ವಿಚ್ಛೇದನ ಬಯಸಿದ್ದವರನ್ನು ಒಂದುಗೂಡಿಸಿದ ಲೋಕ ಅದಾಲತ್

KannadaprabhaNewsNetwork |  
Published : Mar 10, 2025, 12:18 AM IST
ದೊಡ್ಡಬಳ್ಳಾಪುರದ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ವಿಚ್ಛೇದನ ಬಯಸಿದ್ದ ದಂಪತಿಯನ್ನು ಒಂದುಗೂಡಿಸುವ ಪ್ರಕ್ರಿಯೆ ಯಶಸ್ವಿಯಾಗಿದ್ದು, ದಾಂಪತ್ಯ ಮುಂದುವರೆಸುವ ಸಂಕಲ್ಪ ಕೈಗೊಂಡರು. | Kannada Prabha

ಸಾರಾಂಶ

ಆ‌ರ್.ನಾಗಮಣಿ ಹಾಗೂ ಎನ್.ಹನುಮಂತರಾಜು-2018ರಲ್ಲಿ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದರು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ದಾಂಪತ್ಯ ಜೀವನದಲ್ಲಿ ಮೂಡಿದ ವೈಮನಸ್ಯದಿಂದ ವಿಚ್ಛೇದನ ಪಡೆಯಲು ನ್ಯಾಯಾಲಯದ ಮೆಟ್ಟಿಲೇರಿದ್ದ ದಂಪತಿ ಲೋಕ ಅದಾಲತ್‌ ಮೂಲಕ ಪರಸ್ಪರ ಅರಿತು ಬಾಳುವ ಸಂಕಲ್ಪದೊಂದಿಗೆ ದಾಂಪತ್ಯವನ್ನು ಮುಂದುವರೆಸುವ ನಿರ್ಧಾರಕ್ಕೆ ಬಂದಿದ್ದಾರೆ.

ವಿಚ್ಛೇದನಕ್ಕೆ ಮುಂದಾಗಿದ್ದ ದಂಪತಿಯನ್ನು ಒಂದು ವರ್ಷ ನಂತರ ಮತ್ತೆ ಒಂದುಗೂಡಿಸಿದ ಪ್ರಕರಣ, ಇಲ್ಲಿನ ನ್ಯಾಯಾಲಯ ಸಂಕೀರ್ಣದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜೆಎಂಎಫ್‌ಸಿ ಪ್ರವೀಣ್ ಆರ್.ಜೆ.ಎಸ್ ಅವರ ಸಮ್ಮುಖದಲ್ಲಿ ಸಾಕಾರಗೊಂಡಿದೆ.

ಆ‌ರ್.ನಾಗಮಣಿ ಹಾಗೂ ಎನ್.ಹನುಮಂತರಾಜು-2018ರಲ್ಲಿ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದರು. ತಾಲೂಕಿನ ದೊಡ್ಡಬೆಳವಂಗಲ ಗ್ರಾಮದ ಹನುಮಂತರಾಜು ಮತ್ತು ನಾಗಮಣಿ ಕೌಟುಂಬಿಕ ಕಲಹದಿಂದ 2024ರಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಶನಿವಾರ ನಡೆದ ಜನತಾ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆಯನ್ನು ನಡೆಸಿದ ನ್ಯಾಯಾಧೀಶರಾದ ಪ್ರವೀಣ್ ಆರ್.ಜೆ ಅವರು, ದಂಪತಿ ಹಾಗೂ ಅವರ ಸಂಬಂಧಿಕರು ಮತ್ತು ವಕೀಲರೊಂದಿಗೆ ಸಮಾಲೋಚಿಸಿ ಸಂಧಾನ ನಡೆಸಿದರು. ಬಳಿಕ, ದಂಪತಿ ವಿಚ್ಚೇದನಕ್ಕೆ ನೀಡಿದ ಅರ್ಜಿ ಹಿಂಪಡೆದು ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸುವುದಾಗಿ ಒಪ್ಪಿದ ಕಾರಣ ನ್ಯಾಯಾಧೀಶರು ನ್ಯಾಯಾಲಯದ ಕೊಠಡಿಯಲ್ಲೇ ದಂಪತಿ ಹಾರ ಬದಲಾಯಿಸಿಕೊಳ್ಳುವ ಅವಕಾಶ ನೀಡಿ ಒಂದುಗೂಡಿಸಿದರು.

ನ್ಯಾಯಾಧೀಶ ಪ್ರವೀಣ್ ಮಾತನಾಡಿ, ಇತ್ತೀಚಿನ ದಿನದಲ್ಲಿ ಕೌಟುಂಬಿಕ ಕಲಹ ಹೆಚ್ಚಾಗುತ್ತಿದೆ. ವಿಚ್ಚೇದನ ಪಡೆಯುವ ಸಂಖ್ಯೆಯೂ ಅಧಿಕವಾಗುತ್ತಿರುವುದು ಬೇಸರದ ಸಂಗತಿ. ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಬೇಕಾದರೆ ಶಾಂತಿ, ಪರಸ್ಪರ ಹೊಂದಾಣಿಕೆ ಅತ್ಯವಶ್ಯಕ ಎಂದರು.

ಪುಟ್ಟ ವ್ಯಾಜ್ಯದಿಂದ ಮನಸ್ಸನ್ನು ಕೆಡಿಸಿಕೊಳ್ಳುವ ಬದಲು ಎಲ್ಲರೂ ಹೊಂದಾಣಿಕೆಯ ಜೀವನ ನಡೆಸಿದರೆ ಇಂತಹ ಘಟನೆಗಳು ನಡೆಯುವುದಿಲ್ಲ, ವಿಚ್ಛೇದನಕ್ಕೆ ಮುಂದಾಗಿರುವ ದಂಪತಿಗೆ ಈ ಪ್ರಕರಣ ಒಂದು ಮಾರ್ಗದರ್ಶನವಾಗಿದೆ ಎಂದು ತಿಳಿಸಿದರು.

ಸುಮಾರು ಆರು ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿ- 2024ರಲ್ಲಿ ವಿಚ್ಚೇದನ ಬೇಕೆಂದು ಅರ್ಜಿ ಸಲ್ಲಿಸಿದ್ದರು. ಈ ದಂಪತಿ ಗಂಡು ಮಗು ಇದೆ. ಆ ಮಗುವಿನ ಭವಿಷ್ಯದ ಹಿತದೃಷ್ಟಿಯಿಂದ, ಈ ದಂಪತಿಯನ್ನು ಒಂದು ಮಾಡಲು ತೀರ್ಮಾನಿಸಿ ಲೋಕ್ ಅದಾಲತ್‌ನಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ಸಂಧಾನ ನಡೆಸಿ, ಜೊತೆಗೂಡಿಸಲಾಗಿದೆ ಎಂದು ಮಹಿಳಾ ಪರ ವಕೀಲ ವೆಂಕಟಾಚಲಪತಿ ತಿಳಿಸಿದರು.

ಈ ವೇಳೆ ದೊಡ್ಡಬಳ್ಳಾಪುರ 4ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಮೇಶ್ ದುರುಗಪ್ಪ ಏಕಬೋಟೆ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್‌ಸಿ, ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಶಿಲ್ಪಾ ಎಚ್.ಎ, 2ನೇ ಅಪರ ಸಿವಿಲ್ ನ್ಯಾಯಾಧೀಶ, ಜೆಎಂಎಫ್‌ಸಿ ರವಿ ಬೆಟಗಾರ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ರವಿ ಮಾವಿನಕುಂಟೆ, ಉಪಾಧ್ಯಕ್ಷ ಎಂ. ಆರ್. ಸುರೇಶ್, ಕಾರ್ಯದರ್ಶಿ ಎ. ಕೃಷ್ಣಮೂರ್ತಿ ಸೇರಿದಂತೆ ಇತರರಿದ್ದರು.ಫೋಟೋ-

9ಕೆಡಿಬಿಪಿ1- ದೊಡ್ಡಬಳ್ಳಾಪುರದ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ವಿಚ್ಛೇದನ ಬಯಸಿದ್ದ ದಂಪತಿಯನ್ನು ಒಂದುಗೂಡಿಸುವ ಪ್ರಕ್ರಿಯೆ ಯಶಸ್ವಿಯಾಗಿದ್ದು, ದಾಂಪತ್ಯ ಮುಂದುವರೆಸುವ ಸಂಕಲ್ಪ ಕೈಗೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''