ಚಿತ್ರದುರ್ಗ: ಪ್ರಕೃತಿಯಲ್ಲಿ ಹಲವಾರು ಜೀವಿಗಳಿವೆ. ಅವುಗಳಿಗೆ ತೊಂದರೆಯಾಗದಂತೆ ಮತ್ತು. ಸಂತೋಷವನ್ನುಂಟು ಮಾಡುವ ರೀತಿಯಲ್ಲಿ ನಮ್ಮ ಬದುಕು ಇರಬೇಕಿರುವುದೇ ನಿಜವಾದ ಧರ್ಮ. ಬೇರೆಯವರಿಗೆ ನೋವನ್ನು ನೀಡಿ ಬದುಕು ನಡೆಸುವುದು ಎಂದಿಗೂ ಧರ್ಮವಾಗುವುದಿಲ್ಲವೆಂದು ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ವಿ.ಗಿರೀಶ್ ಚಂದ್ರ ಅಭಿಪ್ರಾಯಪಟ್ಟರು.ನಗರದ ರಂಗಯ್ಯನ ಬಾಗಿಲು ಬಳಿಯಲ್ಲಿನ ಶ್ರೀ ಉಜ್ಜಯನಿ ಮಠದಲ್ಲಿ ಲಿಂಗೈಕ್ಯ ಮರುಳಾರಾಧ್ಯ ಶಿವಾಚಾರ್ಯ ಮಹಾಭಗವತ್ಪಾದರ 29ನೇ ವರ್ಷದ ಪುಣ್ಯ ಸ್ಮರಣೋತ್ಸವ, ವಟುಗಳಿಗೆ ಲಿಂಗದೀಕ್ಷಾ, ಜನಜಾಗೃತಿ ಮತ್ತು ಧರ್ಮಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಲಿಂಗೈಕ್ಯ ಶ್ರೀಗಳು ತಮ್ಮ ಬದುಕಿನಲ್ಲಿ ಪಾಲಿಸಿದ ತತ್ವಾದರ್ಶಗಳನ್ನು ಅಳವಡಿಸಿಕೊಂಡಾಗ ಮಾತ್ರ ಇಂತಹ ಕಾರ್ಯಕ್ರಮಗಳಿಗೆ ಅರ್ಥ ಬರುತ್ತದೆ ಎಂದರು.
ಕರ್ನಾಟಕದಲ್ಲಿ ವೀರಶೈವ ಮಠಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲಕರವಾದ ವಾತಾವರಣವನ್ನು ಸೃಷ್ಟಿ ಮಾಡಿವೆ. ಉಜ್ಜಿಯಿನಿ ಶ್ರೀಗಳು ಜ್ಞಾನ ದಾಸೋಹ ಮತ್ತು ಅನ್ನದಾಸೋಹಕ್ಕೆ ಹೆಸರು ಮಾಡಿದ್ದರು. ಲಿಂಗೈಕ್ಯ ಶ್ರೀಗಳು ಚಿತ್ರದುರ್ಗದ ಉಜ್ಜಯಿನಿ ಮಠವನ್ನು ನವೀಕರಣ ಮಾಡುವುದರ ಮೂಲಕ ಬೇರೆಯವರಿಗೆ ಆಶ್ರಯ ನೀಡಿದರು. ಶ್ರೀಗಳ ಜೀವನ ಸುಖದಿಂದ ಕೊಡಿರದೆ, ಕಷ್ಟ ಆವರಿಸಿತ್ತು. ಕಷ್ಟ ಕಾಲದಲ್ಲಿಯೇ ಮಠದ ಅಭಿವೃದ್ದಿ ಮಾಡಿದರು. ಅವರ ಜೀವನ ಚರಿತೆ ಓದಿದವರಿಗೆ ಕಷ್ಟಗಳು ಗೋತ್ತಾಗುತ್ತದೆ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ಇಚ್ಚಾಶಕ್ತಿ ಇರಬೇಕಿದೆ ಎಂದರು.ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ನಿರ್ದೇಶಕ ಡಾ.ಪಾಲಯ್ಯ ಮಾತನಾಡಿ, ಭಾರತದ ಮೇಲೆ ಆಂಗ್ಲರು ದಾಳಿ ಮಾಡಿದಾಗ ನಮ್ಮಲ್ಲಿ ಇದ್ದ ಪುರಾತನವಾದ ಶಿಕ್ಷಣ ಪದ್ದತಿಗಳಾದ ಭಾರತೀಯ ಸನಾತನ ಧರ್ಮವ ನಾಶ ಮಾಡುವ ಪ್ರಯತ್ನ ಮಾಡಿದರು. ಇದರಲ್ಲಿ ಲೋಕ ಶಿಕ್ಷಣ ಇಂದು ಮಾನವನ ಬಾಹ್ಯ , ಬ್ರಹ್ಮ ಶಿಕ್ಷಣ ಮಾನವನ ಆಂತರಿಕ ವ್ಯಕಿತ್ವವನ್ನು ತೋರಿಸುತ್ತದೆ. ಗುರು ಪರಂಪರೆ ಅನಾದಿ ಕಾಲದಿಂದಲೂ ನಡೆದುಕೊಂಡ ಬಂದ ಪದ್ಧತಿಯಾಗಿದೆ. ಶ್ರೀಮಠಗಳು ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕ ವಾತಾವರಣ ಪೋಷಣೆ ಮಾಡುತ್ತಾ ಬಂದಿವೆ ಎಂದರು.
ಜನಜಾಗೃತಿ ಮತ್ತು ಧರ್ಮಸಭಾ ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಲಕ್ಷ್ಮೇಶ್ವರದ ಕರೇವಾಡಿ ಮಠದ ಶ್ರೀ ಮಳೆ ಮಲ್ಲಿಕಾರ್ಜನ ಶಿವಾಚಾರ್ಯ ಶ್ರೀಗಳು ಮಾತನಾಡಿ, ಉಜ್ಜಿಯಿನಿ ಮಠದಲ್ಲಿ ಅಭ್ಯಾಸ ಮಾಡಿದ ಹಲವಾರು ವಿದ್ಯಾರ್ಥಿಗಳು ಇಂದಿನ ದಿನಮಾನದಲ್ಲಿ ಉನ್ನತವಾದ ಸ್ಥಾನ ಗಳಿಸಿದ್ದಾರೆ. ದಾನ ಮಾಡುವುದರ ಮೂಲಕ ಬೇರೆಯವರಿಗೆ ನೆರವಾಗಬೇಕಿದೆ. ಇದರೊಂದಿಗೆ ಮುಂದಿನ ದಿನದಲ್ಲಿ ಪ್ರತಿಫಲ ಸಿಗಲಿದೆ. ಊಟ ಹೊಟ್ಟೆಯನ್ನು ತುಂಬಿಸಬಹುದು, ಆದರೆ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜ್ಞಾನಿಗಳ ಮಾತನ್ನು ಆಲಿಸುವುದರಿಂದ ಬುದ್ಧಿ ಚುರುಕಾಗುತ್ತದೆ ಎಂದರು.ಚಿತ್ರದುರ್ಗದ ಉಜ್ಜಯನಿಮಠದ ನಿಯೋಜಿತ ಉತ್ತರಾಧಿಕಾರಿಗಳಾದ ಅಭೀಷೇಕ ದೇವರು, ನಾಗಯ್ಯ, ಚಿನ್ಮಯ, ಉಜ್ಜಯಿನಿ ಮಠದ ಕಾರ್ಯದರ್ಶಿ ಈಶ್ವರ ಪ್ರಸಾದ್, ಮನೋಜ್ ಭಾಗವಹಿಸಿದ್ದರು. ಬ್ರಾಹ್ಮೀ ಮುಹೂರ್ತದಲ್ಲಿ ವಟುಗಳಿಗೆ ಲಿಂಗಾದೀಕ್ಷಾ ಕಾರ್ಯಕ್ರಮ ನಡೆಯಿತು.