ಶಾಸಕ ಕೊತ್ತೂರು ಮಂಜುನಾಥ್ ಹಠಮಾರಿ ಧೋರಣೆ ಖಂಡಿಸಿ ದಲಿತ ಮುಖಂಡರಿಂದ ಪ್ರತಿಭಟನೆ
ನಗರದ ಪಿಸಿ ಬಡಾವಣೆಯಲ್ಲಿರುವ ದಲಿತರ ಸ್ಮಶಾನದಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಸ್ಥಳೀಯ ನಿವಾಸಿಗಳು ಸ್ಮಶಾನದಲ್ಲಿ ನಗರಸಭೆ ನಾಮನಿರ್ದೇಶನ ಸದಸ್ಯ ಸುರೇಶ್ ಕುಮಾರ್, ಗಣೇಶ್, ಮಹೇಶ್, ಮಂಜುನಾಥ್, ಚಿನ್ನ ನೇತೃತ್ವದಲ್ಲಿ ಅಂಬೇಡ್ಕರ್ ಭಾವಚಿತ್ರವಿಟ್ಟುಕೊಂಡು ತಮಟೆ ಬಾರಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ನಗರದ ಪಿ.ಸಿ.ಬಡಾವಣೆಯಲ್ಲಿರುವ ಈ ಸ್ಮಶಾನ ದಲಿತರದ್ದಾಗಿದೆ, ದಲಿತರಲ್ಲಿ ಮೃತದೇಹವನ್ನು ಸುಡುವ ಸಂಪ್ರದಾಯವೂ ಇಲ್ಲ, ಆದರೂ ಇಲ್ಲೇ ಚಿತಾಗಾರ ನಿರ್ಮಿಸುವ ಹಠ ಏಕೆ ಎಂದು ಪ್ರಶ್ನಿಸಿದರು.ಈ ಹಿಂದೆ ಶಾಸಕ ಕೊತ್ತೂರು ಮಂಜುನಾಥ್ ಅವರು ಗುದ್ದಲಿ ಪೂಜೆ ನಡೆಸಲು ಮುಂದಾಗಿದ್ದ ಸಂದರ್ಭದಲ್ಲೂ ಸ್ಥಳೀಯರು, ದಲಿತ ಸಮುದಾಯದವರು ವಿರೋಧ ವ್ಯಕ್ತಪಡಿಸಿದ್ದು, ಈ ಸಂದರ್ಭದಲ್ಲಿ ಶಾಸಕರು ಸ್ಥಳಾಂತರ ಮಾಡುವ ಬಗ್ಗೆ ಭರವಸೆ ನೀಡಿದ್ದರು ಎಂದು ತಿಳಿಸಿದರು.
ದಲಿತರ ಸ್ಮಶಾನದಲ್ಲಿ ವಿದ್ಯುತ್ ಚಿತಾಗಾರದ ಅಗತ್ಯವಿಲ್ಲ. ಜತೆಗೆ ಪಕ್ಕದಲ್ಲೇ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನವೂ ಇದ್ದು, ಇಲ್ಲಿ ವ್ಯಾಯಾಮ ಮಾಡಲು ನಿತ್ಯ ಸಾವಿರಾರು ಮಂದಿ ವೃದ್ದರು, ಮಕ್ಕಳು ಬರುತ್ತಾರೆ ಇಂತಹ ಜಾಗದಲ್ಲೇ ಇಂತಹ ಚಿತಾಗಾರದ ಅಗತ್ಯವಿದೆಯೇ ಎಂದು ಕಿಡಿಕಾರಿದರು.
ಈ ಸ್ಮಶಾನದ ಪಕ್ಕದಲ್ಲೇ ಜನ ವಸತಿಗಳಿವೆ, ಸೂಕ್ತ ರಸ್ತೆ ಸಂಪರ್ಕವೂ ಇಲ್ಲ ಎಂದು ತಿಳಿಸಿ, ಈಗಾಗಲೇ ಹಿಂದೂ ರುದ್ರಭೂಮಿಯಲ್ಲಿ ಅನಿಲಚಿತಾಗಾರ ವಿದ್ದು, ಅದು ಕೆಟ್ಟಿದೆ. ಅಲ್ಲಿಯೇ ಅಗತ್ಯ ಮೂಲ ಸೌಕರ್ಯಗಳಿರುವುದರಿಂದ ವಿದ್ಯುತ್ ಚಿತಾಗಾರವನ್ನು ಅಲ್ಲೇ ನಿರ್ಮಿಸಲಿ ಎಂದು ಆಗ್ರಹಿಸಿದರು.
ಶಾಸಕರಿಗೆ ನಿಜಕ್ಕೂ ಕೋಲಾರ ನಗರಕ್ಕೆ ಒಳ್ಳೆಯದು ಮಾಡಬೇಕಿದ್ದರೆ ಅನೇಕ ಕೆಲಸಗಳು ಬಾಕಿ ಇವೆ, ಅಗತ್ಯವಿರುವ ಕಡೆ ಸ್ಮಶಾನಗಳಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಿ ಅಂತಹ ಸಂಪ್ರದಾಯ ಇರುವವರಿಗೆ ನೆರವಾಗಲಿ, ಅದು ಬಿಟ್ಟು ವಿದ್ಯುತ್ ಚಿತಾಗಾರಕ್ಕೆ ದಲಿತರ ಸ್ಮಶಾನವೇ ಬೇಕೆ ಎಂದು ಪ್ರಶ್ನಿಸಿದರು.