ಕನ್ನಡಪ್ರಭ ವಾರ್ತೆ ಕುಶಾಲನಗರ
ಕಳೆದ ಆರು ದಶಕಗಳ ಕಾಲ ಪತ್ರಿಕಾ ವಿತರಣೆಯಲ್ಲಿ ತೊಡಗಿಸಿಕೊಂಡಿರುವ ಪ್ರಕಾಶ್ ಕಳೆದ ಕೆಲವು ದಿನಗಳಿಂದ ಹಿಂದೆ ಇದ್ದ ನೆಲೆ ಕಳೆದುಕೊಂಡು ರಸ್ತೆ ಬದಿಯಲ್ಲಿ ಪತ್ರಿಕೆ ವಿತರಣೆ ಮಾಡ ಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
ಕುಶಾಲನಗರ ಗಣಪತಿ ದೇವಾಲಯ ನೂತನ ಕಟ್ಟಡ ನಿರ್ಮಾಣ ಹಿನ್ನೆಲೆಯಲ್ಲಿ ಪ್ರಕಾಶ್ ಈ ಹಿಂದೆ ಪತ್ರಿಕೆಗಳನ್ನು ಮಾರಾಟ ಮಾಡುತ್ತಿದ್ದ ಸ್ಥಳದಿಂದ ಮಡಿಕೇರಿ ರಸ್ತೆಯ ಬದಿಯಲ್ಲಿ ನೆಲೆ ಕಾಣಬೇಕಾದ ಪರಿಸ್ಥಿತಿ ಉಂಟಾಗಿ ಈ ಸಂಬಂಧ ಕುಶಾಲನಗರ ಪುರಸಭೆ ಸಾಮಾನ್ಯ ಸಭೆಯಲ್ಲಿ ಆಡಳಿತ ಮಂಡಳಿ ಸದಸ್ಯರು ಚರ್ಚಿಸಲಾಗಿತ್ತು. ಪ್ರಸಕ್ತ ನೂತನ ವಾಣಿಜ್ಯ ಸಂಕೀರ್ಣದ ಹೊರಭಾಗದಲ್ಲಿ ಅವರಿಗೆ ಅವಕಾಶ ಕಲ್ಪಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಪುರಸಭೆ ಮುಖ್ಯ ಅಧಿಕಾರಿ ಕೃಷ್ಣ ಪ್ರಸಾದ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಈಗಾಗಲೇ ಮಡಿಕೇರಿ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ಅವರೊಂದಿಗೆ ಸ್ಥಳೀಯ ಪತ್ರಕರ್ತರು ಮನವಿ ಮಾಡಿದ್ದು ಹಿರಿಯ ಪತ್ರಿಕಾ ವಿತರಕರಾದ ವಿ ಪಿ ಪ್ರಕಾಶ್ ಅವರಿಗೆ ಸರ್ಕಾರಿ ಬಸ್ ನಿಲ್ದಾಣದ ಆವರಣದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ಅವಕಾಶ ಕಲ್ಪಿಸುವಂತೆ ಕೋರಿದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಅವಕಾಶ ಕಲ್ಪಿಸುವುದಾಗಿ ಈಗಾಗಲೇ ಭರವಸೆ ವ್ಯಕ್ತಪಡಿಸಿದ್ದಾರೆ.