ಉತ್ತಮ ತಳಿಗಳ ಹಸು ಖರೀದಿಸಲು ಸಾಲಸೌಲಭ್ಯ: ಡಾ.ರಾಜಣ್ಣ

KannadaprabhaNewsNetwork |  
Published : Jan 12, 2026, 01:15 AM IST
11ಕೆಆರ್ ಎಂಎನ್ 7.ಜೆಪಿಜಿಮಾಗಡಿ ತಾಲೂಕು ಕೆಂಕೆರೆಪಾಳ್ಯದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ  ಕರ್ನಾಟಕ ಸಹಕಾರ ಹಾಲ ಉತ್ಪಾದಕರ ಸಹಕಾರ ಮಂಡಳದ ವತಿಯಿಂದ ಏರ್ಪಡಿಸಿದ್ದ ಕ್ಷೀರಸಂಜೀವಿನಿ ಕಾರ್ಯಕ್ರಮದಲ್ಲಿ  ಹಸುವನ್ನು ಕೊಳ್ಳಲು ಬಡ್ಡಿ ರಹಿತ ಸಾಲವನ್ನು ಬೆಂಗಳೂರು ಹಾಲು ಒಕ್ಕೂಟದ ಉಪಾಧ್ಯಕ್ಷ ಡಾ.ರಾಜಣ್ಣ ವಿತರಿಸಿದರು. | Kannada Prabha

ಸಾರಾಂಶ

ಬೆಂಗಳೂರು ನಗರ, ಗ್ರಾಮಾಂತರ ಮತ್ತು ಬೆಂಗಳೂರು ದಕ್ಷಿಣ ಈ ಮೂರು ಜಿಲ್ಲೆಗಳಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿಯೇ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘಗಳಿರುವುದನ್ನು ಕಾಣಬಹುದಾಗಿದೆ. ಇಲ್ಲಿನ ಆಡಳಿತ ವ್ಯವಸ್ಥೆ ಅತ್ಯಂತ ಚುರುಕಾಗಿದ್ದು, ರೈತರೊಂದಿಗೆ ನಿಕಟ ಸಂಪರ್ಕವನ್ನು ಇಟ್ಟುಕೊಂಡಿದ್ದರ ಫಲವಾಗಿ ಅಧಿಕಾರಿಗಳು ಹೆಚ್ಚು ಉತ್ಸಾಹಿಗಳಾಗಿ ಸರ್ಕಾರದ ಯೋಜನೆಗಳನ್ನು ಸುಲಭವಾಗಿ ಹೈನುಗಾರಿಕೆ ರೈತರಿಗೆ ತಲುಪಿಸಲು ಸಹಕಾರಿಯಾಗಿದೆ.

ಕನ್ನಡಪ್ರಭ ವಾರ್ತೆ ಕುದೂರು

ದೇಶದಲ್ಲೇ ಎರಡನೇ ಅತಿದೊಡ್ಡ ಮೆಗಾಡೈರಿಯನ್ನು ಕನಕಪುರದಲ್ಲಿ ನಿರ್ಮಾಣ ಮಾಡಲಾಗಿದೆ. ಅದು ನಿತ್ಯ 25 ಲಕ್ಷ ಲೀಟರ್ ಹಾಲು ಸಂಗ್ರಹ ಮಾಡುವಷ್ಟು ದೊಡ್ಡ ಡೈರಿಯಾಗಿದೆ. ಆದರೆ ಈಗ ಅಲ್ಲಿ ಹಾಲು ಸಂಗ್ರಹವಾಗುತ್ತಿರುವುದು ಕೇವಲ 18 ಲಕ್ಷ ಲೀಟರ್ ಆಗಿದೆ. ಇದರಿಂದ ಹೆಚ್ಚಿನ ಹಾಲು ಸಂಗ್ರಹಕ್ಕೆ ರೈತಾಪಿ ಜನರು ಉತ್ತಮ ತಳಿಗಳ ಹಸುಗಳನ್ನು ಸಾಕಲು ಸಾಲಸೌಲಭ್ಯವನ್ನು ನೀಡಲಾಗುತ್ತಿದೆ ಎಂದು ಬೆಂಗಳೂರು ಹಾಲು ಒಕ್ಕೂಟದ ಉಪಾಧ್ಯಕ್ಷ ಡಾ.ರಾಜಣ್ಣ ಹೇಳಿದರು.

ಮಾಗಡಿ ತಾಲೂಕು ಕೆಂಕೆರೆಪಾಳ್ಯದ ಡೈರಿಯಲ್ಲಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಸಹಕಾರ ಮಂಡಳದ ವತಿಯಿಂದ ಏರ್ಪಡಿಸಿದ್ದ ಕ್ಷೀರಸಂಜೀವಿನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಸುಗಳನ್ನು ಕೊಳ್ಳಲು ಬಡ್ಡಿ ರಹಿತವಾಗಿ ಮಹಿಳೆಯರಿಗೆ 46 ಸಾವಿರ ರು.ಗಳನ್ನು ನೀಡಲಾಗುತ್ತಿದೆ. ಕೆಂಕೆರೆಪಾಳ್ಯದಲ್ಲಿ ಈ ರೀತಿ 14 ಮಹಿಳೆಯರಿಗೆ ಸಾಲಸೌಲಭ್ಯವನ್ನು ನೀಡಲಾಗುತ್ತಿದೆ. ಈ ಮೂಲಕ ಹಸುಗಳನ್ನು ಕೊಂಡು ತಂದು ಹೈನುಗಾರಿಕೆಯಲ್ಲಿ ತೊಡಗಿ ತಾವು ದುಡಿದು ಬೆಳೆಯುವುದರ ಜೊತೆಗೆ ಹಾಲು ಒಕ್ಕೂಟಗಳನ್ನು ಬೆಳೆಸುವ ಜವಾಬ್ದಾರಿಗೆ ರೈತಾಪಿ ಜನರೊಂದಿಗೆ ಕೈಜೋಡಿಸುತ್ತಿದ್ದೇವೆ ಎಂದರು.

ಹೈನುಗಾರಿಕೆಯಿಂದ ಕುಟುಂಬಗಳು ಸುಭದ್ರವಾಗಿ ನಿಲ್ಲುತ್ತಿರುವುದನ್ನು ನಾವು ಕಾಣಬಹುದಾಗಿದೆ. ಹೈನುಗಾರಿಕೆ ಮಾಡುವ ರೈತಾಪಿ ಜನರ ಮಕ್ಕಳು ಉನ್ನತ ವಿದ್ಯಾಭ್ಯಾಸಕ್ಕೂ ನಮ್ಮ ಬೆಂಗಳೂರು ಹಾಲು ಒಕ್ಕೂಟ ಹೆಚ್ಚಿನ ಸಹಕಾರ ನೀಡುತ್ತಿದೆ. ಸರ್ಕಾರದ ಒಬ್ಬ ಉನ್ನತ ಅಧಿಕಾರಿ ಪಡೆಯುವ ಸಂಬಳಕ್ಕಿಂತ ಎರಡೂವರೆ ಪಟ್ಟು ಹೆಚ್ಚು ಹಣವನ್ನು ಹೈನುಗಾರಿಕೆಯಿಂದ ಸಂಪಾದಿಸುವ ರೈತರ ದೊಡ್ಡ ಪಟ್ಟಿಯೇ ಇದೆ. ಸ್ವಾವಲಂಬನೆಯ ಬದುಕು ಅವರನ್ನು ಹೆಚ್ಚು ಸಂತೋಷವಾಗಿಡುತ್ತಿರುವುದನ್ನು ನಾವು ಕಾಣಬಹುದಾಗಿದೆ ಎಂದು ರಾಜಣ್ಣ ಹೇಳಿದರು.

ಶೀಥಲ ಕೇಂದ್ರದ ಪ್ರಧಾನ ವ್ಯವಸ್ಥಾಪಕಿ ಭವ್ಯಶ್ರೀ ಮಾತನಾಡಿ, ಬೆಂಗಳೂರು ನಗರ, ಗ್ರಾಮಾಂತರ ಮತ್ತು ಬೆಂಗಳೂರು ದಕ್ಷಿಣ ಈ ಮೂರು ಜಿಲ್ಲೆಗಳಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿಯೇ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘಗಳಿರುವುದನ್ನು ಕಾಣಬಹುದಾಗಿದೆ. ಇಲ್ಲಿನ ಆಡಳಿತ ವ್ಯವಸ್ಥೆ ಅತ್ಯಂತ ಚುರುಕಾಗಿದ್ದು, ರೈತರೊಂದಿಗೆ ನಿಕಟ ಸಂಪರ್ಕವನ್ನು ಇಟ್ಟುಕೊಂಡಿದ್ದರ ಫಲವಾಗಿ ಅಧಿಕಾರಿಗಳು ಹೆಚ್ಚು ಉತ್ಸಾಹಿಗಳಾಗಿ ಸರ್ಕಾರದ ಯೋಜನೆಗಳನ್ನು ಸುಲಭವಾಗಿ ಹೈನುಗಾರಿಕೆ ರೈತರಿಗೆ ತಲುಪಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಕೆಂಕೆರೆಪಾಳ್ಯದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಲತಾ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಗಳನ್ನು ಮಾಡಿರುವ ಮಹಿಳೆಯರ ಪಟ್ಟಿ ಅತ್ಯಂತ ಉದ್ದವಾಗಿದೆ. ಈಗ ಅಂತಹ ಸಾಧನೆಗೆ ಕೆಂಕೆರೆಪಾಳ್ಯ ಭಾಗದ ಮಹಿಳೆಯರು ಸಜ್ಜಾಗಿ ನಿಂತಿದ್ದಾರೆ. ಅದಕ್ಕೆ ಬೆಂಗಳೂರು ಹಾಲು ಒಕ್ಕೂಟದಿಂದ ಏನೆಲ್ಲಾ ಅನುಕೂಲಗಳು ಬೇಕೋ ಅದನ್ನೆಲ್ಲಾ ಶಕ್ತಿಮೀರಿ ತಲುಪಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಶೀಥಲ ಕೇಂದ್ರದ ಡಿ.ಎಂ. ನವೀನ್‌ಕುಮಾರ್, ಕೆಂಕೆರೆಪಾಳ್ಯದ ಪ್ರಕಾಶ್, ಸಿದ್ದಲಿಂಗಮೂರ್ತಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ