ಈ ಬಾರಿಯ ಭೀಕರ ಬರಗಾಲದಿಂದಾಗಿ ಮುಂಗಾರಿ ಹಾಗೂ ಹಿಂಗಾರಿ ಬೆಳೆಗಳು ಕೈಕೊಟ್ಟಿದ್ದರಿಂದ ಸಾವಿರಾರು ರುಪಾಯಿ ಖರ್ಚುಮಾಡಿ ಬೀಜ, ಗೊಬ್ಬರ ತಂದು ಬಿತ್ತನೆ ಮಾಡಿದ್ದ ರೈತರು ಖಾಲಿ ಕೈಯಲ್ಲಿ ಕುಳಿತಿದ್ದಾರೆ. ಇದೀಗ ಕುಟುಂಬದೊಂದಿಗೆ ಜಾನುವಾರುಗಳನ್ನು ಸಾಕುವ ಹೊಣೆ ಇರುವುದರಿಂದ ತಮ್ಮಲ್ಲಿರುವ ಜಾನುವಾರುಗಳಿಗೆ ಮೇವು ಹೊಂದಿಸಲು ಹೆಣಗಾಡುತ್ತಿದ್ದಾರೆ. ಇಷ್ಟೆಲ್ಲ ಹಾಹಾಕಾರ ಇದ್ದರೂ ಸರ್ಕಾರ ಮೇವುಬ್ಯಾಂಕ್, ಚೆಕ್‌ಪೋಸ್ಟ್ ತೆರೆದಿಲ್ಲ. ಹಲವೆಡೆ ಜಾನುವಾರುಗಳಿಗೆ ಮೇವು ಹೊಂದಿಸಲು ರೈತರು ಹೆಣಗಾಡುತ್ತಿದ್ದಾರೆ.
ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರಈ ಬಾರಿಯ ಭೀಕರ ಬರಗಾಲದಿಂದಾಗಿ ಮುಂಗಾರಿ ಹಾಗೂ ಹಿಂಗಾರಿ ಬೆಳೆಗಳು ಕೈಕೊಟ್ಟಿದ್ದರಿಂದ ಸಾವಿರಾರು ರುಪಾಯಿ ಖರ್ಚುಮಾಡಿ ಬೀಜ, ಗೊಬ್ಬರ ತಂದು ಬಿತ್ತನೆ ಮಾಡಿದ್ದ ರೈತರು ಖಾಲಿ ಕೈಯಲ್ಲಿ ಕುಳಿತಿದ್ದಾರೆ. ಇದೀಗ ಕುಟುಂಬದೊಂದಿಗೆ ಜಾನುವಾರುಗಳನ್ನು ಸಾಕುವ ಹೊಣೆ ಇರುವುದರಿಂದ ತಮ್ಮಲ್ಲಿರುವ ಜಾನುವಾರುಗಳಿಗೆ ಮೇವು ಹೊಂದಿಸಲು ಹೆಣಗಾಡುತ್ತಿದ್ದಾರೆ. ಇಷ್ಟೆಲ್ಲ ಹಾಹಾಕಾರ ಇದ್ದರೂ ಸರ್ಕಾರ ಮೇವುಬ್ಯಾಂಕ್, ಚೆಕ್‌ಪೋಸ್ಟ್ ತೆರೆದಿಲ್ಲ. ಹಲವೆಡೆ ಜಾನುವಾರುಗಳಿಗೆ ಮೇವು ಹೊಂದಿಸಲು ರೈತರು ಹೆಣಗಾಡುತ್ತಿದ್ದಾರೆ.ಜಿಲ್ಲೆಯಲ್ಲಿರುವ ಜಾನುವಾರುಗಳು: ಜಿಲ್ಲೆಯಲ್ಲಿ ಹಸುಗಳು, ಎತ್ತುಗಳು, ಎಮ್ಮೆ, ಕೋಣಗಳು ಸೇರಿದಂತೆ ಒಟ್ಟು 2,68,616 ದೊಡ್ಡ ಜಾನುವಾರುಗಳಿವೆ. ಕುರಿ, ಆಡು, ಮೇಕೆ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 8,05,963 ಸಣ್ಣ ಪ್ರಾಣಿಗಳು ಇವೆ. ಮೇವಿನ ಅಭಾವದಿಂದಾಗಿ ರೈತರು ಜಾನುವಾರುಗಳನ್ನು ಸಾಕಲಾಗದೆ ಸಂತೆಗಳಲ್ಲಿ ಕೈಗೆ ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ಇದನ್ನು ಸರ್ಕಾರ ಗಮನಿಸಿ, ತುರ್ತು ಕ್ರಮ ಕೈಗೊಂಡು, ರೈತರ ಸಹಾಯಕ್ಕೆ ಬರಬೇಕಿದೆ.ಮೇವಿನ ಮಾಹಿತಿ: ಈಗಾಗಲೇ ತೀವ್ರ ಬರಗಾಲವಿದ್ದು, ಮುಂದೆ ಮೇವಿನ ಅಭಾವ ಎದುರಾಗುವ ಲಕ್ಷಣಗಳಿವೆ. ಸಧ್ಯದ ಮಟ್ಟಿಗೆ ಜಿಲ್ಲೆಯಲ್ಲಿ 3,76,034 ಟನ್ ಮೇವು ರೈತರ ಬಳಿಯಿದೆ. ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಅಂದಾಜಿನ ಪ್ರಕಾರ ಈ ಮೇವು ಮುಂದಿನ 27 ವಾರಗಳ ವರೆಗೆ ಜಾನುವಾರುಗಳಿಗೆ ಅಹಾರವಾಗಲಿದೆ. ಇದರೊಟ್ಟಿಗೆ ಇಲಾಖೆಯಿಂದ 15,178 ರೈತರಿಗೆ ಮೇವಿನ ಬೀಜಗಳ ಮಿನಿಕಿಟ್ ಗಳನ್ನು ಸರಬರಾಜು ಮಾಡಲಾಗಿದೆ. ಕೆಎಂಎಫ್ ನಿಂದಲೂ ಸಹ 2,700 ಹಾಲು ಉತ್ಪಾದಕರಿಗೆ ಮೇವಿನ ಬೀಜಗಳ ಮಿನಿಕಿಟ್ ವಿತರಿಸಲಾಗಿದೆ. ಮೇವುಬ್ಯಾಂಕ್ ಇಲ್ಲ: ತೀವ್ರ ಬರಗಾಲದ ಹಿನ್ನೆಲೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮೇವುಬ್ಯಾಂಕ್ ತೆರೆಯಬೇಕು, ಈ ಮೂಲಕ ಸಣ್ಣ ಹಾಗೂ ಅತಿಸಣ್ಣ ರೈತರ ಆಕಳು, ಎಮ್ಮೆ, ಎತ್ತು ಸೇರಿದಂತೆ ಇತರೇ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಕಲ್ಪಿಸಬೇಕಿದೆ. ಸಾಲಸೋಲ ಮಾಡಿರುವ ರೈತರು ಕುಟುಂಬ ನಿರ್ವಹಣೆಯಲ್ಲಿಯೇ ಹೆಣಗಾಡುವಂತಾಗಿದ್ದು, ಜಾನುವಾರುಗಳಿಗೆ ಮೇವು ಎಲ್ಲಿಂದ ತರೋದು ಎಂದು ಪ್ರಶ್ನಿಸುತ್ತಿದ್ದಾರೆ.ಚೆಕ್‌ಪೋಸ್ಟ್ ಇಲ್ಲ: ಮೇವಿನ ಕೊರತೆ ಇರುವುದರಿಂದ ನಮ್ಮ ಜಿಲ್ಲೆಯ ಮೇವು ಹೊರ ರಾಜ್ಯಕ್ಕೆ ಹೋಗದಂತೆ ತಡೆಯಲು ಜಿಲ್ಲಾಡಳಿತ ಜುಲೈ 13ರಂದು ಆದೇಶಿಸಿದೆ. ನಮ್ಮ ರಾಜ್ಯದ ಮೇವು ಹೊರಹೋದರೆ ಇಲ್ಲಿನ ಜಾನುವಾರುಗಳಿಗೆ ಮೇವಿನ ಕೊರತೆಯಿಂಟಾಗುತ್ತದೆ. ಹಾಗಾಗಿ ಇಲ್ಲಿನ ಮೇವು ಹೊರಹೋಗದಂತೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಆದೇಶದಲ್ಲಿ ಕಂದಾಯ, ಪೊಲೀಸ್, ಕೃಷಿ, ತೋಟಗಾರಿಕೆ, ಪಶುಪಾಲನಾ, ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಜಂಟಿಯಾಗಿ ಕಟ್ಟುನಿಟ್ಟಿನ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಉಲ್ಲೇಖಿಸಲಾಗಿದೆ. ನೆರೆಯ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ವಿಜಯಪುರ ಜಿಲ್ಲೆಯ ಗಡಿಗಳಲ್ಲಿ ಸುಮಾರು ಐದಾರು ಚೆಕ್‌ಪೋಸ್ಟ್‌ಗಳ ಅಗತ್ಯವಿದ್ದು, ಇದುವರೆಗೂ ಎಲ್ಲಿಯೂ ಚೆಕ್‌ಪೋಸ್ಟ್ ತೆರೆಯಲಾಗಿಲ್ಲ. ನಾವು ರೈತರ ಜಮೀನುಗಳಿಗೆ ಭೇಟಿನೀಡಿ ಮೇವಿನ ಪರಿಶೀಲನೆ ನಡೆಸುತ್ತಿದ್ದು, ಸಧ್ಯಕ್ಕೆ ರೈತರ ಬಳಿ ಮೇವು ಸಂಗ್ರಹವಿದ್ದು, ದೊಡ್ಡ ರೈತರಿಗೆ ಯಾವುದೇ ಸಮಸ್ಯೆಯಿಲ್ಲ. ಕೆಲವು ಕಡೆಗಳಲ್ಲಿ ಸಣ್ಣ ರೈತರಿಗೆ ಹಾಗೂ ಕೃಷಿ ಕಾರ್ಮಿಕರಿಗೆ ಸ್ವಲ್ಪಮಟ್ಟಿಗೆ ಮೇವಿನ ಸಮಸ್ಯೆಯಾಗಬಹುದು. ರೈತರು ತಮ್ಮ ಬಳಿಯಿರುವ ಮೇವನ್ನು ಪೌಷ್ಠಿಕರಣ ಮಾಡಿ, ಶೈಲೇಜ್ ಬ್ಯಾಗ್‌ಗಳನ್ನು ಮಾಡಿಕೊಂಡು ಜಾನುವಾರುಗಳಿಗೆ ತಕ್ಕಷ್ಟು ಬಳಸಬೇಕು. ಈಗಷ್ಟೆ ತಿಕೋಟಾ ಸೇರಿದಂತೆ ವಿವಿಧೆಡೆ ಮೇವುಬ್ಯಾಂಕ್ ಬೇಡಿಕೆ ಶುರುವಾಗಿದೆ. ಮುಂದಿನ ದಿನಗಳಲ್ಲಿ ಅವಶ್ಯಕತೆಗೆ ಅಣುಗುಣವಾಗಿ ಸರ್ಕಾರ ಆದೇಶಿಸಿದಲ್ಲಿ ಜಿಲ್ಲಾಡಳಿತದಿಂದ ಮೇವುಬ್ಯಾಂಕ್ ತೆರೆಯಲಾಗುವುದು.
-ಡಾ.ಆರ್.ಎಸ್.ಪದರಾ,
ಉಪನಿರ್ದೇಶಕರು, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.