ಕನ್ನಡಪ್ರಭ ವಾರ್ತೆ ಕೊಲ್ಹಾರ
ನಗರದಲ್ಲಿ ತಮ್ಮ ಗೃಹ ಕಚೇರಿಗೆ ಮಂಗಳವಾರ ಭೇಟಿ ನೀಡಿದ ಕೊಲ್ಹಾರ ಪಟ್ಟಣದ ನಿಯೋಗದ ಮನವಿ ಆಲಿಸಿದ ಸಚಿವರು, ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದೇನೆ. ಸಂತ್ರಸ್ತರ ಪುನರ್ವಸತಿ ಕೇಂದ್ರವಾದ ಕೊಲ್ಹಾರ ಪಟ್ಟಣ ಸೇರಿದಂತೆ ಇಡೀ ತಾಲೂಕಿನ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದೇನೆ. ಇದರ ಭಾಗವಾಗಿ ತಾಲೂಕು ಆಡಳಿತಸೌಧ ಹಾಗೂ ಬಸ್ ಡಿಪೋ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಸ್ಥಳೀಯರಿಗೆ ಅನುಕೂಲ ಆಗುವ ರೀತಿಯಲ್ಲಿ ಸ್ಥಳೀಯರ ಒಕ್ಕೊರಲಿನ ನಿರ್ಧಾರದಂತೆ ಅಭಿವೃದ್ಧಿ ಯೋಜನೆ ರೂಪಿಸಲಾಗುತ್ತದೆ. ಹೀಗಾಗಿ ಅಭಿವೃದ್ಧಿ ವಿಷಯದಲ್ಲಿ ಒಡಕಿನ, ಅಪಸ್ವರದ ಮಾತುಗಳು ಬೇಡ ಎಂದು ಕಿವಿ ಮಾತು ಹೇಳಿದರು.
ಮನವಿ ಸಲ್ಲಿಸಿ ಮಾತನಾಡಿದ ನಿಯೋಗದ ಮುಖಂಡರಾದ, ಸಿ.ಎಂ.ಗಣಕುಮಾರ, ಕೊಲ್ಹಾರ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಈರಣ್ಣ ಕೋಮಾರ, ಕೊಲ್ಹಾರ ಪಟ್ಟಣದ ಶಾಲಾ ಆವರಣದಲ್ಲಿ ಪ್ರಜಾಸೌಧ ನಿರ್ಮಾಣ ಮತ್ತು ಬಸ್ ನಿಲ್ದಾಣ ಭಾಗ-1ರಲ್ಲಿ ಬಸ್ ಡಿಪೋ ನಿರ್ಮಾಣಕ್ಕೆ ಸ್ಥಳ ನಿಗದಿ ಮಾಡಿರುವ ಮಾಹಿತಿ ಇದೆ. ಆದರೆ ಪುನರ್ವಸತಿ ಕೇಂದ್ರವಾದ ಕೊಲ್ಹಾರ ಪಟ್ಟಣದಲ್ಲಿನ ಈ ಸ್ಥಳ ಬಳಕೆಯ ಬದಲಾಗಿ ಸದರಿ ಎರಡೂ ಯೋಜನೆಗಳಿಗೆ ಪರ್ಯಾಯ ಸ್ಥಳ ನಿಗದಿ ಮಾಡುವಂತೆ ಮನವಿ ಮಾಡಿದರು.ಕೊಲ್ಹಾರ ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ಮತ್ತು ಉರ್ದು ಪ್ರಾಥಮಿಕ ಶಾಲೆಯ ಆವರಣದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಸ್ಥಳ ನಿಗದಿ ಹಾಗೂ ದಿಗಂಬರೇಶ್ವರ ಮಠದ ಹತ್ತಿರ ಬಸ್ ನಿಲ್ದಾಣದಲ್ಲಿ ಬಸ್ ಡಿಪೋ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ ಎಂಬ ಮಾಹಿತಿ ಇದೆ. ಈ ಎರಡೂ ಸ್ಥಳಗಳು ಪಟ್ಟಣದ ಹೃದಯ ಭಾಗದಲ್ಲಿದ್ದು ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಲು ಪಟ್ಟಣದ ಮಧ್ಯೆ ಇರುವ ಶಾಲೆ ಹಾಗೂ ಈ ಭಾಗದ ಜನರಿಗೆ ಬಸ್ ನಿಲ್ದಾಣ ಅವಶ್ಯಕತೆ ಇದೆ. ಹೀಗಾಗಿ ಇವೆರಡೂ ಸ್ಥಳಗಳ ಬದಲಾಗಿ ಬೇರೆ ಸ್ಥಳ ಗುರುತಿಸುವಂತೆ ಕೋರಿದರು.