ಮುಂಡರಗಿ: ಗೃಹಲಕ್ಷ್ಮಿ ವಿವಿಧೋದ್ದೇಶಗಳ ಸಹಕಾರ ಸಂಘ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ರಚನೆಯಾಗಲಿದ್ದು, ಅರ್ಹ ಫಲಾನುಭವಿಗಳಿಗೆ ಸಂಘದ ಮೂಲಕ ₹80 ಸಾವಿರದಿಂದ ₹3 ಲಕ್ಷದವರೆಗೆ ಸಾಲ ಸೌಲಭ್ಯ ಇರುತ್ತದೆ ಎಂದು ತಾಲೂಕು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಡಿ.ಡಿ. ಮೋರನಾಳ ತಿಳಿಸಿದರು.ಮಂಗಳವಾರ ಪಟ್ಟಣದ ತಾಪಂ ಸಾಮರ್ಥ್ಯಸೌಧದಲ್ಲಿ ಜರುಗಿದ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗೃಹಲಕ್ಷ್ಮಿ ವಿವಿಧೋದ್ದೇಶಗಳ ಸಹಕಾರ ಸಂಘದಿಂದ ಮಹಿಳೆಯರನ್ನು ಮತ್ತಷ್ಟು ಸ್ವಾವಲಂಬನೆ ಮಾಡುವ ಯೋಜನೆ ಇದೆ. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಸಾಮಾಜಿಕ, ಆರ್ಥಿಕ ಬದಲಾವಣೆ ಕಾಣಬಹುದು. ಪಂಚಯೋಜನೆಗಳಲ್ಲಿ ಏನಾದರೂ ತೊಂದರೆಯಾದರೆ ತಮ್ಮನ್ನು ಇಲ್ಲವೆ ಉಚಿತ 181 ಸಹಾಯವಾಣಿ ಸೌಲಭ್ಯ ಇದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಕೆಎಸ್ಆರ್ಟಿಸಿ ಘಟಕ ವ್ಯವಸ್ಥಾಪಕ ಶೇಖರ ನಾಯಕ ಮಾತನಾಡಿ, ಬಸ್ ನಿಲ್ದಾಣ ಹಳೆಯದಾಗಿದ್ದು, ನೂತನವಾಗಿ ನಿರ್ಮಿಸಲು ಮೇಲಧಿಕಾರಿಗೆ ಪ್ರಸ್ತಾವನೆ ಕಳಿಸಲಾಗಿದೆ. ಎಲ್ಲಿ ಅವಶ್ಯಕತೆ ಇದೆಯೊ ಅಲ್ಲಿ ಬಸ್ಸಿನ ಸೌಲಭ್ಯ ದೊರಕಿಸಲು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ತಿಳಿಸಲಾಗುವುದು. ಇನ್ನು ಹಡಗಲಿಯಿಂದ ಮುಂಡರಗಿ ಮಾರ್ಗವಾಗಿ ಗದಗ ಹೊರಡುವ ತಡೆರಹಿತ ಬಸ್ಸುಗಳು ಗದಗ ಹಳೆ ಬಸ್ ನಿಲ್ದಾಣಕ್ಕೆ ಹೋಗುವಂತೆ ಸಂಬಂಧಟ್ಟ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದರು.
ಹೆಸ್ಕಾಂ ಎಇ ಬಸವರಾಜ, ಸಿಡಿಪಿಒ ಮಹಾದೇವಪ್ಪ ಇಸರನಾಳ ಮಾತನಾಡಿದರು. ಸದಸ್ಯರಾದ ರಾಮಣ್ಣ ಮೇಗಲಮನಿ, ನಾಗರಾಜ ಸಜ್ಜನರ, ಗಣೇಶ ರಾಠೋಡ, ಕಾಶಪ್ಪ ಹೊನ್ನೂರ, ವಿಶ್ವನಾಥ ಪಾಟೀಲ, ಜೈಲಾನಸಾಬ ವಡ್ಡಟ್ಟಿ, ಸುರೇಶ ಮಾಳಗಿಮನಿ, ಶರಣಪ್ಪ ಮಲ್ಲಾಪೂರ ಇತರರು ಇದ್ದರು.