ಕನ್ನಡಪ್ರಭ ವಾರ್ತೆ ಬೆಂಗಳೂರು
ವರ್ಷಾಂತ್ಯಕ್ಕೆ ಸಂಚಾರಕ್ಕೆ ಮುಕ್ತಗೊಳ್ಳುವ ನಿರೀಕ್ಷೆಯಿರುವ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ನಮ್ಮ ಮೆಟ್ರೋ ಹಳದಿ ಮಾರ್ಗದ ಇಂಟರ್ ಚೇಂಜ್ ಜಯದೇವ ಮೆಟ್ರೋ ನಿಲ್ದಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಸದ್ಯ ಗುಲಾಬಿ ಮಾರ್ಗದ ಹಂತದಲ್ಲಿ ಲೋಡ್ ಟೆಸ್ಟಿಂಗ್ ನಡೆಸಲಾಗುತ್ತಿದೆ.ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರ (ಹಳದಿ ಮಾರ್ಗ) ಹಾಗೂ ಕಾಳೇನ ಅಗ್ರಹಾರದಿಂದ ನಾಗವಾರದ (ಗುಲಾಬಿ ಮಾರ್ಗ) ಭಾಗವಾಗಿದ್ದು, ಇವೆರಡು ಮಾರ್ಗವನ್ನು ಒಗ್ಗೂಡಿಸುತ್ತಿದೆ. ಪ್ರಯಾಣಿಕರು ಮಾರ್ಗ ಬದಲಾವಣೆ ಮಾಡಿಕೊಳ್ಳಲು ಈ ನಿಲ್ದಾಣ ಅವಕಾಶ ಕಲ್ಪಿಸಲಿದೆ.
ಡಿಸೆಂಬರ್ ವೇಳೆಗೆ ಎಲೆಕ್ಟ್ರಾನಿಕ್ ಸಿಟಿ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗುತ್ತಿದ್ದಂತೆ ಈ ನಿಲ್ದಾಣ ಕಾರ್ಯಾರಂಭ ಮಾಡಲಿದೆ. ಮುಂದೆ 2025 ರಲ್ಲಿ ಗುಲಾಬಿ ಮಾರ್ಗದಲ್ಲಿ ರೈಲುಗಳ ಸಂಚಾರ ಶುರುವಾದ ಬಳಿಕ ಪೂರ್ಣ ಪ್ರಮಾಣದಲ್ಲಿ ನಿಲ್ದಾಣ ಬಳಕೆ ಆಗಲಿದೆ. 19,826 ಚದರ ಕಿಮೀ ವಿಸ್ತೀರ್ಣವನ್ನು ಹೊಂದಿರುವ ಈ ನಿಲ್ದಾಣ ಜನದಟ್ಟಣೆಯ ವೇಳೆ ಸುಮಾರು 25 ಸಾವಿರ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಜಯದೇವ ಮೆಟ್ರೋ ನಿಲ್ದಾಣದ ಶೇ.96ರಷ್ಟು ನಿರ್ಮಾಣ ಕಾರ್ಯ ಮುಗಿದಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.ಎರಡು ವಾರದಿಂದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣ ಪಾರ್ಕಿಂಗ್‌ಗೆ ಬೀಗ
ಕನ್ನಡಪ್ರಭ ವಾರ್ತೆ ಬೆಂಗಳೂರುಬೆಂಗಳೂರು ಮೆಟ್ರೋ ರೈಲು ನಿಗಮ ಹಾಗೂ ಗುತ್ತಿಗೆದಾರರ ನಡುವಿನ ಸಂಘರ್ಷದಿಂದಾಗಿ ಕಳೆದ ಎರಡು ವಾರದಿಂದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣ ಪಾರ್ಕಿಂಗ್ ಸ್ಥಳದ ಗೇಟಿಗೆ ಬೀಗ ಬಿದ್ದಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಗೇಟಿನ ಎದುರು ‘ತಾತ್ಕಾಲಿಕವಾಗಿ ಮುಚ್ಚಲಾಗಿದೆ’ ಎಂದು ಫಲಕ ಹಾಕಲಾಗಿದ್ದು, ಏತಕ್ಕೆ ಮುಚ್ಚಲಾಗಿದೆ, ಯಾವಾಗ ತೆರೆಯುತ್ತದೆ ಎಂಬ ಮಾಹಿತಿಯನ್ನು ಬಿಎಂಆರ್‌ಸಿಎಲ್ ತಿಳಿಸುತ್ತಿಲ್ಲ. ನಿಲ್ದಾಣಕ್ಕೆ ಬರುವ ಪ್ರಯಾಣಿಕರು ತಮ್ಮ ವಾಹನಗಳನ್ನು ಸನಿಹದ ಮನೆ, ಕಟ್ಟಡಗಳ ಬಳಿ ಪಾರ್ಕ್ ಮಾಡಿ ತೆರಳುತ್ತಿದ್ದಾರೆ.ನೇರಳೆ ಮಾರ್ಗ ಪೂರ್ಣಗೊಂಡ ಬಳಿಕ ಇಲ್ಲಿಂದ ವೈಟ್‌ಫೀಲ್ಡ್ ಕಡೆಗೆ ಸಂಚರಿಸುವವರು ಹೆಚ್ಚಾಗಿದ್ದಾರೆ. ಬಹುತೇಕ ಪ್ರಯಾಣಿಕರು ಬೈಯಪ್ಪನಹಳ್ಳಿಯಲ್ಲಿ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಿ ಮೆಟ್ರೋ ರೈಲು ಹತ್ತುತ್ತಿದ್ದಾರೆ. ಮಾ.3ರಿಂದ ಪಾರ್ಕಿಂಗ್ ಬಂದ್ ಆಗಿರುವುದು ಪ್ರಯಾಣಿಕರಿಗೆ ಪೀಕಲಾಟ ತಂದಿಟ್ಟಿದೆ.
ಪಾರ್ಕಿಂಗ್ ಸ್ಥಳದಲ್ಲಿ 280 ಬೈಕ್, 25 ಕಾರು, 10 ಸೈಕಲ್ ನಿಲುಗಡೆ ಮಾಡಬಹುದು. ಪಾರ್ಕಿಂಗ್ ಜಾಗದ ನಿರ್ವಹಣೆ ವಹಿಸಿಕೊಂಡಿದ್ದ ಗುತ್ತಿಗೆದಾರರ ಅವಧಿ ಮುಕ್ತಾಯವಾಗಿದೆ. ನಷ್ಟ ಉಂಟಾಗುತ್ತಿದೆ ಎಂಬ ಕಾರಣಕ್ಕೆ ಅವರು ಗುತ್ತಿಗೆ ನವೀಕರಣಕ್ಕೆ ಕೋರಿಲ್ಲ. ಬಳಿಕ ಕರೆದ ಟೆಂಡರ್‌ನಲ್ಲಿ ಗುತ್ತಿಗೆ ವಹಿಸಿಕೊಂಡವರು ಅರ್ಧದಷ್ಟು ಠೇವಣಿ ತುಂಬಿದ್ದರು. ಉಳಿದ ಪ್ರಕ್ರಿಯೆಗಳು ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.ಪಾರ್ಕಿಂಗ್‌ನಲ್ಲಿ ಒಂದು ಕಡೆಯಿಂದ ಪ್ರವೇಶಿಸಿ, ಇನ್ನೊಂದು ಕಡೆಯಿಂದ ಹೊರಹೋಗುತ್ತಿದ್ದ ವ್ಯವಸ್ಥೆ ಇತ್ತು. ಅದರಲ್ಲಿ ಒಂದು ತುದಿಯ ಸ್ಥಳವನ್ನು ಬಿಎಂಆರ್‌ಸಿಎಲ್ ಬೇರೆ ಉದ್ದೇಶಕ್ಕೆ ಬಳಸಲು ನಿರ್ಧರಿಸಿದ್ದರಿಂದ ಗುತ್ತಿಗೆದಾರರು ಮುಂದೆ ಯಾವುದೇ ಪ್ರಕ್ರಿಯೆ ನಡೆಸಿಲ್ಲ. ಪಾರ್ಕಿಂಗ್ ಗುತ್ತಿಗೆ ವ್ಯವಸ್ಥೆ ಪೂರ್ಣಗೊಳ್ಳುವ ತನಕ ಜನತೆಗೆ ಉಚಿತವಾಗಿ ಪಾರ್ಕಿಂಗ್‌ಗೆ ಅವಕಾಶ ಕೊಡಬೇಕು. ಬೀಗ ಹಾಕಿ ತೊಂದರೆ ಮಾಡಬಾರದು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.