ಪು2...ಘನತೆಯಿಂದ ಬದುಕುವುದು ಮಾನವ ಹಕ್ಕು: ಮೂಲಿಮನಿ

KannadaprabhaNewsNetwork | Published : Dec 15, 2023 1:30 AM

ಸಾರಾಂಶ

ಘನತೆಯಿಂದ ಬದುಕುವುದು ಮಾನವ ಹಕ್ಕು: ಮೂಲಿಮನಿ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮಾನವನು ಮಾನವನಾಗಿ ಜೀವಿಸಲು ಮಾನವ ಹಕ್ಕುಗಳು ಅವಶ್ಯಕ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜೆ. ಎ. ಮೂಲಿಮನಿ ಹೇಳಿದರು.

ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾ ನ್ಯಾಯಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಸಹಯೋಗದಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ್ ನೂತನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶೋಷಣೆ ಮುಕ್ತ, ಆರೋಗ್ಯ ಪೂರ್ಣ ಪರಿಸರದಲ್ಲಿ ಗೌರವಯುತವಾಗಿ ಜೀವನ ನಡೆಸುವುದು, ತಮ್ಮ ಆಯ್ಕೆಯ ವೃತ್ತಿ ಮಾಡುವುದು, ಶೈಕ್ಷಣಿಕವಾಗಿ ಬೆಳೆಯುವುದು, ಯಾವುದೇ ಸ್ಥಳಕ್ಕೆ ಹೋಗಿ ವಾಸಿಸುವುದು, ಜಾತಿ ಮತ ಅಥವಾ ಲಿಂಗ ಆಧಾರಿತ ತಾರತಮ್ಯದಿಂದ ಮುಕ್ತಿ ಹೊಂದಿ ಘನತೆಯಿಂದ ಬದುಕುವುದು ಮಾನವ ಹಕ್ಕು ಆಗಿರುತ್ತದೆ ಎಂದರು.

ಮನುಷ್ಯನ ಘನತೆ ಭದ್ರತೆ ಸಮಾನತೆ ಮತ್ತು ಸ್ವಾತಂತ್ರ್ಯದ ಮಧ್ಯೆ ಪ್ರವೇಶ ಮಾಡದಂತೆ ರಕ್ಷಿಸುವುದೇ ಮಾನವ ಹಕ್ಕುಗಳ ಉದ್ದೇಶವಾಗಿದೆ. ನೈಸರ್ಗಿಕ ಕಾನೂನು ಸಹ ಮಾನವ ಹಕ್ಕುಗಳ ಕುರಿತು ಹೇಳುತ್ತದೆ. ಮಾನವ ಹಕ್ಕುಗಳು ಮಾನವನು ಮಾನವನಾಗಿ ಬದುಕಲು ಸಹಕಾರವನ್ನು ನೀಡುತ್ತವೆ ಎಂದು ತಿಳಿಸಿದರು.

ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ದ್ಯಾವಪ್ಪ ಎಸ್.ಬಿ ಮಾತನಾಡಿ, ಮಾನವ ಹಕ್ಕುಗಳ ಸಂರಕ್ಷಣೆ ಮಾಡುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಮಹತ್ವದಾಗಿದೆ. ಆದರೆ ಕೆಲವು ಬಾರಿ ಅಲ್ಲಿಯೇ ಮಾನವ ಹಕ್ಕುಗಳು ಉಲ್ಲಂಘನೆ ಕೂಡ ಆಗುತ್ತವೆ. ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ದಾಖಲಾಗಿ ಶಿಕ್ಷೆಯಾದಂತಹ ಪ್ರಮಾಣವು ಕಡಿಮೆ ಇದೆ. ಈ ನಿಟ್ಟಿನಲ್ಲಿ ಮಾನವ ಹಕ್ಕುಗಳ ಅರಿವು ರಕ್ಷಣೆ,ನೆರವು ಕಾರ್ಯಕ್ರಮ ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷ್ಯತೆ ವಹಿಸಿದ್ದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮಾತನಾಡಿ, ಯಾವ ವ್ಯಕ್ತಿಯೇ ಆಗಲಿ ಆ ವ್ಯಕ್ತಿಯನ್ನು ಕೀಳಾಗಿ ಕಾಣುವ ಹಕ್ಕು ಯಾರಿಗೂ ಇರುವುದಿಲ್ಲ. ವ್ಯಕ್ತಿಯನ್ನು ಗೌರವದಿಂದ ಕಂಡಾಗಲೇ ನಮಗೂ ಗೌರವ ಸಿಗುತ್ತದೆ. ಮನುಷ್ಯನನ್ನು ಪ್ರಾಣಿಗಿಂತ ಕಿಳಾಗಿ ಕಂಡಿದ್ದನ್ನು, ಎರಡನೇ ಮಹಾಯುದ್ದ ನಂತರದ ದಿನಗಳ ಇತಿಹಾಸದ ಪುಟಗಳಲ್ಲಿ ಕಾಣಬಹುದು. ವಿಶ್ವ ಸಂಸ್ಥೆಯು ವಿಶ್ವದ ಎಲ್ಲ ರಾಜ್ಯಗಳು ಕಲ್ಯಾಣ ರಾಜ್ಯವಾಗಬೇಕೆಂಬ ಉದ್ದೇಶದಿಂದ ಮಾನವ ಹಕ್ಕುಗಳ ದಿನಾಚರಣೆಯನ್ನು ಘೋಷಿಸಿದ್ದು ಇದಕ್ಕೆ ನಾವು ನಿವೇಲ್ಲರೂ ಬದ್ಧವಾಗಿ ನಡೆಯಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತ ಉಪಕಾರ್ಯದರ್ಶಿ ಅಮರೇಶ ನಾಯಕ, ಅಪರ ಜಿಲ್ಲಾಧಿಕಾರಿ ಪರುಶುರಾಮ ಶಿನ್ನಾಳಕರ, ಉಪವಿಭಾಧಿಕಾರಿ ಶ್ವೇತಾ ಬೀಡಿಕರ್ ಸೇರಿದಂತೆ ಇತರಿದ್ದರು.

--

ಕೋಟ್‌

ಶೈಕ್ಷಣಿಕವಾಗಿ ಬೆಳೆಯುವುದು, ಯಾವುದೇ ಸ್ಥಳಕ್ಕೆ ಹೋಗಿ ವಾಸಿಸುವುದು, ಜಾತಿ ಮತ ಅಥವಾ ಲಿಂಗ ಆಧಾರಿತ ತಾರತಮ್ಯದಿಂದ ಮುಕ್ತಿ ಹೊಂದಿ ಘನತೆಯಿಂದ ಬದುಕುವುದು ಮಾನವ ಹಕ್ಕು ಆಗಿರುತ್ತದೆ.

-ಜೆ.ಎ.ಮೂಲಿಮನಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ

---

(ಫೋಟೋ 12ಬಿಕೆಟಿ11,ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜೆ. ಎ. ಮೂಲಿಮನಿ

Share this article