ಹಾನಗಲ್ಲ: ಸಾಮಾಜಿಕ ಜೀವನದಲ್ಲಿ ಜಾತಿ ಅಂತಸ್ತುಗಳ ಲೇಪನಕ್ಕೆ ಅವಕಾಶವಿಲ್ಲದಂತೆ ಸಜ್ಜನನಾಗಿ ಬದುಕುವುದೇ ನಿಜವಾದ ವಚನ ಧರ್ಮ ಎಂದು ಶ್ರೀ ಕುಮಾರೇಶ್ವರ ಕಲಾ, ವಾಣಿಜ್ಯ ಮಹಾವಿದ್ಯಾಲಯದ ಪ್ರೊ.ನಾಗರಾಜ ದೊಡ್ಡಮನಿ ತಿಳಿಸಿದರು.ಹಾನಗಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ ಶರಣ ಸಂಗಮ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಸಕಲ ಜೀವಿಗಳಿಗೆ ಲೇಸ ಬಯಸುವುದೇ ಮಾನವ ಧರ್ಮ. ವರ್ಗ ವರ್ಣ ರಹಿತ ಸಮಾಜವನ್ನು ಕಟ್ಟಲು ಎಲ್ಲರೂ ಒಂದಾಗಬೇಕಾಗಿದೆ. ಬಸವಣ್ಣನವರ ವಿಚಾರಧಾರೆಯನ್ನು ಮನೆ ಮನಸ್ಸುಗಳಿಗೆ ತಲುಪಿಸುವ ಕಾರ್ಯ ನಡೆಯಬೇಕು ಎಂದರು.ಶಸಾಪ ತಾಲೂಕು ಘಟಕದ ಉಪಾಧ್ಯಕ್ಷ ಎಸ್.ಪಿ. ಹೇಮಗಿರಿಮಠ ಮಾತನಾಡಿ, ಅಕ್ಕಮಹಾದೇವಿಯಂತಹ ನಿಷ್ಠ ಶರಣೆ ಇಡೀ ಮನುಕುಲಕ್ಕೆ ಬದುಕಿನ ಸತ್ಯಗಳನ್ನು ತಿಳಿ ಹೇಳಿದ್ದಾಳೆ. ಬಸವಣ್ಣನವರು ಮಹಿಳಾ ಸಮಾನತೆಗಾಗಿ ಮಾಡಿದ ಹೋರಾಟದ ಫಲವೇ ವಚನಕಾರ್ತಿಯರು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸಾಧ್ಯವಾಗಿದೆ. ಶರಣರು ಜಾತಿ ರಹಿತ ಸಮಾಜದ ಸಂಕಲ್ಪಕ್ಕೆ ಮುಂದಾಗಿದ್ದರು. ಈಗ ಮತ್ತೆ ವಚನ ಕ್ರಾಂತಿ ನಡೆಯಬೇಕಾಗಿದೆ ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಿವಗಂಗಕ್ಕ ಪಟ್ಟಣದ, ಶರಣರ ಚಿಂತನೆಗಳನ್ನು ಇಡೀ ನಾಡಿನ ಮನೆ ಮನಸ್ಸುಗಳಲ್ಲಿ ಬಿತ್ತುವ ಕಾರ್ಯ ನಡೆಯಬೇಕಾಗಿದೆ. ಉತ್ತಮ ಸಮಾಜಕ್ಕಾಗಿ ವಚನಗಳು ಅತ್ಯುತ್ತಮ ಸಂದೇಶ ನೀಡಬಲ್ಲವು. ಈ ಕೆಲಸ ಜಾತಿ ಮತ ಭೇದವನ್ನು ದೂರ ಸರಿಸಿ ಒಟ್ಟಾಗಿ ಮಾಡಬೇಕಾದ ಕಾರ್ಯ ಎಂದರು.ಜಯಶ್ರೀ ತಿಳವಳ್ಳಿ, ಪುರಸಭೆ ಸದಸ್ಯೆ ವೀಣಾ ಗುಡಿ, ರೇಖಾ ಶೆಟ್ಟರ, ಸುಮಂಗಲ ಕಟ್ಟಿಮಠ, ಜ್ಯೋತಿ ಬೆಲ್ಲದ, ವಿಜಯಲಕ್ಷ್ಮೀ ಹಳ್ಳೀಕೇರಿ, ಸವಿತಾ ಉದಾಸಿ, ಮಂಗಳ ಅರಳಲಿಮಠ, ಅಕ್ಕಮ್ಮ ಕುಂಬಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ವಿಜಯಕ್ಕಾ ಕಬ್ಬೂರ ವಚನ ಪ್ರಾರ್ಥನೆ ಹಾಡಿದರು. ಕವಿತಾ ಹಿರೇಗೌಡರ ಸ್ವಾಗತಿಸಿದರು. ರೇಖಾ ಶೆಟ್ಟರ ಕಾರ್ಯಕ್ರಮ ನಿರೂಪಿಸಿದರು. ಸುಜಾತಾ ನಂದೀಶೆಟ್ಟರ ವಂದಿಸಿದರು.