ಉಗ್ರವಾದಿ ದುಷ್ಕೃತ್ಯ ಜಾಗತಿಕ ಷಡ್ಯಂತ್ರ-ಪುತ್ತಿಗೆ ಶ್ರೀ ಖಂಡನೆ
ಕನ್ನಡಪ್ರಭ ವಾರ್ತೆ ಉಡುಪಿಕಾಶ್ಮೀರದ ಪಹಲ್ಗಾಮ್‌ನಲ್ಲಿ ಇಸ್ಲಾಂ ಭಯೋತ್ಪಾದರಿಂದ ಹಿಂದುಗಳ ಮಾರಣಹೋಮದ ಬಗ್ಗೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಒಂದೆಡೆ ಪಶ್ಚಿಮ ಬಂಗಾಲದಲ್ಲಿ, ಇನ್ನೊಂದೆಡೆ ಕಾಶ್ಮೀರದಲ್ಲಿ ಹಿಂದುಗಳ ಮೇಲೆ ದಾಳಿ ನಡೆಯುತ್ತಿದೆ. ಇತ್ತೀಚೆಗೆ ಕಾಶ್ಮೀರ ಫೈಲ್ಸ್ ಎಂಬ ಸಿನಿಮಾವನ್ನು ನೋಡಿದ್ದೆವು. ಅದಕ್ಕೆ ಕಿಂಚಿತ್ತು ವ್ಯತಿರಿಕ್ತ ಇಲ್ಲದಂತೆ ಈ ಉಗ್ರರ ದಾಳಿ ನಡೆದಿದೆ. ಇದರಿಂದ ತೀವ್ರ ಅಘಾತವಾಗಿದೆ ಎಂದವರು ಹೇಳಿದ್ದಾರೆ.ಕೇಂದ್ರ ಸರ್ಕಾರ ತಕ್ಷಣವೇ ಈ ಘಟನೆಯ ಹಿಂದ ಇರುವವರ ಮೇಲೆ ಕಟು ಕ್ರಮ ತೆಗೆದುಕೊಳ್ಳಬೇಕು, ಇನ್ನೆಲ್ಲಿಯೂ ಇಂತಹ ಘಟನೆ ಮರುಕಳಿಸಬಾರದಂತಹ ರೀತಿಯಲ್ಲಿ ವ್ಯವಸ್ಥೆ ಮಾಡಬೇಕು ಮತ್ತು ದೇಶದಲ್ಲಿ ಹಿಂದುಗಳ ಸುಭದ್ರತೆಯನ್ನು ಕಾಯ್ದುಕೊಳ್ಳುವ ಕ್ರಮ ವಹಿಸಬೇಕು ಎಂದವರು ಆಗ್ರಹಿಸಿದ್ದಾರೆ.
ಷಡ್ಯಂತ್ರ - ಪುತ್ತಿಗೆ ಶ್ರೀ:ಕಾಶ್ಮೀರದಲ್ಲಿ ಹಿಂದೂಗಳ ಮೇಲಿನ ದಾಳಿಯಿಂದ ವ್ಯಾಕುಲರಾಗಿದ್ದೇವೆ. ಇದು ಹಿಂದೂ ಧರ್ಮವನ್ನೇ ನಾಶ ಮಾಡುವ ಹುನ್ನಾರ ಎಂದು ಎಂದು ಉಡುಪಿ ಪರ್ಯಾಯ ಪುತ್ತಿಗೆ ಮಠಾಧೀಸ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ.
ಇಂತಹ ಘಟನೆಗಳಿಂದ ಭಾರತದಲ್ಲಿ ಸನಾತನ ಧರ್ಮದ ಅಸ್ತಿತ್ವವೇ ನಾಶವಾಗುವ ಆತಂಕ ಉಂಟಾಗಿದೆ. ಸರ್ಕಾರ ತಕ್ಷಣ ಎಚ್ಚೆತ್ತು ಇದಕ್ಕೆ ಶಾಶ್ವತ ಪರಿಹಾರ ಮಾಡಬೇಕು ಎಂದವರು ಆಗ್ರಹಿಸಿದ್ದಾರೆಕೇರಳ, ಪಶ್ಚಿಮ ಬಂಗಾಳ, ಕಾಶ್ಮೀರಗಳಲ್ಲಿ ಹಿಂದುಗಳ ಮೇಲೆ ದಾಳಿಯ ಹಿಂದೆ ಮಾಸ್ಟರ್ ಪ್ಲಾನ್ ವರ್ಕ್ ಮಾಡುತ್ತಿದೆ, ದೇಶದಲ್ಲಿ ಕಾಣದ ಕೈಗಳು ಸಕ್ರಿಯವಾಗಿವೆ, ಇವುಗಳನ್ನು ಪತ್ತೆ ಮಾಡಿ ಅದರ ಮೂಲಬೇರು ಕಿತ್ತೆಸೆಯಬೇಕು. ಉಗ್ರವಾದವನ್ನೇ ಸಂಪೂರ್ಣ ನಿರ್ಮೂಲನ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದುವರೆಗೆ ಉಗ್ರರು ನಿರಪರಾಧಿಗಳನ್ನು ಸಾರ್ವಜನಿಕರನ್ನು ಕೊಲ್ಲುತ್ತಾರೆ ಎಂಬ ಭಾವನೆ ಇತ್ತು, ಆದರೆ ಈಗ ಹಿಂದುಗಳನ್ನು ನಾಶ ಮಾಡುವುದೇ ಇವರ ಹುನ್ನಾರ ಎಂಬುದು ಸ್ಪಷ್ಟವಾಗಿದೆ. ಇದು ಕೇವಲ ಭಯೋತ್ಪಾದನೆ ಅಲ್ಲ, ಇದೊಂದು ಜಾಗತಿಕ ಷಡ್ಯಂತ್ರ, ಕೇಂದ್ರ ಸರ್ಕಾರ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದವರು ಸರ್ಕಾರವನ್ನು ಆಗ್ರಹಿಸಿದ್ದಾರೆ.