ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭ

KannadaprabhaNewsNetwork |  
Published : Jul 19, 2026, 04:15 AM IST
ಎಲ್‌ಕೆಜಿ | Kannada Prabha

ಸಾರಾಂಶ

ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ಮೂಲಕ ಸರ್ಕಾರಿ ಶಾಲೆಗಳ ದಾಖಲಾತಿ ಕುಸಿಯದಂತೆ ತಡೆಯುವುದು ಹಾಗೂ ಅಧಿಕ ಶುಲ್ಕ ಭರಿಸಲಾಗದ ಬಡವರ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಿದ್ದು, ತಾಲೂಕಿನಲ್ಲಿ ಪೋಷಕರಿಂದ ಉತ್ತಮ ಸ್ಪಂದನೆ ದೊರೆತಿದೆ.

ಕನ್ನಡಪ್ರಭ ವಾರ್ತೆ ಇಂಡಿ

ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ಮೂಲಕ ಸರ್ಕಾರಿ ಶಾಲೆಗಳ ದಾಖಲಾತಿ ಕುಸಿಯದಂತೆ ತಡೆಯುವುದು ಹಾಗೂ ಅಧಿಕ ಶುಲ್ಕ ಭರಿಸಲಾಗದ ಬಡವರ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಿದ್ದು, ತಾಲೂಕಿನಲ್ಲಿ ಪೋಷಕರಿಂದ ಉತ್ತಮ ಸ್ಪಂದನೆ ದೊರೆತಿದೆ.ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಇಂಡಿ ಶೈಕ್ಷಣಿಕ ವಲಯಕ್ಕೆ 61 ಶಾಲೆಗಳು ಆಯ್ಕೆಯಾಗಿವೆ. ಈಗಾಗಲೇ 24 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಆರಂಭಗೊಂಡಿದ್ದು, 1005 ಮಕ್ಕಳು ದಾಖಲಾತಿ ಪಡೆದಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷ 24 ಶಾಲೆಗಳಲ್ಲಿ ಎಲ್ ಕೆಜಿ, ಯುಕೆಜಿ ತರಗತಿ ಆರಂಭಿಸಲಾಗಿದೆ. ಮಕ್ಕಳ ಸ್ನೇಹಿ ಕಲಿಕಾ ವಾತಾವರಣ, ಉಚಿತ ಪಠ್ಯ ಸಾಮಗ್ರಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಲಭ್ಯವಿರುವ ವಿವಿಧ ಸೌಲಭ್ಯಗಳು ಪೋಷಕರನ್ನು ಸೆಳೆಯುತ್ತಿವೆ.

ಶಿಕ್ಷಣ ಇಲಾಖೆ ಅಂಕಿ-ಅಂಶಗಳ ಪ್ರಕಾರ, ಎಲ್‌ಕೆಜಿಗೆ 481 ಹಾಗೂ ಯುಕೆಜಿಗೆ 524 ಮಕ್ಕಳು ಪ್ರವೇಶ ಪಡೆದಿದ್ದಾರೆ. ಇನ್ನೂ ದಾಖಲಾತಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಮಕ್ಕಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಹೊಂದಲಾಗಿದೆ.

ಇದುವರೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರ ಲಭ್ಯವಾಗುತ್ತಿದ್ದ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಈಗ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲೂ ಸಿಗುತ್ತಿರುವುದರಿಂದ ಅನೇಕ ಪೋಷಕರು ಆಸಕ್ತಿ ತೋರಿಸುತ್ತಿದ್ದಾರೆ. ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಿಕ್ಷಣವನ್ನು ಪೂರ್ವ ಪ್ರಾಥಮಿಕ ತರಗತಿ ಮಕ್ಕಳಿಗೆ ನೀಡುತ್ತಿರುವುದರಿಂದ ಪೋಷಕರು ಆಕರ್ಷಿತರಾಗಿದ್ದಾರೆ.

ದ್ವಿಭಾಷಾ ಮಾಧ್ಯಮ ಶಿಕ್ಷಣ:

ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ದ್ವಿಭಾಷಾ ಮಾಧ್ಯಮದಲ್ಲಿ (ಕನ್ನಡ ಮತ್ತು ಆಂಗ್ಲ) ನಡೆಸಲಾಗುತ್ತಿದೆ. ಇದರಿಂದ ಮಕ್ಕಳು ಆರಂಭದಿಂದಲೇ ಇಂಗ್ಲಿಷ್ ಭಾಷೆಯನ್ನು ಸುಲಭವಾಗಿ ಕಲಿಯುತ್ತಿದ್ದಾರೆ. ಪ್ರವೇಶ ಪಡೆದ ಮಕ್ಕಳಿಗೆ ಉಚಿತವಾಗಿ ಪಠ್ಯ ಪುಸ್ತಕಗಳು ಮತ್ತು ಆಕರ್ಷಕ ಕಲಿಕಾ ಸಾಮಗ್ರಿ ಒದಗಿಸಲಾಗುತ್ತಿದೆ. ಈ ಮಕ್ಕಳಿಗೂ ಬಿಸಿಯೂಟ, ಹಾಲು, ಮೊಟ್ಟೆ ಅಥವಾ ಬಾಳೆಹಣ್ಣು ನೀಡುವ ಯೋಜನೆ ಜಾರಿಗೆ ತಂದಿರುವುದು ಪೋಷಕರನ್ನು ಮತ್ತಷ್ಟು ಆಕರ್ಷಿಸಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ತರಗತಿಗಳು ನಡೆಯುವುದರಿಂದ ಗ್ರಾಮೀಣ ಕೃಷಿ ಕಾರ್ಮಿಕ ಪೋಷಕರಿಗೆ ಅನುಕೂಲವಾಗಿದೆ.

ಎಲ್‌ಕೆಜಿ, ಯುಕೆಜಿ ಮಕ್ಕಳು ಸರ್ಕಾರಿ ಶಾಲೆಗೆ ಬರುವುದರಿಂದ ಒಂದನೇ ತರಗತಿಗೂ ಅದೇ ಶಾಲೆಯಲ್ಲಿ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ. ಇದು ಸರ್ಕಾರಿ ಶಾಲೆಗಳು ಮುಚ್ಚುವುದನ್ನು ತಪ್ಪಿಸುತ್ತದೆ ಎಂಬುದು ಉದ್ದೇಶವಾಗಿದೆ.

ಬಾಕ್ಸ

ತಾಲೂಕಿನಲ್ಲಿ ಇಂಡಿ ನಗರದ ಗಾಂಧಿ ಚೌಕ್ ನಲ್ಲಿರುವ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್ ಕೆಜಿಗೆ 40, ಯುಕೆಜಿಗೆ 40 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಶಾಲೆಯಲ್ಲಿ ಕೋಣೆಗಳ ಕೊರತೆಯಿಂದ ದಾಖಲಾತಿ ಮಾಡಿಕೊಳ್ಳುವುದನ್ನು ನಿಲ್ಲಿಸಲಾಗಿದೆ.

ಎಲ್‌ಕೆಜಿ, ಯುಕೆಜಿ ತರಗತಿಗಳಿಗಾಗಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ದಾಖಲು ಮಾಡುತ್ತಿದ್ದರು. ಇದರಿಂದ ಬಡವರಿಗೆ ಆರ್ಥಿಕ ಹೊರೆಯಾಗುತಿತ್ತು. ನಮ್ಮ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳು ಶುರು ಮಾಡಿದ್ದು, ಇದರಿಂದ ಬಡವರಿಗೆ ಅನುಕೂಲವಾಗಲಿದೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು.

-ಯಶವಂತರಾಯಗೌಡ ಪಾಟೀಲ, ಶಾಸಕರು.

ಇಂಡಿ ಶೈಕ್ಷಣಿಕ ವಲಯದಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. 61 ಶಾಲೆಗಳು ಆಯ್ಕೆಯಾಗಿದ್ದು, ಇದರಲ್ಲಿ 24 ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಕಾರ್ಯಾರಂಭ ಮಾಡಿವೆ. ಇನ್ನುಳಿದ ಶಾಲೆಗಳಲ್ಲಿಯೂ ಆರಂಭಿಸಲು ಸೂಚಿಸಲಾಗುತ್ತದೆ. ಇಬ್ಬರು ಶಿಕ್ಷಕರು ಮತ್ತು ಒಬ್ಬರು ಆಯಾರನ್ನು ಗೌರವಧನ ಆಧಾರದ ಮೇಲೆ ನೇಮಿಸಿಕೊಳ್ಳಲು ಸಂಬಂಧಪಟ್ಟ ಶಾಲಾ ಮುಖ್ಯಸ್ಥರಿಗೆ ಜವಾಬ್ದಾರಿ ನೀಡಲಾಗಿದೆ.

- ಎಸ್.ಆರ್.ನಡಗಡ್ಡಿ ಪ್ರಭಾರ ಬಿಇಒ,ಇಂಡಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆಯಾಗದಿದ್ದರೆ ತಾಲೂಕಿನಲ್ಲಿ ಕುಡಿಯುವ ನೀರಿಗೂ ತೊಂದರೆ
ಸ್ವಂತ ಕರ್ಚಿನಲ್ಲಿ ಕೆರೆಗೆ ನೀರು ಹರಿಸಿದ ಶಾಸಕ ಜಗದೀಶ ಗುಡಗುಂಟಿ