ಈಶಾ ಫೌಂಡೇಶನ್ ಚಟುವಟಿಕೆಗಳಿಗೆ ಸ್ಥಳೀಯರ ವಿರೋಧ

KannadaprabhaNewsNetwork |  
Published : Apr 24, 2025, 12:05 AM IST
ಸಿಕೆಬಿ-4 ಸುದ್ದಿಗೋಷ್ಟಿಯಲ್ಲಿ ಮುಸ್ಟೂರು ಶ್ರೀಧರ್ ಮಾತನಾಡಿದರು | Kannada Prabha

ಸಾರಾಂಶ

ಈಶಾ ಫೌಂಡೇಶನ್ ಸರ್ಕಾರಕ್ಕೆ ಸ್ಥಳೀಯರಿಗೆ ಶಿಕ್ಷಣವನ್ನು ನೀಡುವುದಾಗಿ ಹೇಳಿ ಪರವಾನಿಗೆಯನ್ನು ಪಡೆದಿದ್ದು, ಇಂದು ಅದರ ತದ್ವಿರುದ್ಧವಾಗಿ ನಡೆದುಕೊಂಡು ಅಕ್ರಮವಾಗಿ ಸರ್ಕಾರಿ ಜಮೀನಿನಲ್ಲಿ ರಸ್ತೆಯನ್ನು ನಿರ್ಮಿಸಲಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಈಶಾ ಫೌಂಡೇಶನ್ ಚಿಕ್ಕಬಳ್ಳಾಪುರದಲ್ಲಿ ಸ್ಥಾಪನೆಯಾದಗಿನಿಂದ ಇಲ್ಲಿಯವರೆಗೂ ಸ್ಥಳೀಯರಿಗೆ ಯಾವುದೇ ಲಾಭವಿಲ್ಲದೆ ಹೋಗಿದೆ. ಅದರಿಂದ ಸುತ್ತಮುತ್ತಲಿನ ರೈತರು ತೊಂದರೆ ಅನುಭವಿಸುವಂತಾಗಿದೆ. ಭೂಕಬಳಿಕೆ, ಪರಿಸರ ನಿಯಮ ಉಲ್ಲಂಘನೆಯಾಗುತ್ತಿದ್ದು ಶೀಘ್ರವೇ ಪ್ರತಿಭಟನೆ ಮಾಡುವುದಾಗಿ ಸಾಮಾಜಿಕ ಹೋರಾಟಗಾರ ಮುಸ್ಟೂರು ಶ್ರೀಧರ್ ಎಚ್ಚರಿಕೆ ನೀಡಿದ್ದಾರೆ.

ನಗರದ ಕಾರ್ಯನಿರತ ಪರ್ತಕರ್ತರ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಈಶಾ ಫೌಂಡೇಶನ್ ಸರ್ಕಾರಕ್ಕೆ ಸ್ಥಳೀಯರಿಗೆ ಶಿಕ್ಷಣವನ್ನು ನೀಡುವುದಾಗಿ ಹೇಳಿ ಪರವಾನಿಗೆಯನ್ನು ಪಡೆದಿದ್ದು, ಇಂದು ಅದರ ತದ್ವಿರುದ್ಧವಾಗಿ ನಡೆದುಕೊಂಡು ಅಕ್ರಮವಾಗಿ ಸರ್ಕಾರಿ ಜಮೀನಿನಲ್ಲಿ ರಸ್ತೆಯನ್ನು ನಿರ್ಮಿಸಲಾಗಿದೆ. ಇದು ಜಿಲ್ಲಾಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಕಿಡಿಕಾರಿದರು.ಈಶಾ ಫೌಂಡೇಶನ್ ಮುಖ್ಯಸ್ಥರಲ್ಲಿ ಒಬ್ಬರಾಗಿರುವ ಗೋಪಾಲನ್ ಮತ್ತು ಇನ್ನೊಬ್ಬರ ಮೇಲೆ ಬೆಂಗಳೂರಿನ ಬಿಬಿಎಂಪಿಯು ಅಕ್ರಮವಾಗಿ ರಾಜಕಾಲುವೆ ಮೇಲೆ ಕಟ್ಟಡಗಳನ್ನು ಕಟ್ಟಿರುವುದು ಸಾಬೀತಾಗಿ ನೋಟಿಸ್ ಅನ್ನು ನೀಡಿದೆ. ಅದೇ ರೀತಿಯಾಗಿ ಆದಿ ಯೋಗಿ ವಿಗ್ರಹವನ್ನು ನಿರ್ಮಿಸಿರುವ ಜಾಗದಲ್ಲಿ ಅದರ ಸುತ್ತಮುತ್ತಲು ಅನೇಕ ಜಲಮೂಲಗಳನ್ನು ಮತ್ತು ರಾಜಕಾಲುವೆಗಳನ್ನು ಮುಚ್ಚಿ ಹಾಕಿ, ಅಲ್ಲಿ ಪ್ರವಾಸಿ ತಾಣವನ್ನಾಗಿ ಮಾಡಲಾಗಿದೆ. ಪ್ರವಾಸಿ ತಾಣಕ್ಕೆ ಬೆಂಗಳೂರು ಮತ್ತು ಇತರೆ ನಗರಗಳಿಂದ ಪ್ರವಾಸಿಗರನ್ನು ಆಕರ್ಷಿಸಿ ವಾಹನ ದಟ್ಟಣೆ ಮಾಡಿ ಅದರಿಂದ ಅಪಘಾತಗಳು ಹೆಚ್ಚಾಗುವಂತೆ ಮಾಡುತ್ತಿರುವ ಹೊಣೆಗಾರಿಕೆಯು ಈಶಾ ಫೌಂಡೇಶನ್ ಮೇಲಿದೆ ಎಂದಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಕಳೆದ ಮೂರು ನಾಲ್ಕು ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಈಶಾ ಟೆಂಪಲ್ ಕಡೆಯಿಂದ ಜೋರಾಗಿ ರಾಷ್ಟ್ರೀಯ ಹೆದ್ದಾರಿಕ್ಕೆ ನುಗ್ಗಿದ ಪರಿಣಾಮ ಬಾಗೇಪಲ್ಲಿ ಕಡೆಯಿಂದ ಬಂದಿರುವ ಟ್ರಕ್ ಜೋರಾಗಿ ತಿರುಗಿ ಬೈಕ್ ಸವಾರನ ಕುಟುಂಬವು ಸ್ಥಳದಲ್ಲೇ ಸಾವನ್ನಪ್ಪಿರುವುದು ಜೀವಂತ ಸಾಕ್ಷಿಯಾಗಿದೆ. ಆ ಕುಟುಂಬದ ಕಣ್ಣೀರು ಒರೆಸುವ ಯಾವುದೇ ಕೆಲಸವು ಇಲ್ಲಿಯವರೆಗೆ ಯಾರು ಮಾಡಿಲ್ಲ ಎಂದರು.

ವಕೀಲ ನಾರಾಯಣ ಸ್ವಾಮಿ ಮಾತನಾಡಿ, ಆದಿ ಯೋಗಿ ಹೆಸರಿನಲ್ಲಿ ಇವರು ವೈಯಕ್ತಿಕ ಲಾಭವನ್ನು ಮಾಡಿಕೊಳ್ಳುತ್ತಿದ್ದಾರೆ ವಿನಹ ಯಾವುದೇ ಸಾರ್ವಜನಿಕ ಹಿತಾಸಕ್ತಿಯು ಇಲ್ಲಿ ಕಂಡು ಬರುತ್ತಿಲ್ಲ. ಅದರಲ್ಲೂ ಸರ್ಕಾರದ ಜಮೀನಿನಲ್ಲಿ ಅಕ್ರಮವಾಗಿ ರಸ್ತೆಯನ್ನು ಮಾಡಿ, ಆ ರಸ್ತೆಯಲ್ಲಿ ಬರುವಂತಹ ಪ್ರವಾಸಿಗರಿಂದ ಅಕ್ರಮವಾಗಿ ಟೋಲನ್ನು ವಸೂಲಿ ಮಾಡುತ್ತಿದ್ದಾರೆ. ಇದರ ವಿರುದ್ಧ ಸ್ಥಳೀಯರು ತುಂಬಾ ಆಕ್ರೋಶಗೊಂಡಿದ್ದು, ಈಶಾದ ಅಕ್ರಮ ನೀತಿಗಳನ್ನು ಕೂಡಲೇ ರದ್ದು ಮಾಡಿ, ಅತಿಕ್ರಮಣ ತೆರವುಗೊಳಿಸಿ ದೇಶಕ್ಕೆ ಅನ್ನ ಕೊಡುವ ರೈತರ ಜಮೀನು ಮತ್ತು ಬಡಬಗ್ಗರ ನಿವೇಶನಗಳನ್ನು ಕಾಪಾಡಿ ಎಂದು ಮನವಿ ಮಾಡಿದ್ದಾರೆ.

ತಾಲೂಕು ಆಡಳಿತವೂ ಅಂದು ಮಾಡಿದ ತಪ್ಪಿನಿಂದ ಎರಡು ಊರುಗಳು ಖಾಲಿ ಮಾಡಿಸಿ, ಈಶಾ ಫೌಂಡೇಶನ್‌ಗೆ ಜಾಗವನ್ನು ಒದಗಿಸಿದೆ. ಸಾರ್ವಜನಿಕರ ಕೆಲಸ ಮಾಡಲು ಸರ್ಕಾರಿ ಅಧಿಕಾರಿಗಳಿಗೆ ಪುರುಸೊತ್ತು ಇರುವುದಿಲ್ಲ. ಆದರೆ ಈಶಾದವರ ಕೆಲಸವನ್ನು ಎರಡು ಮೂರು ದಿನದಲ್ಲಿ ಮುಗಿಸಿ ಕೊಡುವಂತಹ ಭ್ರಷ್ಟ ಅಧಿಕಾರಿಗಳು ಚಿಕ್ಕಬಳ್ಳಾಪುರದಲ್ಲಿ ಇದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಸುದ್ದಿಗೋಷ್ಟಿಯಲ್ಲಿ ಜ್ಯೋತಿ, ರಮೇಶ್, ಮಂಚನಬಲೆ ಸೋಮಶೇಖರ್, ನಾರಾಯಣಮ್ಮ, ಮತ್ತಿತರರು ಇದ್ದರು.

ಸಿಕೆಬಿ-4 ....ಸುದ್ದಿಗೋಷ್ಟಿಯಲ್ಲಿ ಮುಸ್ಟೂರು ಶ್ರೀಧರ್ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ