ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರೋಣ ವಾಸುದೇವ ಅವರ ನೇತೃತ್ವದಲ್ಲಿ ಮೆಗಾ ಲೋಕ ಅದಾಲತ್ ನಡೆಸಲಾಯಿತು.
ಜಿಲ್ಲೆಯಲ್ಲಿನ 9 ಕೌಟುಂಬಿಕ ಪ್ರಕರಣಗಳಲ್ಲಿನ ವಿವಾದಗಳನ್ನು ಬಗೆಹರಿಸಿ ದೂರ-ದೂರ ಇದ್ದ ಪತಿ-ಪತ್ನಿಯನ್ನು ಒಂದು ಮಾಡಿ ಒಟ್ಟಿಗೆ ಜೀವನ ಮಾಡುವಂತೆ ಸಂಧಾನ ಮಾಡಲಾಯಿತು. ಈ ಲೋಕ ಅದಾಲತ್‍ನಲ್ಲಿ ಚಾಲ್ತಿಯಲ್ಲಿರುವ ಒಟ್ಟು 4,913 ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದು, ಅವುಗಳ ಪೈಕಿ 3,840 ಪ್ರಕರಣಗಳು ರಾಜಿಯಾಗಿವೆ. ಅವುಗಳಲ್ಲದೇ ವ್ಯಾಜ್ಯ ಪೂರ್ವ 75,637 ಪ್ರಕರಣಗಳು ರಾಜಿಯಾಗಿರುತ್ತವೆ. ವಿಶೇಷವಾಗಿ ಚೆಕ್ ಅಮಾನ್ಯದ ಪ್ರಕರಣ ಸೇರಿ ಒಟ್ಟು 168, ರಾಜಿಯಾಗುವ ಅಪರಾಧಿಕ ಪ್ರಕರಣ 48, ಬ್ಯಾಂಕ್ ವಸೂಲಾತಿ ಪ್ರಕರಣಗಳು 57, ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣ 80, ಆಸ್ತಿ ಭಾಗದ ಪ್ರಕರಣ 47, ಅಮಲ್‍ಜಾರಿ ಪ್ರಕರಣಗಳು 116, ಜನನ ನೋಂದಣಿ ಪ್ರಕರಣಗಳು 595 ಸೇರಿದಂತೆ ರಾಜಿ ಸಂಧಾನದ ಮುಖಾಂತರ ತಮ್ಮ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಂಡಿದ್ದಾರೆ.ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ತೆಗೆದುಕೊಳ್ಳಲಾಗಿದೆ. ಇದರಲ್ಲಿ ರಾಜಿಯಾಗಬಲ್ಲ ಅಪರಾಧಿಕ ಪ್ರಕರಣ, ಮೋಟಾರು ವಾಹನ ಅಪಘಾತ ಪರಿಹಾರ, ಕಂದಾಯ ಪ್ರಕರಣ, ಚೆಕ್ ಬೌನ್ಸ್, ಬ್ಯಾಂಕ್ ವಸೂಲಾತಿ, ವಿದ್ಯುತ್ ಹಾಗೂ ನೀರಿನ ಶುಲ್ಕ ಪ್ರಕರಣಗಳು, ಕೌಟುಂಬಿಕ ಕಲಹ, ಬಾಡಿಗೆ ಅನುಭೋಗದ ಹಕ್ಕು ಹಾಗೂ ಭೂ ಪರಿಹಾರ ಕೇಸುಗಳು ಸೇರಿ ಹಲವು ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಅನೇಕ ಪ್ರಕರಣಗಳು ಇತ್ಯರ್ಥಗೊಂಡವು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ತಿಳಿಸಿದರು.