ಸಂವಿಧಾನ ದಿನಾಚರಣೆ, ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ
ಕನ್ನಡಪ್ರಭ ವಾರ್ತೆ ಯಲಬುರ್ಗಾಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ನಮ್ಮ ಭಾರತ ಸಂವಿಧಾನ ಸರ್ವ ಜನಾಂಗದ ಬಹುದೊಡ್ಡ ಆಸ್ತಿಯಾಗಿದ್ದು, ಪ್ರತಿಯೊಬ್ಬ ಪ್ರಜೆಗಳು ಸಂವಿಧಾನದಡಿಯಲ್ಲಿ ಬದುಕು ನಡೆಸಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ. ಚಂದ್ರಶೇಖರ ಹೇಳಿದರು.ಪಟ್ಟಣದ ಸ್ನಾತಕೋತ್ತರ ಕೇಂದ್ರದಲ್ಲಿ ಮಂಗಳವಾರ ಕೊಪ್ಪಳ ವಿಶ್ವವಿದ್ಯಾಲಯ, ತಾಲೂಕಾ ಕಾನೂನು ಸೇವಾ ಸಮಿತಿ ಹಾಗೂ ನ್ಯಾಯವಾದಿಗಳ ಸಂಘದ ಸಹಯೋಗದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಡೀ ಜಗತ್ತಿಗೆ ಮಾದರಿಯಾದ ಭಾರತ ಸಂವಿಧಾನ ರಚನೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.೧೯೪೯, ಜ. ೨೬ರಂದು ವಿಶ್ವದಲ್ಲೇ ಅತ್ಯಂತ ದೊಡ್ಡದಾದ ಪ್ರಜಾಪ್ರಭುತ್ವ ಅಂಶಗಳನ್ನು ಒಳಗೊಂಡಂತೆ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ. ಸಂವಿಧಾನದ ಪೀಠಿಕೆಯಂತೆ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಸಂವಿಧಾನದ ಉದ್ದೇಶವಾಗಿದ್ದು, ಪ್ರತಿಯೊಬ್ಬರು ಈ ದೇಶದ ಸಂವಿಧಾನವನ್ನು ಓದುವುದರ ಮೂಲಕ ತಿಳಿದುಕೊಂಡು ಹೋಗಬೇಕಾಗಿರುವುದು ಎಲ್ಲರ ಕರ್ತವ್ಯವಾಗಿದೆ. ಸಂವಿಧಾನದಲ್ಲಿ ಎಲ್ಲ ಜಾತಿ, ಧರ್ಮಗಳಿಗೆ ಸಮಾನ ಅವಕಾಶ ಕಲ್ಪಿಸಲಾಗಿದೆ. ಏಕತೆ ಭಾರತದ ಉಸಿರು, ಸಂವಿಧಾನದ ಅಂಶಗಳನ್ನು ಎತ್ತಿ ಹಿಡಿಯಲು ಎಲ್ಲರೂ ಬದ್ಧರಾಗಬೇಕು ಎಂದು ಹೇಳಿದರು.ಪ್ರಾಧ್ಯಾಪಕ ಬಸವರಾಜ ಇಳಿಗನೂರ ವಿಶೇಷ ಉಪನ್ಯಾಸ ನೀಡಿ, ಪ್ರಜಾಪ್ರಭುತ್ವದ ಯಶಸ್ಸು ಹಾಗೂ ಸಂವಿಧಾನದ ಉಳಿವು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಾವು ಮೂಲಭೂತ ಹಕ್ಕುಗಳನ್ನು ಪಡೆಯುವುದರ ಜತೆಗೆ ಕರ್ತವ್ಯ ಪಾಲಿಸಬೇಕಾಗಿದೆ. ಭಾರತದ ನವ ನಿರ್ಮಾಣ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾಗಿದೆ ಎಂದರು.ಕೊಪ್ಪಳ ವಿಶ್ವವಿದ್ಯಾಲಯದ ಕುಲಸಚಿವ ಕೆ.ವಿ. ಪ್ರಸಾದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂವಿಧಾನದಲ್ಲಿ ಅಳವಡಿಸಲಾಗಿರುವ ಕಾನೂನುಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಸಂವಿಧಾನದ ಮೂಲಾಂಶಗಳನ್ನು ಅರಿತುಕೊಳ್ಳುವ ಜೊತೆಗೆ ಸಂವಿಧಾನದ ನಿಯಮಗಳ ಪರಿಪಾಲನೆಗೆ ಎಲ್ಲರೂ ಬದ್ಧರಾಗಿ ಸಂವಿಧಾನಕ್ಕೆ ತಲೆಬಾಗಬೇಕೆಂದರು.ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ಎಸ್. ದರಗದ, ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಚಲವದಿ ಚನ್ನಬಸಪ್ಪ, ವಕೀಲರ ಸಂಘದ ತಾಲೂಕಾಧ್ಯಕ್ಷ ಪ್ರಕಾಶ ಬೇಲೇರಿ, ಸಹಾಯಕ ಸರ್ಕಾರಿ ಅಭಿಯೋಜಕ ರವಿ ಹುಣಿಸಿಮರದ, ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ, ನ್ಯಾಯವಾದಿಗಳಾದ ಬಿ.ಎಂ. ಶಿರೂರ, ಯು.ಎಸ್. ಮೆಣಸಗೇರಿ, ಐ.ಬಿ. ಕೋಳೂರು, ಎಸ್.ಎನ್. ಶ್ಯಾಗೋಟಿ, ಈರಣ್ಣ ಕೋಳೂರ, ಪ್ರಾಧ್ಯಾಪಕರಾದ ಡಾ. ಅಶ್ವಿನಿಕುಮಾರ, ಡಾ. ಸರಸ್ವತಿ, ಸಾಧು ಸೂರ್ಯಕಾಂತ, ರಾಘವೇಂದ್ರ ಕೋಳಿಹಾಳ, ವಿನಾಯಕ ಮತ್ತಿತರರು ಇದ್ದರು.