ಸಚಿವ ಕೆ. ವೆಂಕಟೇಶ್ ರಿಂದ ಅಧಿಕಾರ ದುರ್ಬಳಕೆ: ಮಾಜಿ ಶಾಸಕ ಕೆ. ಮಹದೇವ್ ಆರೋಪ

KannadaprabhaNewsNetwork |  
Published : Dec 16, 2025, 01:00 AM IST
51 | Kannada Prabha

ಸಾರಾಂಶ

ತಾಲೂಕಿನಲ್ಲಿ 50ಕ್ಕೂ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘಗಳ ಆಡಳಿತಾವಧಿ ಮೀರಿದ್ದರೂ ಸಕಾಲದಲ್ಲಿ ಚುನಾವಣೆ ನಡೆಸದೆ ಆಡಳಿತಾಧಿಕಾರಿ ನೇಮಿಸುವ ಮೂಲಕ ಸಹಕಾರ ಕ್ಷೇತ್ರದ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ .

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ

ಸಚಿವ ಕೆ. ವೆಂಕಟೇಶ್ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ತಾಲೂಕಿನಲ್ಲಿ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳು ಪ್ರಾಬಲ್ಯವಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಆಡಳಿತ ಅಧಿಕಾರಿಗಳನ್ನು ನೇಮಕ ಮಾಡುವ ಮೂಲಕ ಸಹಕಾರ ಕ್ಷೇತ್ರದ ಆಡಳಿತವನ್ನು ತನ್ನ ಬಳಿ ಇಟ್ಟುಕೊಳ್ಳುವ ಸಂಚು ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ. ಮಹದೇವ್ ಆರೋಪಿಸಿದರು.

ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ತಾಲೂಕು ಜೆಡಿಎಸ್‌ ಘಟಕದ ವತಿಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳು ಆಡಳಿತ ಹೊಂದಿರುವ ಸಹಕಾರ ಸಂಘಗಳನ್ನು ಸೂಪರ್ ಸೀಡ್ ಮಾಡಿಸಿ ಆಡಳಿತಾಧಿಕಾರಿಗಳನ್ನು ನೇಮಿಸುವುದು. ಅವಧಿ ಮುಗಿದಿರುವ ಸಹಕಾರ ಸಂಘಗಳಿಗೆ ಚುನಾವಣೆ ನಡೆಸದಿರುವುದು, ಆಯಕಟ್ಟಿನ ಜಾಗಗಳಲ್ಲಿ ಭ್ರಷ್ಟರನ್ನು ತಂದು ಕೂರಿಸುವುದು ಸೇರಿದಂತೆ ಸರ್ವಾಧಿಕಾರಿ ವರ್ತನೆ ತೋರುತ್ತಿರುವ ಸಚಿವ ಕೆ. ವೆಂಕಟೇಶ್ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಖಂಡನೀಯ ಎಂದರು.

ಮುಂದಿನ ದಿನಗಳಲ್ಲಿ ಜೆಡಿಎಸ್‌ ಕಾರ್ಯಕರ್ತರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಿಜೆಪಿ ವಿರುದ್ಧ ರಾಷ್ಟ್ರದಾದ್ಯಂತ ಕಾಂಗ್ರೆಸ್ ನಡೆಸುತ್ತಿರುವ ಮತ ಚೋರಿ ಅಭಿಯಾನ ಹಾಸ್ಯಾಸ್ಪದವಾಗಿದ್ದು ಸಚಿವ ಕೆ. ವೆಂಕಟೇಶ್ ನಮ್ಮ ತಾಲೂಕಿನಲ್ಲಿನ ವಿವಿಧ ಸಹಕಾರ ಸಂಘಗಳಲ್ಲಿ ಅನಧಿಕೃತವಾಗಿ ಮತದಾರರನ್ನು ಸೇರ್ಪಡೆಗೊಳಿಸುವ ಮೂಲಕ ಮತ ಚೋರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ತಾಲೂಕಿನಲ್ಲಿ 50ಕ್ಕೂ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘಗಳ ಆಡಳಿತಾವಧಿ ಮೀರಿದ್ದರೂ ಸಕಾಲದಲ್ಲಿ ಚುನಾವಣೆ ನಡೆಸದೆ ಆಡಳಿತಾಧಿಕಾರಿ ನೇಮಿಸುವ ಮೂಲಕ ಸಹಕಾರ ಕ್ಷೇತ್ರದ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ದೂರಿದರು.

ಪ್ರತಿ ಗ್ರಾಪಂ ಒಂದು ಪಿಎಸಿಸಿಎಸ್‌ ಇರಬೇಕು ಎಂಬ ಕೇಂದ್ರ ಸರ್ಕಾರದ ನಿರ್ದೇಶನದಂತೆ ತಾಲೂಕಿನಲ್ಲಿ ಹೊಸದಾಗಿ 7 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಸ್ಥಾಪಿಸಲಾಗುತ್ತಿದ್ದು, ಎಲ್ಲೆಲ್ಲಿ ಜೆಡಿಎಸ್‌ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿ ಅಧಿಕಾರ ಹಿಡಿಯುತ್ತಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಇವೆಯೋ ಅವುಗಳನ್ನು ಉದ್ದೇಶಪೂರ್ವಕವಾಗಿ ಒಡೆದು ಹೊಸದಾಗಿ ಸಹಕಾರ ಸಂಘಗಳನ್ನು ಸ್ಥಾಪಿಸುವ ಮೂಲಕ ರೈತರ ಮೇಲೆ ಮತ್ತು ಷೇರುದಾರರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ದೂರಿದರು.

ಚಪ್ಪರದಹಳ್ಳಿ, ಕಸಬಾ, ಆಲನಹಳ್ಳಿ, ಚಿಕ್ಕನೇರಳೆ, ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು ತಮ್ಮ ವ್ಯಾಪ್ತಿಯಲ್ಲಿ ನಡೆಯುತ್ತಿರುವ ದಬ್ಬಾಳಿಕೆ ಬಗ್ಗೆ ನೋವು ತೊಡಿಕೊಂಡರು.

ಈ ವೇಳೆ ತಾಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಜೆಡಿಎಸ್ ಕಾನೂನು ಸಲಹೆಗಾರ ವಕೀಲ ಜೆ.ಎಸ್‌. ನಾಗರಾಜ್, ಮುಖಂಡರಾದ ರಾಜೇಗೌಡ, ಬಿ.ಆರ್. ಸತೀಶ್‌, ಪಿ.ಸಿ. ಕೃಷ್ಣ, ಪಿ.ಕೆ. ಕುಮಾ‌ರ್, ಮಂಜುನಾಥ್ ಸಿಂಗ್, ನಿರಂಜನ್, ಎ.ಆರ್. ನವೀನ್, ಸುರೇಶ್, ರವಿ, ಬಸವರಾಜು, ಮುತ್ತುರಾಜು, ನಂಜೇಗೌಡ, ಮುಕುಂದಚಾರಿ ವಿವಿಧ ಗ್ರಾಮದ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!