ಹೊನ್ನಾಳಿ ಕೋರ್ಟ್‌ನಲ್ಲಿ ಹೇಳಿಕೆ । ಕಾನೂನು ಸಮಿತಿಯಿಂದ ಮಾ.8ಕ್ಕೆ ಬೃಹತ್ ಅದಾಲತ್
ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ಲೋಕ್ ಅದಾಲತ್‌ನಲ್ಲಿ ಇತ್ಯರ್ಥ ಮಾಡಿಕೊಂಡರೆ ಸಮಾಜದಲ್ಲಿ ಶಾಂತಿ ಲಭಿಸುವುದು. ಇದರೊಂದಿಗೆ ಕುಟುಂಬಗಳಿಗೆ ವೈಯಕ್ತಿಕ ಲಾಭವೂ ಸಾಧ್ಯ. ಅಲ್ಲದೇ, ಶೀಘ್ರ ನ್ಯಾಯದಾನಕ್ಕೆ ಉತ್ತಮ ವೇದಿಕೆಯಾಗಿದೆ ಎಂದು ಜಿಲ್ಲಾ ಹಿರಿಯ ನ್ಯಾಯಾಧೀಶ ಮತ್ತು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಮಹಾವೀರ ಎಂ. ಕರೆಣ್ಣವರ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ ಹಾಗೂ ಪೊಲೀಸ್ ಇಲಾಖೆ ಆಶ್ರಯದಲ್ಲಿ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮಾರ್ಚ್ 8ರಂದು ನಡೆಯುವ ಬೃಹತ್ ಲೋಕ ಅದಾಲತ್ ಸಂಬಂಧ ಹಮ್ಮಿಕೊಂಡಿದ್ದ ಲೋಕ ಅದಾಲತ್ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಒಂದು ಕಾಲದಲ್ಲಿ ಗ್ರಾಮದ ಹಿರಿಯ ಮುಖಂಡರ ಸಮ್ಮಖ ಪಂಚಾಯಿತಿ ಕಟ್ಟೆಗಳಲ್ಲಿಯೇ ಬಹುತೇಕ ವ್ಯಾಜ್ಯಗಳು ಇತ್ಯರ್ಥವಾಗಿ ಹಳ್ಳಿಗಳಲ್ಲಿ ಆರೋಗ್ಯ ವಾತಾವರಣ ನಿರ್ಮಾಣವಾಗುತ್ತಿತ್ತು. ಕಾಲ ಬದಲಾದಂತೆ ಪಂಚಾಯಿತಿ ಕಟ್ಟೆಗಳ ಸಭೆಗಳು ಕಣ್ಮರೆಯಾಗಿವೆ. ಎಲ್ಲ ದೂರುಗಳು, ಪ್ರಕರಣಗಳು ನ್ಯಾಯಾಲಯಕ್ಕೇ ಬಂದು ಹೆಚ್ಚಿನ ಒತ್ತಡ ನಿರ್ಮಾಣವಾಗಿದೆ ಎಂದರು.
ಲೋಕ್ ಅದಾಲತ್‌ನಲ್ಲಿ ಪ್ರಕರಣಗಳನ್ನು ಬಗೆಹರಿಸಿಕೊಂಡರೆ ಸಮಯ ಹಾಗೂ ಹಣದ ಉಳಿತಾಯವಾಗುತ್ತದೆ. ಕಾನೂನಿಗೆ ಎಲ್ಲರೂ ಗೌರವ ಕೊಡಬೇಕು. ಸರಳತೆ ಹಾಗೂ ಸೌಜನ್ಯದಿಂದ ವರ್ತಿಸಿ ಪ್ರಕರಣಗಳನ್ನು ಮುಗಿಸಿಕೊಳ್ಳುವ ಗುಣ ಬರಬೇಕಿದೆ ಎಂದು ತಿಳಿಸಿದರು.
ಜಮೀನು, ನಿವೇಶನ, ಮನೆಗಳ ಗಡಿಗಳ ಗುರ್ತಿಸಿಕೊಳ್ಳುವ ಸಂದರ್ಭ ಅಣ್ಣ, ತಮ್ಮಂದಿರರಲ್ಲಿ ಹೊಂದಾಣಿಕೆ ಮುಖ್ಯ. ಅನವಶ್ಯಕವಾಗಿ ಕೋರ್ಟ್ ಕಟ್ಟೆ ಹತ್ತಿದರೆ ಮಾನಸಿಕ ಕಿರಿಕಿರಿ ಉಂಟಾಗಿ ಬಹುದೊಡ್ಡ ಅವಘಡಗಳು ಜರುಗುತ್ತವೆ. ಇದಕ್ಕೆ ಅವಕಾಶ ಕೊಡಬಾರದು ಎಂದು ಸಲಹೆ ನೀಡಿದರು.