ಕನ್ನಡಪ್ರಭ ವಾರ್ತೆ ಗುಬ್ಬಿ
ನಾವು ದುಡಿದ ಹಣವನ್ನು ದಾನ ಮಾಡಿದರೆ, ದೇವರು ಎರಡು ಪಟ್ಟು ನೀಡುತ್ತಾನೆ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕಿ ಭಾರತಿ ಶ್ರೀನಿವಾಸ್ ತಿಳಿಸಿದರು.ತಾಲೂಕಿನ ಸುಗ್ಗನಪಾಳ್ಯ ಗ್ರಾಮದ ಸರ್ಕಾರಿ ಶಾಲೆಯ ಎಲ್ ಕೆ ಜಿ ಹಾಗೂ ಯುಕೆಜಿ ಶಾಲಾ ಮಕ್ಕಳಿಗೆ ಸಮವಸ್ತ್ರ ಹಾಗೂ ಶೂ ವಿತರಣೆ ಮಾಡಿ ಮಾತನಾಡಿದ ಅವರು, ಸರ್ಕಾರ ಯುಕೆಜಿ ಹಾಗೂ ಎಲ್ ಕೆ ಜಿ ಶಾಲೆಯನ್ನು ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭಿಸಿದೆ. ಈ ಮಾದರಿಯನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ. ಪ್ರತಿಯೊಂದು ಗ್ರಾಮದಲ್ಲಿ ಸರ್ಕಾರಿ ಶಾಲೆಯನ್ನು ಉಳಿಸಬೇಕಾದರೆ ಅಲ್ಲಿನ ಗ್ರಾಮಸ್ಥರು ಕೈಜೋಡಿಸಿದಾಗ ಮಾತ್ರ ಸಾಧ್ಯ. ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರು ಪಾಠಹೇಳಿಕೊಡುವ ಅನುಭವ ಚೆನ್ನಾಗಿದ್ದರೆ ಮಾತ್ರ ಮಾಡಿದ ಪಾಠ ಮಕ್ಕಳ ತಲೆಗೆ ಹೋಗುತ್ತದೆ. ಶಿಕ್ಷಕರು ಸಹ ನಿರಂತರ ಅಭ್ಯಾಸದಲ್ಲಿ ತೊಡಗಿ ಮಕ್ಜಳ ಮನಸ್ಸನ್ನು ಅರಿತು ಪಾಠ ಮಾಡಬೇಕು ಎಂದರು.
ಚಾಲುಕ್ಯ ಆಸ್ಪತ್ರೆಯ ಸಿಇಒ ಡಾ.ನಾಗಭೂಷಣ್ ಮಾತನಾಡಿ, ಕಳೆದ ಮೂರು ವರ್ಷಗಳ ಹಿಂದೆ 88 ಮಕ್ಕಳು ಅಭ್ಯಾಸ ಮಾಡುತ್ತಿದ್ದರು. ಈಗ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಎಲ್ ಕೆ ಜಿ, ಯುಕೆಜಿ ಗೆ 55 ವಿದ್ಯಾರ್ಥಿಗಳು ಸೇರ್ಪಡೆಯಾಗಿರುವುದು ಖಂಡಿತವಾಗಿಯೂ ಉತ್ತಮ ಶೈಕ್ಷಣಿಕ ವಾತಾವರಣ ಇದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಯಾಗಲು ಕೇವಲ ಒಬ್ಬರಿಂದ ಮಾಡಲು ಸಾಧ್ಯವಿಲ್ಲ. ಶಿಕ್ಷಕರು, ಎಸ್ ಡಿ ಎಂ ಸಿ, ಪೋಷಕರು, ಶಿಕ್ಷಣ ಇಲಾಖೆ ಮತ್ತು ಶಾಸಕರು ಎಲ್ಲರ ಸಹಕಾರ ಮುಖ್ಯ. ನಮ್ಮೂರ ಶಾಲೆಯನ್ನು ನಾವು ಅಭಿವೃದ್ಧಿ ಮಾಡುವ ಕನಸನ್ನು ಕಟ್ಟಿಕೊಳ್ಳೋಣ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಎಸ್‌ಸಿಎಂಸಿ ಅಧ್ಯಕ್ಷ ರಾಮಣ್ಣ, ಹಾಲು ಒಕ್ಕೂಟದ ಅಧ್ಯಕ್ಷ ವಿಶ್ವನಾಥ್, ಗ್ರಾಮ ಪಂಚಾಯತಿ ಅಧ್ಯಕ್ಷ ಯೋಗೇಶ್, ಸದಸ್ಯರಾದ ಚಂದ್ರಶೇಖರ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ನಂದೀಶ್, ಉಪಾಧ್ಯಕ್ಷೆ ನೇತ್ರ, ನಿವೃತ್ತ ಉಪನ್ಯಾಸಕ ಗಂಗಾಧರ್, ಇಸಿಓ ನಿಜಾನಂದ ಮೂರ್ತಿ, ಸಿಆರ್‌ಪಿ ಶಶಿಕಲಾ, ಮುಖ್ಯ ಶಿಕ್ಷಕ ರವಿಕುಮಾರ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಪೋಷಕರು, ಗ್ರಾಮಸ್ಥರು ಮತ್ತಿತರರು ಇದ್ದರು.