ರಾಮನಗರ: ನಗರದ ಎರಡನೇ ವಾರ್ಡಿನ ಅರ್ಕಾವತಿ ಬಡಾವಣೆಯಲ್ಲಿ ಹಂದಿಗಳ ಸಾಕಾಣಿಕೆಯಿಂದ ದುರ್ನಾತ ಆವರಿಸಿದ್ದು, ಇದರಿಂದ ಜೀವನ ಸಾಗಿಸಲು ಆಗುತ್ತಿಲ್ಲ ಎಂದು ಅರ್ಕಾವತಿ ಬಡಾವಣೆಯ ನಿವಾಸಿಗಳು ಅಳಲು ತೋಡಿಕೊಂಡರು.
ಈ ಬಗ್ಗೆ ನಗರದ ನಿವಾಸಿಗಳು ಮಾಧ್ಯಮ ಮಿತ್ರರನ್ನು ಸ್ಥಳಕ್ಕೆ ಕರೆಸಿಕೊಂಡು ತಾವು ಅನುಭವಿಸುತ್ತಿರುವ ಯಾತನೆಯನ್ನು ವಿವರಿಸಿದರು. ಹಂದಿಗಳ ಸಾಕಾಣಿಕೆಯಿಂದ ಆಗುತ್ತಿರುವ ಸಮಸ್ಯೆಗಳನ್ನು ನಗರಸಭೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ತಿಳಿಸಿದರೂ ಉಪಯೋಗವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಸುಮಾರು 20 ವರ್ಷಗಳಿಂದ ಅರ್ಕಾವತಿ ಬಡಾವಣೆಯಲ್ಲಿ ಹಂದಿಗಳ ಸಾಕಾಣಿಕೆಯಾಗುತ್ತಿದೆ. ಹಂದಿಗಳ ಸಾಕಾಣಿಕೆ ಮಾತ್ರ ಇದ್ದರೆ ಸಮಸ್ಯೆ ಬಿಗಡಾಯಿಸುತ್ತಿರಲಿಲ್ಲ. ಆದರೆ ಹಂದಿಗಳ ಗೊಬ್ಬರವನ್ನು ವಿಲೇ ಮಾಡದೆ ಅಲ್ಲೇ ಸುತ್ತಮುತ್ತ ಬಿಸಾಡುತ್ತಿರುವುದರಿಂದ ಇಡೀ ಬಡಾವಣೆಯಲ್ಲಿ ಗಬ್ಬುನಾಥ ಬೀರುತ್ತಿದೆ. ಕಳೆದ 2 ತಿಂಗಳಿನಿಂದ ಈ ದುರ್ನಾತ ಹೆಚ್ಚಾಗುತ್ತಿದ್ದು, ವಾಕರಿಕೆ ಬರಿಸುತ್ತಿದೆ.ನೆಮ್ಮದಿಯಿಂದ ಜೀವನ ಸಾಗಿಸಲು ಆಗುತ್ತಿಲ್ಲ. ದರ್ವಾಸನೆಯಿಂದ ಮನೆ, ಕಚೇರಿ ಬಾಗಿಲುಗಳನ್ನು ತೆಗೆದಿಡಲು ಆಗುತ್ತಿಲ್ಲ. ಗಾಳಿ ಬೀಸಿದರೆ ದುರ್ನಾತ ಮಗದಷ್ಟು ಹೆಚ್ಚಾಗಿ ಉಸಿರಾಡುವುದೇ ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ಕಳೆದ 10 ವರ್ಷಗಳಿಂದ ತಮಗಾಗುತ್ತಿರುವ ತೊಂದರೆಯನ್ನು ನಗರಸಭೆಯ ಅಧಿಕಾರಿಗಳ ಗಮನಕ್ಕೆ ತಂದು, ಹಂದಿ ಸಾಕಾಣಿಕೆಯನ್ನು ಬೇರೆಡೆಗೆ ಸ್ಥಳಾಂತರಿಸಲು ಮನವಿ ಮಾಡಿದರೂ, ಯಾವ ಕ್ರಮ ಆಗಿಲ್ಲ. ಜಿಲ್ಲಾಡಳಿತದ ಗಮನ ಸೆಳೆದರೂ ಉಪಯೋಗವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಒಂದೆಡೆ ಹಂದಿಗಳ ಗೊಬ್ಬರದ ದುರ್ವಾಸನೆ ಇನ್ನೊಂದೆಡೆ ಸ್ವಚ್ಛತೆಯ ಸಮಸ್ಯೆಯೂ ಕಾಡುತ್ತಿದೆ. ಈಗ ಡೆಂಘೀ ಜ್ವರದ ಪ್ರಕರಣಗಳು ಹೆಚ್ಚಾಗುತ್ತಿವೆ. ಸ್ವಚ್ಛತೆ ಇಲ್ಲದಿರುವುದರಿಂದ ಇಲ್ಲಿ ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ. ಹೀಗೆ ಅನಾರೋಗ್ಯ ವಾತಾವರಣ ಸೃಷ್ಟಿಯಾಗಿದೆ ಎಂದರು.
ಅರ್ಕಾವತಿ ಬಡಾವಣೆಯಲ್ಲಿ ಚರಂಡಿ ವ್ಯವಸ್ಥೆಯೂ ಹಾಳಾಗಿದೆ. ಇಲಿ, ಹೆಗ್ಗಣಗಳು ಇಡೀ ವ್ಯವಸ್ಥೆಯನ್ನು ಹಾಳುಗೆಡವಿವೆ. ಚರಂಡಿಗಳಲ್ಲಿ ಗುಂಡಿಗಳು ಸೃಷ್ಟಿಯಾಗಿ ಸರಾಗವಾಗಿ ಮಳೆ ನೀರು, ಕಲ್ಮಷ ನೀರು ಹರಿಯುತ್ತಿಲ್ಲ ಎಂದು ತಿಳಿಸಿದರು.ಬೆಂಗಳೂರು ಮೈಸೂರು ರಸ್ತೆಯ ಮಗ್ಗಲಲ್ಲೇ ಅರ್ಕಾವತಿ ಬಡಾವಣೆ ಇದೆ. ಐಜೂರು ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳಿವೆ, ಪೊಲೀಸರ ವಸತಿ ಸಮುಚ್ಚಯವೂ ಇದೆ, ಜೊತೆಗೆ ನ್ಯಾಯಾಧೀಶರುಗಳ ವಾಸಗೃಹಗಳು ಇದ್ದು, ಅರ್ಕಾವತಿ ಬಡಾವಣೆ ಪ್ರತಿಷ್ಠಿತ ಬಡಾವಣೆ ಎನಿಸಿಕೊಂಡಿದೆ. ಆದರೆ ಇಲ್ಲಿನ ನಿವಾಸಿಗಳು ಪಡುತ್ತಿರುವ ಪಾಡನ್ನು ಪದಗಳಲ್ಲಿ ವರ್ಣಿಸಲು ಆಗುತ್ತಿಲ್ಲ ಎಂದರು.
ತಮ್ಮ ಸಮಸ್ಯೆಗೆ ನಗರಸಭೆಯ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ತಕ್ಷಣ ಕ್ರಮವಹಿಸಬೇಕು. ಇಲ್ಲದಿದ್ದರೆ ಮುಖ್ಯ ಮಂತ್ರಿಗಳು, ಉಪಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಲೋಕಾಯುಕ್ತ ಅಧಿಕರಿಗಳು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದರು. ಇಷ್ಟಾಗಿಯೂ ಸಮಸ್ಯೆಗಳಿಗೆ ಪರಿಹಾರ ಕಾಣದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ನಿವಾಸಿಗಳು ಎಚ್ಚರಿಸಿದರು.ಈ ಸಂದರ್ಭದಲ್ಲಿ ನಿವಾಸಿಗಳಾದ ಪುಟ್ಟ ಅಂಕಮ್ಮ, ಲಿಂಗರಾಜು, ನಿರ್ಮಲ, ಲತಾ, ಲಕ್ಷ್ಮಿ, ಕಲಾ, ಸುಮ, ಪುಷ್ಪಲತಾ, ಪಾರ್ವತಮ್ಮ, ಪಾರ್ಥ ಮತ್ತಿತರರಿದ್ದರು.
-----------------------------14ಕೆಆರ್ ಎಂಎನ್ 3.ಜೆಪಿಜಿ
ರಾಮನಗರದ ಅರ್ಕಾವತಿ ಬಡಾವಣೆಯಲ್ಲಿ ಹಂದಿಗಳ ಸಾಕಾಣಿಕೆಯಿಂದ ರೋಸಿ ಹೋಗಿರುವ ನಾಗರಿಕರು--------------------------------