ಲಾಕಪ್ ಡೆತ್: ಮೃತನ ಪತ್ನಿಗೆ ಸಾಂತ್ವನ ಹೇಳದ ಸಚಿವ ಜಮೀರ್

KannadaprabhaNewsNetwork |  
Published : Aug 09, 2026, 02:45 AM IST
ಹಗರಿಬೊಮ್ಮನಹಳ್ಳಿಯ ಬೈ ಪಾಸ್ ವೃತ್ತದಲ್ಲಿ ಲಾಕಪ್ ಡೆತ್‌ನಲ್ಲಿ ಮೃತರಾಗಿರುವ ಖಲೀಲ್ ಸಾಬ್ ಪತ್ನಿ ಶೈನಾಜ್ ಬೇಗಂ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಮನವಿ ಸಲ್ಲಿಸಲೆಂದು ಮಕ್ಕಳೊಂದಿಗೆ ಕಾದಿರುವುದು. | Kannada Prabha

ಸಾರಾಂಶ

ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಪ್ರಕರಣದ ತನಿಖೆ ಮತ್ತು ಪರಿಹಾರಕ್ಕೆ ಒತ್ತಾಯಿಸಿ ಮನವಿ ನೀಡಲೆಂದು ಖಲೀಲ್ ಸಾಬ್ ಅವರ ಪತ್ನಿ ಶೈನಾಜ್ ಬೇಗಂ ಕಾದು ಕುಳಿತಿದ್ದರೂ ಸಚಿವರು ಸಾಂತ್ವನ ಹೇಳದೇ ಬರ ವೀಕ್ಷಣೆಗೆ ತೆರಳಿದರು.

ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ನಡೆದಿರುವ ಲಾಕಪ್ ಡೆತ್ ಪ್ರಕರಣದಲ್ಲಿ ಮೃತರಾಗಿರುವ ಖಲೀಲ್ ಸಾಬ್ ಅವರ ಪತ್ನಿ ಶೈನಾಜ್ ಬೇಗಂ ಬರ ವೀಕ್ಷಣೆಗೆಂದು ತೆರಳುತ್ತಿದ್ದ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಪ್ರಕರಣದ ತನಿಖೆ ಮತ್ತು ಪರಿಹಾರಕ್ಕೆ ಒತ್ತಾಯಿಸಿ ಮನವಿ ನೀಡಲೆಂದು ಕಾದು ಕುಳಿತಿದ್ದರೂ ಸಚಿವರು ಕಾರಿನಿಂದ ಇಳಿಯದೇ, ಕನಿಷ್ಠ ಸಾಂತ್ವನ ಹೇಳದೇ ಬರ ವೀಕ್ಷಣೆಗೆ ತೆರಳಿದ ಘಟನೆಗೆ ಪಟ್ಟಣದ ಬೈಪಾಸ್ ವೃತ್ತ ಶುಕ್ರವಾರ ಸಾಕ್ಷಿಯಾಯಿತು.

ಸಚಿವರು ಪಟ್ಟಣದ ಮೂಲಕವೇ ಬರ ಪರಿಶೀಲನೆಗೆ ತೆರಳುತ್ತಿದ್ದ ವೇಳೆ ಪಟ್ಟಣದ ಅಸಂಖ್ಯಾತ ಮುಸ್ಲಿಂ ಸಮಾಜ ಬಾಂಧವರು, ಮೃತನ ಪತ್ನಿ ಶೈನಾಜ್ ಬೇಗಂ ಬೈಪಾಸ್ ವೃತ್ತದ ಬಳಿ ಕಾದಿದ್ದರು. ಮುಖಂಡ ನೂರ್ ಅಹಮದ್, ನಮ್ಮ ಸಮಾಜಕ್ಕೆ ನೋವಾಗುವ ಘಟನೆ ನಡೆದಿದೆ. ಸರ್ಕಾರಕ್ಕೂ ಇದೊಂದು ಕಪ್ಪುಚುಕ್ಕೆ. ಸಂತ್ರಸ್ತೆ ಇಲ್ಲಿಯೇ ನಿಮಗೆ ಮನವಿ ಕೊಡಲು ಕೂಡಾ ಮಧ್ಯಾಹ್ನದಿಂದಲೇ ಕಾದಿದ್ದಾರೆ. ನೀವು ಸಾಂತ್ವನ ಹೇಳಿ ಕುಟುಂಬಕ್ಕೆ ಧೈರ್ಯ ಹೇಳಬೇಕು ಎಂದು ಕೋರಿದರು.

ಈಗಾಗಲೇ ಪ್ರಕರಣದ ತನಿಖೆ ನಡೆಯುತ್ತಿದೆ. ಸರ್ಕಾರದ ಭಾಗವಾಗಿರುವ ನಾನು ತನಿಖೆಯ ಸಂದರ್ಭದಲ್ಲಿ ಸಂತ್ರಸ್ತೆಯ ನಿವಾಸಕ್ಕೆ ತೆರಳುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರಲ್ಲದೇ, ಪ್ರಕರಣ ಕುರಿತಂತೆ ಜಿಲ್ಲಾ ಸಚಿವರಾಗಿ ಸಮಗ್ರ ಮಾಹಿತಿ ಪಡೆದಿದ್ದು, ಮೃತ ಖಲೀಲ್ ಸಾಬ್ ಕುಟುಂಬಕ್ಕೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಚಿವರು ತಿಳಿಸಿದರು.

ಇದೇ ಆ. 15ರಂದು ಧ್ವಜಾರೋಹಣಕ್ಕೆ ಬಂದಾಗ ಸಾಂತ್ವನ ಹೇಳುತ್ತೇನೆ ಎಂದು ಭರವಸೆ ನೀಡಿದರು. ಪುರಸಭೆ ಸದಸ್ಯ ನೆಲ್ಲು ಇಸ್ಮಾಯಿಲ್ ಹಾಗೂ ನ್ಯಾಯಬೆಲೆ ಅಂಗಡಿ ಇಸ್ಮಾಯಿಲ್, ಟಿ. ಖಾಸೀಂಸಾಬ್, ಇಮ್ತಿಯಾಜ್ ಸೇರಿದಂತೆ ಅಸಂಖ್ಯಾತ ಮುಸ್ಲಿಂ ಸಮಾಜ ಬಾಂಧವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿತವಾದದ್ದೇ ಪ್ರಿಯವಾದರೆ ದೇಹಕ್ಕೂ ಮನಸ್ಸಿಗೂ ಹಿತ: ರಾಘವೇಶ್ವರ ಶ್ರೀ
ಅನಾಹುತ ಸಂಭವಿಸಿದಲ್ಲಿ ಅರಣ್ಯಾಧಿಕಾರಿಗಳ ವಿರುದ್ಧ ಎಫ್‌ಐಆರ್: ಸುನಿಲ್ ಕುಮಾರ್