ಕನ್ನಡಪ್ರಭ ವಾರ್ತೆ ಆಳಂದ
ಈ ಲೋಕ ಅದಾಲತ್‌ನಲ್ಲಿ ಹೆಚ್ಚಾಗಿ ಭೂಸಾಸ್ವಾಧೀನ ಪ್ರಕರಣ, ಬ್ಯಾಂಕ್ ಪ್ರಕರಣ, ಮೋಟಾರ್ ವಾಹನ ಅಪಘಾತ ಪ್ರಕರಣ ಸಂಬಂಧಿಸಿದ ಪ್ರಕರಣ, ವೈಹಿವಾಹಿಕ ಪ್ರಕರಣ, ರಾಜಿಯಾಗಬಲ್ಲ ಕ್ರಿಮೀನಲ್ ಮತ್ತು ಸಿವಿಲ್ ಪ್ರಕರಣ, 138 ಎನ್‍ಐ ಕಾಯ್ದೆ ಪ್ರಕರಣ ಹಾಗೂ ಜನನ ಮತ್ತು ಮರಣ ನೋಂದಣಿ ಪ್ರಕರಣ, ವಿವಾಹ ವಿಚ್ಛೇಧನ ಮತ್ತು ಪೊಲೀಸ್ ದಂಡ ಹೀಗೆ ಮೂರು ಕೋರ್ಟ್‍ನಲ್ಲಿ ಹಿರಿಯ ಮತ್ತು ಕಿರಿಯ ನ್ಯಾಯಾಧೀಶರು ಸೇರಿ ಪ್ರತ್ಯೇಕವಾಗಿ ಪ್ರಕರಣ ರಾಜಿಗೊಳಿಸಿದರು.
ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ಎಸ್.ಎಂ. ಅರುಟಗಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತನಲ್ಲಿ ರಾಜಿಸಂಧಾನ ಮೂಲಕ ಕಕ್ಷಿದಾರರ ಹಲವು ಬಾಕಿ ಪ್ರಕರಣಗಳನ್ನು ಸ್ಥಳದಲ್ಲೇ ಇತ್ಯರ್ಥಗೊಳಿಸಿದರು. ರಾಜಿಯಾಗಬಲ್ಲ ಕ್ರಿಮಿನಲ್ ಪ್ರಕರಣದಲ್ಲಿ ಹೀಗೆ ಎಲ್ಲಾ ರೀತಿಯ ಸಿವಿಲ್ ಮತ್ತು ಕ್ರಿಮಿನಲ್ ಸ್ವೂಪದ ಪ್ರಕರಣ ಒಳಗೊಂಡು ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ 269 ಪ್ರಕರಣಗಳಲ್ಲಿ 58 ಪ್ರಕರಣಗಳು ಸ್ಥಳದಲ್ಲೇ ಇತ್ಯರ್ಥಪಡಿಸಿದರು.ಇದೇ ವೇಳೆ ಮಾತನಾಡಿದ ನ್ಯಾಯಾಧೀಶ ಎಸ್.ಎಂ. ಅರುಟಗಿ ಅವರು, ಕಾನೂನು ಅರಿವಿಲ್ಲದೆ ಮತ್ತು ತಪ್ಪ ತಿಳಿವಳಿಕೆಯಿಂದ ಆದ ಪ್ರಮಾದಿಂದ ಕೋರ್ಟ್ ಕಟ್ಟೆ ಹತ್ತಿ ಸಮಯ ಹಾಗೂ ಹಣ ವ್ಯರ್ಥವಾಗುವುದನ್ನು ತಪ್ಪಿಸಲು ಲೋಕ ಅದಾಲತ್‍ನಲ್ಲಿ ಕಕ್ಷಿದಾರರಿಗೆ ರಾಜೀಸಂಧಾನ ಮೂಲಕ ಪ್ರಕರಣ ಇತ್ಯರ್ಥಪಡಿಸಲು ಇರುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಲ್ಲದೆ, ಹೆಚ್ಚುವರಿ ಕಿರಿಯ ಶ್ರೇಣಿ ನ್ಯಾಯಾಲಯದ ಪ್ರಧಾನ ಹಾಗೂ ಕಿರಿಯ ಹೆಚ್ಚುವರಿ ಶ್ರೇಣಿ ಪ್ರಭಾರ ನ್ಯಾಯಾಧೀಶರಾದ ಎಸ್.ಎಂ. ಅರುಟಗಿ ಅವರು 1493 ಪ್ರಕರಣ ಕೈಗೆತ್ತಿಕೊಂಡು 1350 ಪ್ರಕರಣವನ್ನು ಇತ್ಯರ್ಥ ಪಡಿಸಿದರು. ಹಿರಿಯ ಶ್ರೇಣಿ, ಕಿರಿಯ ಶ್ರೇಣಿ ಮತ್ತು ಹೆಚ್ಚುವರಿ ನ್ಯಾಯಾಲಯದ ಒಟ್ಟು 3659 ಪ್ರಕರಳಲ್ಲಿ 3114 ಇತ್ಯರ್ಥಗೊಳಿಸಿದ್ದಾರೆ.