ಶಿರಹಟ್ಟಿ: ಪ್ರತಿಯೊಬ್ಬರೂ ಧರ್ಮ ಮಾರ್ಗದಲ್ಲಿ ಸಾಗಬೇಕು. ನಮ್ಮ ಸಂಸ್ಕೃತಿ, ಪರಂಪರೆ, ಸಂಸ್ಕಾರಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು. ನಮ್ಮ ದೇಶಕ್ಕೆ ಅಧ್ಯಾತ್ಮವೇ ದೊಡ್ಡ ಶಕ್ತಿಯಾಗಿದೆ. ಸಮಾಜದ ಹಾಗೂ ಸರ್ವರ ಏಳಿಗೆಗೆ ಅಧ್ಯಾತ್ಮವೇ ಸುಲಭ ಮಾರ್ಗ ತೋರಿಸುತ್ತದೆ ಎಂದು ಜೈನ ಸಮಾಜದ ಗುರುಗಳಾದ ವಿಮಲಸಾಗರ ಸೂರಿಜಿ ಮಾರಾಸಾಹೇಬ ತಿಳಿಸಿದರು.ಲೋಕ ಕಲ್ಯಾಣಾರ್ಥವಾಗಿ ಗದುಗಿನಲ್ಲಿ ಚತುರ್ಮಾಸದ ಪ್ರಯುಕ್ತ ಜರುಗಿದ ೪ ತಿಂಗಳ ಧರ್ಮ ಕಾರ್ಯಕ್ರಮ ಮುಗಿಸಿ ಮೊಲದ ಬಾರಿಗೆ ಮಂಗಳವಾರ ಬೆಳ್ಳಂಬೆಳಗ್ಗೆ ಶಿರಹಟ್ಟಿ ಪಟ್ಟಣಕ್ಕೆ ಪ್ರವೇಶ ಮಾಡುತ್ತಿದ್ದಂತೆ ಜೈನ ಸಮಾಜದವರು ವಾದ್ಯ ಮೇಳಗಳೊಂದಿಗೆ ಅದ್ಧೂರಿಯಾಗಿ ಬರಮಾಡಿಕೊಂಡರು. ನಂತರ ಪಟ್ಟಣದಲ್ಲಿ ಸಂಚರಿಸುತ್ತಲೇ ಪಾರ್ಶ್ವನಾಥ ಜೈನ ಮಂದಿರಕ್ಕೆ ತೆರಳಿ ಅಲ್ಲಿ ಧರ್ಮದ ಕುರಿತು ಪ್ರವಚನ ನೀಡಿದರು.
ಮಾನವನ ಬಹುದೊಡ್ಡ ನಿಧಿ ಅಧ್ಯಾತ್ಮ. ಮಾನವನ ಅಧ್ಯಾತ್ಮ ಜೀವನದಿಂದ ಮಾತ್ರ ಉನ್ನತ ಶ್ರೇಯಸ್ಸು, ಶಾಂತಿ ನೆಮ್ಮದಿ ಹಾಗೂ ಜೀವನ ಮೌಲ್ಯವನ್ನು ಆನಂದಿಸಬಹುದು. ಭಾರತ ಅಧ್ಯಾತ್ಮದ ಸ್ವರ್ಗ ಮತ್ತು ಪುಣ್ಯ ಭೂಮಿ. ಭಾರತವನ್ನು ಇಡೀ ಜಗತ್ತು ಪವಿತ್ರ ನಾಡು ಎಂದು ಕರೆದಿದೆ. ಭಾರತೀಯರು ಎಲ್ಲ ಕ್ಷೇತ್ರಗಳಲ್ಲೂ ಅಪಾರ ಸಾಧನೆ ಮಾಡುತ್ತಿರುವುದಕ್ಕೆ ಆಧ್ಯಾತ್ಮಿಕ ಶಕ್ತಿಯ ರಹಸ್ಯವೇ ಕಾರಣವಾಗಿದೆ ಎಂದರು.ಆಡಂಬರದ ಜೀವನಕ್ಕಿಂತ ಆದರ್ಶದ ಜೀವನ ಶ್ರೇಷ್ಠ ಎಂಬುದು ಅರಿತಾಗ ಸಹಬಾಳ್ವೆಯ ಬಳ್ಳಿ ಜಿಗುರೊಡೆಯಲು ಸಾಧ್ಯ. ದೈನಂದಿನ ಒತ್ತಡದ ಜೀವನದಲ್ಲಿ ಮಾನಸಿಕ, ದೈಹಿಕ ನೆಮ್ಮದಿಗೆ ಹಾಗೂ ಶಾಂತಿಗೆ ಧಾರ್ಮಿಕ ಆಚರಣೆಗಳು ಅಗತ್ಯವಾಗಿವೆ. ಯಾಂತ್ರಿಕ ಜೀವನದಲ್ಲಿ ಮನುಷ್ಯರಿಗೆ ವಿಶ್ರಾಂತಿ ಎನ್ನುವುದೇ ಇಲ್ಲವಾಗಿದ್ದು, ಈ ಹಿನ್ನೆಲೆಯಲ್ಲಿ ಧಾರ್ಮಿಕ ಆಚರಣೆಗಳಿಂದಾಗಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸುತ್ತದೆ ಎಂದರು.
ಮುಖಂಡರಾದ ಭವರಲಾಲ್ ಮಣೋತ್, ಬುರಚಂದ್ ಜೈನ, ಉಮೇದಮಲ್ ಜೈನ, ಗೌತಮ ಜೈನ, ಪ್ರವೀಣ ಜೈನ, ದಿಲೀಪ್ ಮಣೋತ್, ಮಧು ಜೈನ, ಸವಿತಾ ಜೈನ, ತ್ರಿಶಲ್ ಜೈನ, ನಿರ್ಮಲಾ ಜೈನ, ಸಂಗೀತಾ ಜೈನ, ಧೀರಜ್ ಜೈನ, ಮೇವುಲ್ ಜೈನ, ಪ್ರಕ್ಷಾಲ್ ಜೈನ ಇತರರು ಇದ್ದರು.