ಲಕ್ಕವಳ್ಳಿಯಲ್ಲಿ ವಿಶೇಷ ಗ್ರಾಮಸಭೆ
ನಿವೇಶನ ರಹಿತರಿಗೆ ನಿವೇಶನ ನೀಡುವ ಕಾರ್ಯಕ್ರಮದಡಿ ಸುಮಾರು 65 ನಿವೇಶನಗಳನ್ನು ಹಂಚಿಕೆ ಮಾಡಲು ಲಕ್ಕವಳ್ಳಿ ಗ್ರಾಮಪಂಚಾಯಿತಿ ಆಡಳಿತ ಮಂಡಳಿಯಿಂದ ಸ್ಥಳವನ್ನು ಆಯ್ಕೆ ಮಾಡಲಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.ಶುಕ್ರವಾರ ತಾಲೂಕಿನ ಲಕ್ಕವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ರಹಿತ ಅರ್ಹ ಪಲಾನುಭವಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಆಯೋಜಿಸಿದ್ದ ವಿಶೇಷ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದರು. ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಸರ್ಕಾರ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ನಿವೇಶನ ರಹಿತರಿಗೆ ಸೌಲಭ್ಯ ಒದಗಿಸುವುದಾಗಿ ಘೋಷಣೆ ಮಾಡಿದ್ದಾರೆ ಆದ್ದರಿಂದ ಈ ಸದರಿ ಭಾಗದ ನಿವೇಶನ ರಹಿತರಿಗೆ ನಿವೇಶನ ಸೌಲಭ್ಯ ಒದಗಿಸಲು ಲಕ್ಕವಳ್ಳಿ ಗ್ರಾಪಂ ವ್ಯಾಪ್ತಿಯ ಉಪ್ಪಾರಬೀರನಹಳ್ಳಿಯಲ್ಲಿ ಗುರುತಿಸಲಾದ ಸ್ಥಳದಲ್ಲಿ ಅರ್ಹತಾ ಪಟ್ಟಿ ತಯಾರಿಸಿ ಗ್ರಾಮದ ಜನತೆ ಮುಂದೆ ಪಾರದರ್ಶಕವಾಗಿ ಆಯ್ಕೆ ಮಾಡಲು ತಾಲೂಕು ಆಡಳಿತದೊಂದಿಗೆ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ತಿಳಿಸಿದರು.ನಂತರ ನಿವೇಶನ ರಹಿತರಿಗೆ ಸಭೆಯಲ್ಲಿ ಮಕ್ಕಳ ಕೈಯಲ್ಲಿ ಲಾಟರಿ ಎತ್ತುವ ಮೂಲಕ ಫಲಾನುಭವಿಗಳ ಆಯ್ಕೆ ಮಾಡಲಾಯಿತು. ಮುಂದಿನ ದಿನಗಳಲ್ಲಿ ಈ ಸಭೆಯಲ್ಲಿ ನಿವೇಶನ ವಂಚಿತರಾದ ಫಲಾನುಭವಿಗಳಿಗೆ ಲಭ್ಯವಿರುವ ಜಾಗದಲ್ಲಿ ಎಲ್ಲರಿಗೂ ನಿವೇಶನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಅಬ್ದುಲ್ ರೆಹಮಾನ್, ಉಪಾಧ್ಯಕ್ಷೆ ಭವಾನಿ ಗಣೇಶ್, ಸದಸ್ಯ ಬಾಲರಾಜ್, ಫಣಿರಾಜ್, ಕಿರಣ್ ಕುಮಾರ್ ಮತ್ತು ಪದಾಧಿಕಾರಿಗಳು, ಗ್ರಾಪಂ ಮಾಜಿ ಸದಸ್ಯ ಎಲ್ ಟಿ ಹೇಮಣ್ಣ, ಕಾಡಾ ನಿಗಮದ ಸದಸ್ಯ ರಾಜಶೇಖರ್, ಎಪಿಎಂಸಿ ಮಾಜಿ ಅಧ್ಯಕ್ಷ ಪಾಂಡುರಂಗ ಜಾದವ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆರ್.ದೇವೇಂದ್ರಪ್ಪ, ನೋಡಲ್ ಅಧಿಕಾರಿ ಭಾಗವಹಿಸಿದ್ದರು.-
12ಕೆಟಿಆರ್.ಕೆ.6ಃತರೀಕೆರೆ ಸಮೀಪದ ಲಕ್ಕವಳ್ಳಿಯಲ್ಲಿ ನಡೆದ ವಿಶೇಷ ಗ್ರಾಮಸಭೆಯನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರೆಹಮಾನ್ ಮತ್ತಿತರರು ಇದ್ದರು.