ. ನಶಿಸಿ ಹೋಗುತ್ತಿರುವ ಕೈಗಾರಿಕೆಗಳಿಗೆ ಪುನಶ್ಚೇತನ ನೀಡುವ ಸಲುವಾಗಿ ಉದ್ಯಮಕ್ಕೆ ಶಕ್ತಿ ಕೊಟ್ಟು ಸ್ವಂತ ಉದ್ಯೋಗ ಮಾಡಲು 18 ಕುಲಕಸುಬುಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯು ಬಡಗಿ, ಕಮ್ಮಾರ. ಶಿಲ್ಪಿಗಳು. ಕುಶಲಕರ್ಮಿಗಳು ಸೇರಿದಂತೆ 18 ಬಗೆಯ ಸಾಂಪ್ರದಾಯಿಕ ವೃತ್ತಿಯನ್ನು ಒಳಗೊಂಡಿದೆ. ಈ ವೃತ್ತಿಯಲ್ಲಿ ತೊಡಗಿರುವವರು ಯೋಜನೆಯಡಿ ವಿವಿಧ ಪ್ರಯೋಜನ ಪಡೆಯಬಹುದು. ಸ್ವಯಂ ಬದುಕು ಕಟ್ಟಿಕೊಳ್ಳುವ ಇಚ್ಛೆ ಇದ್ದವರಿಗೆ ತರಬೇತಿ ಜೊತೆಗೆ ಸಕಾಲದಲ್ಲಿ ಸಾಲ ಸೌಲಭ್ಯ ಒದಗಿಸಿ, ಸ್ವಂತ ಕಸುಬು ಸೃಷ್ಟಿ ಮಾಡಿಕೊಳ್ಳುವ ಯೋಜನೆ ಇದಾಗಿದೆ ಎಂದು ಹೇಳಿದರು
ಕುಂಬಾರರು ತಮ್ಮದೇ ಆದ ಸಂಘಗಳನ್ನು ರಚಿಸಿಕೊಂಡು ನಿತ್ಯ ಉಪಯೋಗಿ ಮಡಿಕೆಗಳನ್ನು ಬಿಟ್ಟು ಆಲಂಕಾರಿಕ ಮಡಿಕೆಗಳನ್ನು ತಯಾರು ಮಾಡುತ್ತಿದ್ದಾರೆ. ನಮ್ಮ ಊರಿನಲ್ಲಿ ಮಾಡಿರುವ ಕುಂಬಾರರ ಆಲಂಕಾರಿಕ ಮಡಿಕೆ ಭಾರತ ಮಾತ್ರವಲ್ಲ ವಿದೇಶದಲ್ಲಿ ಸಹ ಅತ್ಯಂತ ಬೇಡಿಕೆ ಹೊಂದಿದೆ. ಕುಂಬಾರರು, ಚಮ್ಮಾರರಿಗೆ ತರಬೇತಿ ನೀಡಿ ಅವರಿಗೆ ಆರ್ಥಿಕ ಶಕ್ತಿ ನೀಡಿ ಉತ್ತೇಜಿಸಿ ಇತರೆ ಕಾರ್ಮಿಕರಿಗೆ ಕೆಲಸ ಕೊಡುವ ಉದ್ಯಮವನ್ನಾಗಿ ಮಾರ್ಪಾಡು ಮಾಡುವುದೇ ವಿಶ್ವ ಕರ್ಮ ಯೋಜನೆ ಉದ್ದೇಶ ಎಂದರು.ವಿಶ್ವಕರ್ಮ ಯೋಜನೆಯ ಫಲಾನುಭವಿಗಳು ಬ್ಯಾಂಕ್ ಸಾಲದ ಬದಲು ಕಿಟ್ ನೀಡುವಂತೆ ಮನವಿ ಮಾಡಿದ್ದರು. ಆದರೆ, ಈ ಕಿಟ್ ವಿತರಣೆಯಲ್ಲಿ ಕೆಲವೊಂದು ಲೋಪದೋಷಗಳು ಕಂಡು ಬಂದವು. ಈ ಹಿನ್ನೆಲೆ ಆಂಚೆ ಇಲಾಖೆ ತುಂಬಾ ವ್ಯವಸ್ಥಿತವಾಗಿ ಪಾರದರ್ಶಕತೆಯಿಂದ ಕೆಲಸ ನಿರ್ವಹಿಸುತ್ತಿದೆ. ಕಿಟ್ ವಿತರಣೆ ಸಂದರ್ಭದಲ್ಲಿ ವಸ್ತುಗಳ ಗುಣಮಟ್ಟವನ್ನು ಫಲಾನುಭವಿಗಳ ಮುಂದೆಯೇ ಪರಿಶೀಲಿಸಿ ನಂತರ ಅದನ್ನು ಅವರಿಗೆ ನೀಡಲಾಗುತ್ತಿದೆ. ಕಿಟ್‌ನಲ್ಲಿ ಗುಣಮಟ್ಟದ ಕೊರತೆ ಕಂಡು ಬಂದರೆ ಅದನ್ನು ತಕ್ಷಣವೇ ವಾಪಸ್ ಮಾಡಲಾಗುತ್ತಿದೆ ಎಂದು ಹೇಳಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಚ್.ಎಸ್.ಕೀರ್ತನಾ ಮಾತನಾಡಿ, ನಮ್ಮ ಪಾರಂಪರಿಕ ವಿದ್ಯೆಯನ್ನು ನಾವು ಅಭಿವೃದ್ಧಿಪಡಿಸಿಕೊಳ್ಳದಿದ್ದರೆ ಮುಂದೆ ನಮಗೆ ಜೀವನ ಕಷ್ಟವಾಗಲಿದೆ. ಸರ್ಕಾರ ಅದನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಮಂತ್ರಿ ವಿಶ್ವ ಕರ್ಮ ಯೋಜನೆಯನ್ನು ಜಾರಿಗೆ ತಂದಿದೆ ಎಂದರು.ಈ ಸಂದರ್ಭದಲ್ಲಿ ವಿಶ್ಚಕರ್ಮ ಯೋಜನೆಯಡಿ ನಾಲ್ವರಿಗೆ ಟೂಲ್ ಕಿಟ್, ಐವರಿಗೆ ತರಬೇತಿ ಪ್ರಮಾಣಪತ್ರ ವಿತರಿಸಲಾಯಿತಲ್ಲದೆ, ಒಬ್ಬರಿಗೆ ಕುಂಬಾರಿಕೆ ವೃತ್ತಿಗೆ ಸಂಬಂಧಿಸಿದ ಸಾಲ ಸೌಲಭ್ಯ ಒದಗಿಸಲಾಯಿತು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಚ್.ಎನ್.ಮಹೇಶ್, ಎಂಎಸ್‌ಎಂಇ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿಯ ಜಂಟಿ ನಿರ್ದೇಶಕ ಕೆ.ದೇವರಾಜ್, ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ನಾಮನಿರ್ದೇಶನ ಸದಸ್ಯರಾದ ಬೆಳವಾಡಿ ರವೀಂದ್ರ, ಎನ್.ಭಾಸ್ಕರ್, ದಿಶಾ ಸಮಿತಿಯ ಸದಸ್ಯ ಎಚ್.ಸಿ.ಕಲ್ಮರುಡಪ್ಪ, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಪ್ರಶಾಂತ್, ಅಂಚೆ ಅಧೀಕ್ಷಕ ಬಿ.ಶ್ರೀನಾಥ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಚಂದ್ರಶೇಖರ್ ಹಾಜರಿದ್ದರು.